ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶಿಕ್ಷಕನ ವಿನೂತನ ಯೋಜನೆ

ಕಾರವಾರ : ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ನುಡಿಗೆ ತಕ್ಕಂತೆ ಗ್ರಾಮೀಣ ಭಾಗದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಲು ರೂಪಿಸಿದ ವಿನೂತನ ಯೋಜನೆ ಆತ್ಮ ನಿರ್ಭರ ಬಾಲಿಕಾ.ಹೆಣ್ಣು ಮಕ್ಕಳು ತಮ್ಮ ಶಿಕ್ಷಣದ ಆರ್ಥಿಕ ಹೊರೆಯನ್ನು ತಾವೇ ಸ್ವತ: ಪೂರೈಸಿಕೊಳ್ಳಲು ಇದು ಅತ್ಯಂತ ಸಹಕಾರಿಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿಕ್ಷಕರಾದ ಪರಮೇಶ್ವರ ನಾಯ್ಕ ಅವರು ತಮ್ಮ ಮನೆಯ ಸುತ್ತಮುತ್ತಲಿನ ಮೂರನೇ ವಯಸ್ಸಿನಿಂದ ಪದವಿಯ ಹಂತದವರೆಗಿನ 13 ಹೆಣ್ಣು ಮಕ್ಕಳನ್ನು ಗುರುತಿಸಿ ಸೇರಿಸಿಕೊಂಡು 2016 ರಲ್ಲಿ ಯೋಜನೆಯನ್ನು ಆರಂಭಿಸಿದರು.ವಾರದ ರಜಾ ದಿನದಂದು ಈ ಹೆಣ್ಣುಮಕ್ಕಳು ಸಭೆ ಸೇರಿ ತಲಾ 5 ರೂಪಾಯಿಯಂತೆ ಹೂಡಿಕೆ ಮಾಡಿ ಒಟ್ಟಾದ ಹಣವನ್ನು ತಂಡದ ನಾಯಕರ ಬಳಿ ನೀಡುತ್ತಿದ್ದರು.ಚಿಕ್ಕ ಮಕ್ಕಳ ಪರವಾಗಿ ಅವರ ಪಾಲಕರು ಮತ್ತು ಪೋಷಕರು ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದರು.
ಸಭೆ ನಡೆಸಲು ರೂಪುರೇಷೆ ಹಾಗೂ ಹಣದ ವ್ಯವಹಾರದ ಬಗ್ಗೆ ದಾಖಲೆ ಇಡುವ ಕ್ರಮವನ್ನು ಶಿಕ್ಷಕರು ಅವರಿಗೆ ತಿಳಿಸಿದರು.ಹೀಗೆ ಒಟ್ಟಾದ ಹಣವನ್ನು ಹೆಣ್ಣುಮಕ್ಕಳು ತಮ್ಮ ಪಠ್ಯ ಪುಸ್ತಕ ಖರೀದಿ,ಶಾಲಾ ಶುಲ್ಕ ಬರಿಸುವುದು,ಬಸ್ ಪಾಸ್ ನಿರ್ವಹಣೆ ಹಾಗೂ ತಮ್ಮ ವೈಯಕ್ತಿಕ ನೈರ್ಮಲ್ಯ ಪಾಲನೆಗೆ ಪಡೆದುಕೊಳ್ಳುವುದು ಹಾಗೂ ಹಣ ಪಡೆದ ಸದಸ್ಯರು ತಿಂಗಳೊಳಗೆ ನಿಗದಿಪಡಿಸಿದ ಹೆಚ್ಚಿನ ಮೊತ್ತದೊಂದಿಗೆ ಸಂಘಕ್ಕೆ ಹಣವನ್ನು ಮರು ಭರಣ ಮಾಡುತ್ತಿದ್ದರು.ಹೀಗೆ ಇಲ್ಲಿಯವರೆಗೆ ಸುಮಾರು ಹದಿನೈದು ಸಾವಿರ ರೂಪಾಯಿಗಳು ಸಂಗ್ರಹವಾಗಿದ್ದು,ಇದರ ಸಹಾಯದಿಂದ ಮೂರು ವಿದ್ಯಾರ್ಥಿನಿಯರು ತಮ್ಮ ಪದವಿಯನ್ನು ಪೂರೈಸಿರುತ್ತಾರೆ.
ಇದರ ಯಶಸ್ಸಿನಿಂದ ಯೋಜನೆಯನ್ನು ಶಿಕ್ಷಕ ಪರಮೇಶ್ವರ ನಾಯ್ಕ ಅವರು ತಮ್ಮ ಶಾಲೆಯಲ್ಲಿರುವ ಎಲ್ಲಾ ಹೆಣ್ಣುಮಕ್ಕಳು ವಾಸಿಸುವ ವಿವಿಧ ಮಜಿರೆಗಳಲ್ಲಿ ಪ್ರಾರಂಭಿಸಿದರು.5 ರಿಂದ 10 ಹೆಣ್ಣು ಮಕ್ಕಳ ಗುಂಪನ್ನು ಮಾಡಿ ಅದಕ್ಕೆ ಒಬ್ಬಳು ನಾಯಕಿಯನ್ನು ನೇಮಿಸಿ ರೂಪುರೇಷೆ ತಿಳಿಸಿದರು.
ಇವರ ಈ ಕಾರ್ಯಕ್ಕೆ ಶಾಲೆಯ ಇತರೇ ಶಿಕ್ಷಕರು ಸಹ ಸಾಥ್ ನೀಡುತ್ತಿದ್ದಾರೆ.ಈ ಕಾರ್ಯಕ್ಕೆ ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ..




