ಉತ್ತರ ಕನ್ನಡ

ಕುಮಟಾ : ಪ್ರಮುಖ ಕಡಲತೀರಗಳಲ್ಲಿ ಒಂದು ತಿಂಗಳು ನಿಷೇಧಾಜ್ಞೆ

ಕಾರವಾರ : ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ತಾಲೂಕಿನ ಪ್ರಸಿದ್ದ ಪ್ರಮುಖ ಕಡಲ ತೀರಗಳಲ್ಲಿ ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ,ಮೀನುಗಾರಿಕೆಗೆ ಹೊರತುಪಡಿಸಿ ಉಳಿದ ಚಟುವಟಿಕೆಗಳನ್ನು ಅಕ್ಟೋಬರ್‌ 9ರವರೆಗೆ ಸಂಪೂರ್ಣ ಸ್ಥಗಿತಗೊಳಿಸಬೇಕು ಎಂದು ಕುಮಟಾ ತಹಶೀಲ್ದಾರ ವಿವೇಕ ಶೇಣ್ವಿ ಆದೇಶಿಸಿದ್ದಾರೆ.

ಅವರು ಈ ಕುರಿತು ಪ್ರಕಟಣೆ ನೀಡಿ, ಕುಮಟಾ ಪೊಲೀಸ್ ಠಾಣೆ ವ್ಯಾಪ್ತಿಯ ಬಾಡ, ಗುಡೇಅಂಗಡಿ,ಕಾಗಾಲ, ಅಘನಾಶಿನಿ, ಧಾರೇಶ್ವರ ಹಾಗೂ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ಓಂ ಬೀಚ್, ಕುಡ್ಲೆ ಬೀಚ್, ಮೇನ್ ಬೀಚ್ ಮತ್ತು ಹಾಪ್ ಮೂನ್ ಬೀಚ್‌ಗಳು ಆಕರ್ಷಣೀಯ ಪ್ರವಾಸಿ ತಾಣಗಳಾಗಿದ್ದು, ದಿನಂಪ್ರತಿ ಸಾವಿರಾರು ಪ್ರವಾಸಿಗರು ಆಗಮಿಸಿ,ಕಡಲ ಸೌಂದರ್ಯಗಳನ್ನು ಸವಿಯುತ್ತಾರೆ.ಹೀಗೆ ಬಂದವರಲ್ಲಿ ಕೆಲ ಪ್ರವಾಸಿಗರು ಆಕಸ್ಮಿಕವಾಗಿ ಸಮುದ್ರ ಅಲೆಗೆ ಸಿಲುಕಿ ಅಥವಾ ಈಜಲು ಸಮುದ್ರದಲ್ಲಿ ಇಳಿದು ಅಲೆಯ ಸೆಳೆತಕ್ಕೆ ಪ್ರಾಣ ಕಳೆದುಕೊಳ್ಳುತ್ತಿರುವುದು ಪೊಲೀಸ್ ಇಲಾಖಾ ವರದಿಯಿಂದ ತಿಳಿದು ಬಂದಿದೆ.

ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 2010 ನೇ ಸಾಲಿನಿಂದ ಈವರೆಗೂ ಬೀಚ್‌ಗಳಲ್ಲಿ ಈಜಲು ಹೋಗಿ ಹಾಗೂ ಆಕಸ್ಮಿಕ ಸಮುದ್ರದ ಅಲೆ ಅಪ್ಪಳಿಸಿ ಮುಳುಗಿ ಮೃತಪಟ್ಟ ಪ್ರಕರಣಗಳ ಅಂಕಿ – ಅಂಶದ ಮಾಹಿತಿಯಂತೆ 2020 ಡಿಸೆಂಬರವರೆಗೆ ಸುಮಾರು 67 ಮತ್ತು 2021 ಜನವರಿಯಿಂದ ಈವರೆಗೆ ಸುಮಾರು 9 ಜನರು ಸಮುದ್ರದಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆಂದು ತಿಳಿಸಿದ್ದಾರೆ.

ಇವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು ಎಂಬುದು ಕಳವಳಕಾರಿ ಸಂಗತಿಯಾಗಿದೆ. ತಾಲೂಕಿನ ಬೀಚ್‌ಗಳಲ್ಲಿ ಘಟಿಸಿದ ಅಸಹಜ,ಅಸ್ವಾಭಾವಿಕ ದುರ್ಮರಣಗಳ ಪ್ರಕರಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರೇ ಆಗಿದ್ದಾರೆ.ಪ್ರವಾಸಕ್ಕೆಂದು ಬಂದ ಪ್ರವಾಸಿಗರು ಸಮುದ್ರದ ಉಬ್ಬರ – ಇಳಿತಗಳ ಅಲೆಯ ಕುರಿತು ತಿಳಿಯದೇ ಹಾಗೂ ಸಮುದ್ರದ ಆಳದ ಕುರಿತು ಮಾಹಿತಿ ಇರದೇ ಈಜಾಡಲು ಹೋಗಿ ಸಮುದ್ರದ ಅಲೆಯ ಸೆಳೆತಕ್ಕೆ ಸಿಲುಕಿ ಮುಳುಗಿ ಸಾವನ್ನಪ್ಪುತ್ತಿದ್ದಾರೆ.

