ಡೆಲ್ಟಾಪ್ಲಸ್ ಭಯದಿಂದ ಗೋವಾದಲ್ಲಿ ಕಠಿಣ ರೂಲ್ಸ್: ಕೋವಿಡ್ ನೆಗೆಟಿವ್ ಇಲ್ಲದಿದ್ದರೆ ನೋ ಎಂಟ್ರಿ

ಕಾರವಾರ : ನೆರೆಯ ಮಹಾರಾಷ್ಟ್ರರಾಜ್ಯದಲ್ಲಿ ಹೆಚ್ಚುತ್ತಿರುವ ಡೆಲ್ಟಾ ಪ್ಲಸ್ ಪ್ರಕರಣದ ಆತಂಕದ ಹಿನ್ನೆಲೆಯಲ್ಲಿ ಗೋವಾ ಸರ್ಕಾರ ತನ್ನ ಗಡಿಯ ಮೂಲಕ ಬರುವವರಿಗೆ ನಿರ್ಬಂಧ ಹೇರಿದೆ.
ಹೀಗಾಗಿ ನಿತ್ಯ ಗೋವಾಗೆ ಕಾರವಾರದಿಂದ ಕೆಲಸಕ್ಕೆ ತೆರಳುವ ಕಾರ್ಮಿಕರು ಹಾಗೂ ಉದ್ಯೋಗಿಗಳು ತೊಂದರೆ ಅನುಭವಿಸಬೇಕಾಗಿದೆ.ಮಹಾರಾಷ್ಟ್ರದಲ್ಲಿ ಕೊರೋನಾ ರೂಪಾಂತರಿ ಡೆಲ್ಟಾ ಪ್ಲಸ್ ವೈರಸ್ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.ಇದು ಗಡಿ ರಾಜ್ಯಗಳಾದ ಗೋವಾ ಮತ್ತು ಕರ್ನಾಟಕಕ್ಕೆ ಸಹಜವಾಗಿ ಆತಂಕ ಸೃಷ್ಟಿಸಿದೆ.ಆದರೆ ಇದೇ ಕಾರಣಕ್ಕೆ ಇದೀಗ ಗೋವಾ ಸರ್ಕಾರ ತನ್ನ ಗಡಿಯನ್ನು ಸಂಪೂರ್ಣ ಬಂದ್ ಮಾಡಿದೆ.
ಇದರಿಂದಾಗಿ ಕರ್ನಾಟಕ ಗೋವಾ ಗಡಿ ಭಾಗವಾದ ಮಾಜಾಳಿ ಚೆಕ್ ಪೋಸ್ಟ್ ನಲ್ಲಿ ಗೋವಾ ಸರ್ಕಾರ ಸಂಪೂರ್ಣ ಬಂದ್ ಮಾಡಿದೆ.ಈ ದಿಢೀರ್ ನಿರ್ಧಾರದಿಂದಾಗಿ ಗೋವಾಗೆ ನಿತ್ಯ ಕೆಲಸಕ್ಕೆ ತೆರಳಬೇಕಿದ್ದ ನೂರಾರು ಕಾರ್ಮಿಕರು ಹಾಗೂ ವಿವಿಧ ಕಂಪನಿ ಉದ್ಯೋಗಿಗಗಳು ಕೆಲಸಕ್ಕೆ ತೆರಳಲು ಸಾಧ್ಯವಾಗದೆ ವಾಪಸ್ಸ್ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಕೊನೆಗೆ ಏಕಾಏಕಿ ತೆಗೆದುಕೊಂಡ ಈ ನಿರ್ಧಾರದಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.ಆರ್ ಟಿ ಪಿಸಿಆರ್ ಟೆಸ್ಟ್ ರಿಪೋರ್ಟ್ ಇದ್ದವರಿಗೆ ಮಾತ್ರ ಅವಕಾಶ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಆದರೆ ಇದೀಗ ಉದ್ಯೋಗಿಗಳು ನಿತ್ಯ ಆರ್ ಟಿಪಿಸಿಆರ್ ಟೆಸ್ಟ್ ಮಾಡಿಸಬೇಕಾದ ಅನಿವಾರ್ಯತೆ ಎದುರಾಗಿದ್ದು, ಸ್ಥಳೀಯರು ಹಾಗೂ ನಿತ್ಯ ಓಡಾಡುವ ಕಾರ್ಮಿಕರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.




