ಮಕ್ಕಳ ಅಶ್ಲೀಲ ವಿಡಿಯೋ ಅಪ್ಲೋಡ್; ಉತ್ತರ ಕನ್ನಡದಲ್ಲಿ 6 ಪ್ರಕರಣ ದಾಖಲು

ಕಾರವಾರ : ಮಕ್ಕಳ ಅಶ್ಲೀಲ ವಿಡಿಯೋಗಳನ್ನು ವೀಕ್ಷಣೆ ಮಾಡುವುದು ಹಾಗೂ ಅಪ್ಲೋಡ್ ಮಾಡುವವರ ವಿರುದ್ಧ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಇದೇ ಪ್ರಕರಣಗಳಿಗೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೆ 6 ಪ್ರಕರಣಗಳು ದಾಖಲಾಗಿದ್ದು,ಆರೋಪಿತರ ವಿರುದ್ಧ ತನಿಖೆಗೆ ಮುಂದಾಗಿದ್ದಾರೆ.
ಮಹಿಳೆಯರ ಮತ್ತು ಮಕ್ಕಳ ಮೇಲಿನ ಲೈಂಗಿಕ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ 2018ರಲ್ಲಿ ಮಕ್ಕಳ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದು ಹಾಗೂ ವೀಕ್ಷಣೆ ಮಾಡುವುದು ಅಪರಾಧವೆಂದು ಹೇಳಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು.ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸೈಬರ್ ಅಪರಾಧಗಳ ತಡೆಗಟ್ಟುವ ವಿಭಾಗ,ರಾಷ್ಟ್ರೀಯ ಸೈಬರ್ ಅಪರಾಧಗಳ ವರದಿ ಪೋರ್ಟಲ್ ಸೇರಿ ಒಟ್ಟು ಮೂರು ಕಣ್ಗಾವಲು ತಾಣಗಳನ್ನು ತೆರೆದಿತ್ತು.
ಕೇಂದ್ರ ತನ್ನ ಕಣ್ಗಾವಲು ತಾಣಗಳ ಮೂಲಕ ಯಾರು ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮತ್ತು ವೀಕ್ಷಣೆ ಮಾಡುತ್ತಾರೋ,ಅಂಥವರನ್ನು ಗುರುತಿಸಿ ದೂರು ದಾಖಲಿಸುವ ಕಾರ್ಯ ನಡೆಸುತ್ತಿದೆ.2019 ರಿಂದ ಈ ಪ್ರಕ್ರಿಯೆ ಪ್ರಾರಂಭವಾಗಿದ್ದು,ಈವರೆಗೆ ದೇಶಾದ್ಯಂತ ಹಲವರ ಮೇಲೆ ಪ್ರಕರಣಗಳು ದಾಖಲಾಗಿವೆ.
ಯಾವ ಮೊಬೈಲ್‌ನಲ್ಲಿ ವಿಡಿಯೋ ಅಪ್ಲೋಡ್ ಮಾಡುತ್ತಾರೋ ಅಥವಾ ವಾಟ್ಸಪ್, ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದರೆ ಅಥವಾ ಯಾವುದೇ ವೆಬ್‌ಸೈಟ್‌ಗಳ ಮೂಲಕ ವೀಕ್ಷಣೆ ಮಾಡಿದರೆ ಅಂಥ ಮೊಬೈಲ್ ನಂಬರ್‌ಗಳನ್ನು ಪತ್ತೆ ಮಾಡಿ, ಅವರ ವಿಳಾಸದ ಮಾಹಿತಿಯನ್ನು ಕಣ್ಗಾವಲು ತಾಣಗಳ ಸಹಾಯದಿಂದ ಪತ್ತೆ ಮಾಡಲಾಗುತ್ತಿದೆ.ಅಲ್ಲದೇ ಕಂಪ್ಯೂಟರ್ ಮೂಲಕ ವೀಕ್ಷಣೆ ಅಥವಾ ಅಪ್‌ಲೋಡ್ ಮಾಡಿದರೂ ಐಪಿ ಅಡ್ರೆಸ್ ಮೂಲಕ ಗುರುತಿಸಲಾಗುತ್ತಿದೆ.