ಈ ಎಲ್ಲ ಬೀಚ್‌ಗಳಲ್ಲಿ ಮುನ್ನೆಚ್ಚರಿಕಾ ಸೂಚನಾ ಫಲಕಗಳು,ಲೈಫ್ ಗಾರ್ಡ್‌ಗಳನ್ನು ಕರ್ತವ್ಯಕ್ಕೆ ನೇಮಿಸಿದ ಅವಧಿಯಲ್ಲಿ ಅವರಿಗೆ ಅತ್ಯಾಧುನಿಕ ಜೀವರಕ್ಷಕ ಸಲಕರಣೆಗಳು ಇರದಿರುವುದು ಮತ್ತು ಲೈಫ್ ಗಾರ್ಡ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಕರ್ತವ್ಯಕ್ಕೆ ನೇಮಿಸದೇ ಇರುವುದರಿಂದ ಈ ಎಲ್ಲ ಬೀಚ್‌ಗಳಲ್ಲಿ ಕಣ್ಗಾವಲು ಇರಿಸುವುದು ಅಸಾಧ್ಯವಾಗಿದೆ.ಸಮುದ್ರದ ಕೆಲವು ಪ್ರದೇಶಗಳು ಹೆಚ್ಚು ಅಪಾಯಕಾರಿ ಸ್ಥಳವಾಗಿದ್ದು,ಅಂತಹ ಸ್ಥಳವನ್ನು ಯಾವುದೇ ಪ್ರವಾಸಿಗರು, ಸಾರ್ವಜನಿಕರು ಪ್ರವೇಶಿಸಲು ನಿರ್ಬಂಧಿತ ಸ್ಥಳವನ್ನಾಗಿ ಘೋಷಿಸಿ ಸೂಚನಾ ಫಲಕ ಅಳವಡಿಸಲಾಗುವುದಾಗಿ ತಹಶೀಲ್ದಾರ್ ವಿವೇಕ್ ಶೇಣ್ವಿ ಮಾಹಿತಿ ನೀಡಿದ್ದಾರೆ.

ಕುಮಟಾ ತಾಲೂಕಿನ ಬೀಚ್‌ಗಳಲ್ಲಿ ಘಟಿಸಿದ ಅಸಹಜ,ಅಸ್ವಾಭಾವಿಕ ದುರ್ಮರಣಗಳ ಪ್ರಕರಣಗಳ ಕುರಿತು ಸಂಬಂಧಿಸಿದ ಕಂದಾಯ ಇಲಾಖೆ, ಪೊಲೀಸ್ ಇಲಾಖೆ,ಸ್ಥಳೀಯ ಸಂಸ್ಥೆ,ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಮತ್ತು ಬೀಚ್‌ಗಳಲ್ಲಿರುವ ರೆಸಾರ್ಟ್ ಮಾಲೀಕರಿಗೆ ಪ್ರವಾಸಿಗರ ಆಕಸ್ಮಿಕ ಮರಣಗಳ ಹಾಗೂ ಅಹಿತಕರ ಘಟನೆಯನ್ನು ತಪ್ಪಿಸಲು ಸಲಹೆ,ಸೂಚನೆಯನ್ನು ಪಾಲಿಸುವ ಬಗ್ಗೆ ಸೂಕ್ತ ನಿರ್ದೇಶನ ನೀಡಲಾಗಿದೆ.ಅಲ್ಲದೇ ತಾಲೂಕಿನ ಪುರಸಭೆ ಹಾಗೂ ಗ್ರಾಮ ಪಂಚಾಯತ ಬೀಚ್‌ಗಳಾದ ಬಾಡ,ಗುಡೇಅಂಗಡಿ,ಕಾಗಾಲ, ಅಘನಾಶಿನಿ,ಧಾರೇಶ್ವರ,ಗೋಕರ್ಣದ ಓಂ ಬೀಚ್,ಕುಡ್ಲೆ ಬೀಚ್,ಮೇನ್ ಬೀಚ್ ಮತ್ತು ಹಾಪ್ ಮೂನ್ ಬೀಚ್‌ಗಳಲ್ಲಿ ಸೆ.10 ರಿಂದ ಅ.9 ರವರೆಗೆ 30 ದಿನಗಳು ದಂಡ ಪ್ರಕ್ರಿಯಾ ಸಂಹಿತೆ ಕಲಂ 144 ರಂತೆ ನಿಷೇಧಾಜ್ಞೆ ಜಾರಿಗೊಳಿಸಿರುವುದಾಗಿ ಮಾಧ್ಯಮಕ್ಕೆ ನೀಡಿದ ಪ್ರಕಟಣೆಯಲ್ಲಿ ತಹಶೀಲ್ದಾರ ವಿವೇಕ್ ಶೇಣ್ವಿ ಮಾಹಿತಿ ನೀಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button