ಉತ್ತರ ಕನ್ನಡ
ಉಕ್ಕಿ ಹರಿದ ಅಘನಾಶಿನಿ ನದಿ; ರಸ್ತೆ ಸಂಚಾರಕ್ಕೆ ವ್ಯತ್ಯಯ

ಕಾರವಾರ : ಗುರುವಾರ ಸುರಿದ ಧಾರಾಕಾರ ಮಳೆಗೆ ಅಘನಾಶಿನಿ ನದಿ ಮೈ ತುಂಬಿಕೊಂಡಿದೆ.ಶಿರಸಿ,ಸಿದ್ದಾಪುರ ತಾಲೂಕಿನ ಗಡಿಯಲ್ಲಿರುವ ಸರಕುಳಿ ಸೇತುವೆಯ ಮೇಲೆ ನದಿ ನೀರು ಉಕ್ಕಿ ಹರಿದಿದ್ದು,ಇದರಿಂದ ಕೆಲ ಕಾಲ ಶಿರಸಿ – ಗೋಳಿಮಕ್ಕಿ ರಸ್ತೆ ಸಂಚಾರಕ್ಕೆ ವ್ಯತ್ಯಯವಾಯಿತು.
ಮಧ್ಯಾಹ್ನದ ವೇಳೆ ಸೇತುವೆಗೆ ತಾಗಿ ನದಿ ನೀರು ಹರಿದಿದೆ.ಮಧ್ಯಾಹ್ನದ ನಂತರ ಮಳೆಯ ಪ್ರಮಾಣ ಇನ್ನೂ ಜಾಸ್ತಿಯಾಗಿದ್ದರಿಂದ ಸಂಜೆ ವೇಳೆ ಸೇತುವೆಯ ಮೇಲೆ ನೀರು ಹರಿದಿದೆ.ಅಘನಾಶಿನಿ ನದಿ ದಟ್ಟ ಕಾಡಿನಲ್ಲಿ ಹರಿಯುತ್ತಿದೆ. ಇದರಿಂದಾಗಿ ತನ್ನ ಪ್ರವಾಹದೊಂದಿಗೆ ಬೃಹತ್ ಮರದ ದಿಮ್ಮಿಗಳನ್ನೂ ಹೊತ್ತು ತರುತ್ತದೆ.ಸೇತುವೆಯ ಇಕ್ಕೆಲಗಳಲ್ಲಿರುವ ವಾಹನ ರಕ್ಷಣಾ ಕಂಬಗಳಿಗೆ ಇವು ಸತತವಾಗಿ ಬಡಿಯುತ್ತಿದ್ದ ಕಾರಣ ಅವು ಮುರಿದು ಹಾನಿಗೊಳಗಾದವು. ಲೋಕೋಪಯೋಗಿ ಇಲಾಖೆ ಈ ವರ್ಷ ರಕ್ಷಣಾ ಕಂಬಗಳ ನಿರ್ಮಾಣ ಕಾರ್ಯ ನಡೆಸಿದ್ದು,ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಪ್ರವಾಹದಿಂದಾಗಿ ಈ ಕಾರ್ಯಕ್ಕೆ ತೊಡಕುಂಟಾಗಿದೆ.




