ಕೊರೋನಾದಷ್ಟೇ ಮಲೇರಿಯಾ ಅಪಾಯಕಾರಿ; ಜಾಗೃತಿ ವಹಿಸಲು ಮನವಿ

ಕಾರವಾರ : ಕೊರೋನಾದಷ್ಟೆ ಮಲೇರಿಯಾ ರೋಗವು ಅಪಾಯಕಾರಿಯಾಗಿದ್ದು, ಪ್ರತಿ ವರ್ಷ ಈ ಕಾಯಿಲೆಗೆ ಸಾವಿರಾರು ಜನರು ಬಲಿಯಾಗುತ್ತಿದ್ದು, ಈ ಬಗ್ಗೆ ಜಾಗೃತಿವಹಿಸಬೇಕಾಗಿದೆ ಎಂದು ಹೊನ್ನಾವರ ತಾಲೂಕಾ ಆರೋಗ್ಯ ವೈದ್ಯಾಧಿಕಾರಿ ಉಷಾ ಹಾಷ್ಯಗಾರ ತಿಳಿಸಿದರು.
ಅವರು ತಾಲೂಕಾ ಪಂಚಾಯತ ಸಭಾ ಭವನದಲ್ಲಿ ಮಲೇರಿಯಾ ಮಾಸಾಚರಣೆಯ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡುವುದಕ್ಕೆ ಕೊರೋನಾ ಸಮಯದಲ್ಲಿ ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಮಾಧ್ಯಮದ ಮೂಲಕ ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ರೋಗದ
ಲಕ್ಷಣ ಹಾಗೂ ನಿವಾರಣೆಯ ಬಗ್ಗೆ ಮಾಹಿತಿ ನೀಡಿದರು.
ಮಲೇರಿಯಾ ರೋಗವು ಒಂದು ಪ್ಲಾಸ್ಮೋಡಿಯಂ ಜಾತಿಯ ಪರಾವಲಂಭಿ ಜೀವಿಯಿಂದ ಬರುವಂತಹ ರೋಗವಾಗಿದ್ದು,ಇದು ಅನಾಫಿಲಿಸ್ ಜಾತಿಯ ಹೆಣ್ಣು ಸೊಳ್ಳೆಗಳ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ.ತಮ್ಮ ತಮ್ಮ ಮನೆಗಳ ಸುತ್ತಮುತ್ತಲಿನ ಸ್ಥಳಗಳನ್ನು ಸ್ವಚ್ಚತೆ ಕಾಪಾಡಿಕೊಂಡಲ್ಲಿ ಈ ರೋಗ ನಿಯಂತ್ರಿಸಲು ಸಾಧ್ಯವಿದೆ ಎಂದರು.
ಜಿಲ್ಲೆಯಲ್ಲಿ ಕಳೆದ 5 ವರ್ಷಗಳಿಂದ ಮಲೇರಿಯಾ ಪ್ರಕರಣಗಳ ಸಂಖ್ಯೆ ಗಣನೀಯ ವಾಗಿ ಇಳಿಕೆಯಾಗಿದ್ದರೂ,ಹೊರಗಿನಿಂದ ಕೆಲಸಕ್ಕೆ ಬರುವ ಕಾರ್ಮಿಕರಲ್ಲಿ ಇತ್ತೀಚೆಗೆ ಕಂಡು ಬರುತ್ತಿದೆ. ತಿಂದು ಬಿಸಾಡಿದ ತೆಂಗಿನ ಚಿಪ್ಪು, ವಾಹನಗಳ ಟೈಯರ್, ನೀರು ನಿಲ್ಲುವ ಚರಂಡಿಯಲ್ಲಿ ಉತ್ಪತ್ತಿಯಾಗುವ ಸೊಳ್ಳೆಯಿಂದ ಈ ರೋಗ ಕಾಣಿಸಿಕೊಳ್ಳುತ್ತಿದ್ದು, ಮನೆಯ ಸಮೀಪ ಇಂತಹ ಸ್ಥಳಗಳಿದ್ದರೆ ಸ್ವಚ್ಚವಾಗಿಟ್ಟುಕೊಳ್ಳುವಂತೆ ಸಲಹೆ ನೀಡಿದರು.