ಈ ರೀತಿ ಗುರುತಿಸಲ್ಪಟ್ಟಿರುವ ಮಾಹಿತಿಗಳನ್ನು ಕೇಂದ್ರವು ಆಯಾ ರಾಜ್ಯದ ಸಿಐಡಿ ವಿಭಾಗಕ್ಕೆ,ಸಿಐಡಿಯಿಂದ ಪ್ರತಿ ಜಿಲ್ಲೆಯ ಸೈಬರ್ ಅಪರಾಧ ಠಾಣೆಗಳಿಗೆ ನೀಡಲಾಗುತ್ತಿದೆ.ಆಯಾ ಜಿಲ್ಲೆಯಲ್ಲಿ ಆ ಆರೋಪಿಗಳ ಮೇಲೆ ಸೈಬರ್ ಅಪರಾಧ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿ ಬಂಧಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.2020 ಹಾಗೂ 2021ರಲ್ಲಿ ಈವರೆಗೆ ಜಿಲ್ಲೆಯಲ್ಲಿ 6 ಪ್ರಕರಣಗಳು ಕೇಂದ್ರದ ಮಾಹಿತಿ ಮೇರೆಗೆ ಕಾರವಾರದ ಸೈಬರ್ ಅಪರಾಧ ಠಾಣೆಯಲ್ಲಿ ದಾಖಲಾಗಿದ್ದು,ಆರೋಪಿತರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುವ ಕಾರ್ಯ ನಡೆಸುತ್ತಿದ್ದಾರೆ.
ಇನ್ನು ಕೆಲವರು ಈಗಾಗಲೇ ನ್ಯಾಯಾಲಯದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಸಹ ಪಡೆದಿದ್ದು, ಇನ್ನೂ ಮೂರು ಪ್ರಕರಣಗಳು ಸಿಐಡಿಯಿಂದ ಜಿಲ್ಲೆಗೆ ವರ್ಗಾವಣೆಯಾಗಲಿದೆ ಎನ್ನಲಾಗಿದೆ.ಎಲ್ಲೋ ಕುಳಿತು ಮೊಬೈಲ್‌ನಲ್ಲಿ ನಾವು ಗುಪ್ತವಾಗಿ ಏನಾದರು ಮಾಡಬಹುದು ಅಂದುಕೊಂಡವರಿಗೆ ಇದು ಕಂಟಕವಾಗಲಿದೆ.ಇನ್ನೊಂದೆಡೆ ಅರಿವಿಲ್ಲದೇ ಯಾರೋ ಕಳಿಸುವ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿ ಬೇರೆಯವರಿಗೆ ಕಳುಹಿಸುವ ಪ್ರಯತ್ನ ಮಾಡಿದವರ ಮೇಲೂ ಪ್ರಕರಣ ದಾಖಲಾಗಿದ್ದು,ಸೈಬರ್ ಅಪರಾಧ ಠಾಣೆಗೆ ಬಂದು ವಿಚಾರಣೆಗೆ ಒಳಗಾಗಬೇಕಾದ ಅನಿವಾರ್ಯತೆ ಎದುರಾಗಿದೆ.
ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟಲು ಸುಪ್ರೀಂ ಕೇಂದ್ರಕ್ಕೆ ಸೂಚನೆ ನೀಡಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಕಳೆದ ಒಂದೆರಡು ವರ್ಷಗಳ ಹಿಂದೆ ಅಪ್‌ಲೋಡ್ ಮಾಡಿದ ಪ್ರಕರಣಗಳನ್ನು ಸಹ ಪತ್ತೆ ಹಚ್ಚಿ ಪ್ರಕರಣ ದಾಖಲಿಸುತ್ತಿದ್ದು,ಎಲ್ಲೋ ಮೂಲೆಯಲ್ಲಿ ಕುಳಿತು ಅಪ್‌ಲೋಡ್ ಮಾಡಿದವರನ್ನು ಗುರುತಿಸಿ ಪ್ರಕರಣ ದಾಖಲಿಸುವ ಕಾರ್ಯ ಮಾಡುತ್ತಿದೆ.ಇಂತಹ ಕೃತ್ಯದಲ್ಲಿ ಪಾಲ್ಗೊಳ್ಳದೇ ಸಾರ್ವಜನಿಕರು ಎಚ್ಚರದಿಂದ ಇರಬೇಕು ಎನ್ನುವುದು ಪೊಲೀಸರ ಸಲಹೆಯಾಗಿದೆ.
ಕೇರಳದಲ್ಲಿ ಲಾಕ್‌ಡೌನ್ ಸಮಯದಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳಿಗೆ ಉತ್ತೇಜನ ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 41 ಮಂದಿಯನ್ನು ಬಂಧಿಸಲಾಗಿತ್ತು.ಈ ಕುರಿತು 339 ಪ್ರಕರಣಗಳನ್ನು ದಾಖಲು ಮಾಡಲಾಗಿದೆ.ಕಂಪ್ಯೂಟರ್,ಹಾರ್ಡ್ ಡಿಸ್ಕ್ ಸೇರಿದಂತೆ ವಿವಿಧ ಉಪಕರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.




