ಸಾರ್ವಜನಿಕ ಮಹಾಗಣಪತಿ ಉತ್ಸವ: ಕೋವಿಡ್ ವಾರಿಯರ್ಸ್ಗೆ ಸನ್ಮಾನ

ಚಿಕ್ಕಮಗಳೂರು: ಕಾಫಿನಾಡಿನ ಮೂಡಿಗೆರೆಯಲ್ಲಿ ಪ್ರತೀವರ್ಷದ ಚೌತಿ ಹಬ್ಬಕ್ಕೆ ಪ್ರತಿಷ್ಠಾಪಿಸುವ ಮಹಾಗಣಪತಿ ಉತ್ಸವದಲ್ಲಿ ಈ ಬಾರಿ ಕೋವಿಡ್ ನಿಯಮಾವಳಿಯಿಂದಾಗಿ ಯಾವುದೇ ಅದ್ಧೂರಿ ಕಾರ್ಯಕ್ರಮಗಳನ್ನು ನಡೆಸದೆ ಕೊರೋನಾ ವಾರಿಯರ್ಸ್ ಸೇವೆಯಲ್ಲಿರುವವರಿಗೆ ಸನ್ಮಾನ ಮಾಡುವ ಮೂಲಕ ವಿಶೇಷವಾಗಿ, ಸರಳವಾಗಿ ಆಚರಿಸಲಾಗುತ್ತಿದೆ.
ಡಾ. ಪಿ ಎ ಅಡ್ಯಂತಾಯ ಸ್ಮಾರಕ ರಂಗಮಂದಿರದಲ್ಲಿ ಸೆ.10ರಂದು ಸಾರ್ವಜನಿಕ ಮಹಾಗಣಪತಿ ಪ್ರತಿಷ್ಠಾಪಿಸಲಾಗಿದ್ದು, ಸೆ.14ರ ಮಂಗಳವಾರ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ.
ಈ ಕುರಿತು ಸೇವಾ ಸಮಿತಿಯ ಅಧ್ಯಕ್ಷರೂ ಆದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಧರ್ಮಪಾಲ್ ಮಾತನಾಡಿ, ಈ ಬಾರಿ ಅತ್ಯಂತ ಸರಳವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಆರಕ್ಷಕ ಸಿಬ್ಬಂದಿಗಳಿಗೆ ಹಾಗೂ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯ ಪದಾಧಿಕಾರಿಗಳಿಗೆ, ಆಶಾ ಕಾರ್ಯಕರ್ತರು, ಆಸ್ಪತ್ರೆ ಸಿಬ್ಬಂದಿಗಳು, ಶೌರ್ಯ ಶ್ರೀ ಧರ್ಮಸ್ಥಳ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದವರಿಗೆ ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮಗಳ ಏರ್ಪಡಿಸಿ ವಿಭಿನ್ನವಾದ ಉತ್ಸವ ನಡೆಯುತ್ತಿದೆ ಎಂದು ತಿಳಿಸಿದರು.
ಸಮಿತಿ ಕಾರ್ಯದರ್ಶಿ ರಘು ಜನ್ನಾಪುರ, ಸಂದರ್ಶ ಹ್ಯಾರಗುಡ್ಡೆ, ಭರತ್ ಕನ್ನೇಹಳ್ಳಿ, ಆನಂದ, ಸಂಜಯ್ ಮತ್ತಿತರರು ಇದ್ದರು.




