ಉತ್ತರ ಕನ್ನಡ

ಉತ್ತರ ಕನ್ನಡ: ಸ್ಥಗಿತಗೊಂಡಿದ್ದ ಜಲ ಸಾಹಸ ಕ್ರೀಡೆ ಆರಂಭಿಸಲು ಜಿಲ್ಲಾಡಳಿತ ಒಪ್ಪಿಗೆ

ಕಾರವಾರ : ಜಿಲ್ಲೆಯ ಪ್ರವಾಸಿ ಸ್ಥಳಗಳು ಮತ್ತೆ ತೆರೆದುಕೊಳ್ಳುತ್ತಿದ್ದು,ಕಾರವಾರ ಕಡಲತೀರ ಸೇರಿದಂತೆ ಜಲಸಾಹಸ ಕ್ರೀಡೆ ಆರಂಭಿಸಲು ಜಿಲ್ಲಾಡಳಿತ ಒಪ್ಪಿಗೆ ನೀಡಿದೆ.ಕೋವಿಡ್​ ಅನ್‌ಲಾಕ್ ಬಳಿಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸಿ ತಾಣಗಳು ತೆರೆದುಕೊಂಡಿದ್ದರೂ ಜಲಸಾಹಸ ಕ್ರೀಡೆಯಂತಹ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡಿರಲಿಲ್ಲ.ಆದರೆ ಇದೀಗ ಜಿಲ್ಲಾಡಳಿತ ಪ್ರವಾಸಿ ತಾಣಗಳಲ್ಲಿ ಜಲ ಕ್ರೀಡೆ ನಡೆಸಲು ಅನುಮತಿ ನೀಡಿದ್ದು,ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮತ್ತೆ ಕಳೆ ಬಂದಂತಾಗಿದೆ.

ರಾಜ್ಯದಲ್ಲಿಯೇ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ಜಿಲ್ಲೆಗಳಲ್ಲಿ ಉತ್ತರ ಕನ್ನಡ ಸಹ ಒಂದು.ಪ್ರವಾಸಿಗರ ಫೇವರಿಟ್​ ಆಗಿರುವ ಜಿಲ್ಲೆಯ ಕಡಲ ತೀರಕ್ಕೆ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ.

ಆದರೆ ಕೋವಿಡ್​ ಅನ್‌ಲಾಕ್ ಬಳಿಕ ಸಹ ಯಾವುದೇ ರೀತಿಯ ಜಲಸಾಹಸ ಕ್ರೀಡೆಗಳಿಗೆ ಅವಕಾಶ ನೀಡಿರಲಿಲ್ಲ.ಈ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರವಾಸಿಗರು ಬಾರದೇ ಪ್ರವಾಸೋದ್ಯಮ ಮಂಕಾಗಿತ್ತು.ಆದರೆ ಇದೀಗ ಜಿಲ್ಲಾಡಳಿತ ಇಂದಿನಿಂದ ನದಿ ಹಾಗೂ ಸಮುದ್ರ ತೀರಗಳಲ್ಲಿ ಕೊರೋನಾ ಮಾರ್ಗಸೂಚಿಗಳ ಪಾಲನೆಯೊಂದಿಗೆ ವಾಟರ್ ಸ್ಪೋರ್ಟ್ಸ್ ನಡೆಸಲು ಅವಕಾಶ ನೀಡಿದೆ.

ಜಿಲ್ಲೆಯಲ್ಲಿ ಕಾರವಾರ,ಗೋಕರ್ಣ,ಹೊನ್ನಾವರ ಹಾಗೂ ಮುರ್ಡೇಶ್ವರ ಸೇರಿದಂತೆ ಹತ್ತಾರು ಕಡೆ ಕಡಲ ತೀರಗಳಿವೆ.ಇಲ್ಲಿನ ಬೀಚ್‌ಗಳಲ್ಲಿ ಎಂಜಾಯ್ ಮಾಡೋದಕ್ಕೆ ಅಂತಾನೇ ರಾಜ್ಯ,ಹೊರ ರಾಜ್ಯಗಳಿಂದ ಪ್ರವಾಸಿಗರು ಆಗಮಿಸುತ್ತಾರೆ.ಅಲ್ಲದೇ ಬೋಟ್ ರೈಡ್,ಜೆಟ್ ಸ್ಕೀ ಸೇರಿದಂತೆ ದಾಂಡೇಲಿ,ಜೊಯಿಡಾ ಭಾಗಗಳಿಗೆ ಕಾಳಿ ನದಿಯಲ್ಲಿ ವಿವಿಧ ಜಲ ಸಾಹಸ ಕ್ರೀಡೆಗಳನ್ನು ಆಯೋಜಿಸಲಾಗುತ್ತದೆ.

ಜೊತೆಗೆ ಕಾರವಾರ ರವೀಂದ್ರನಾಥ ಠಾಗೋರ್ ಕಡಲತೀರ,ಗೋಕರ್ಣದ ಓಂ ಬೀಚ್,ಕುಡ್ಲೆ ಬೀಚ್ ಹಾಗೂ ಮುರ್ಡೇಶ್ವರ ಕಡಲ ತೀರಗಳಲ್ಲಿ ಹಿಂದಿನಿಂದಲೂ ಜಲ ಸಾಹಸ ಕ್ರೀಡೆಗಳನ್ನು ನಡೆಸಲಾಗುತ್ತಿತ್ತು.ಇದೀಗ ಮತ್ತೆ ಜಲ ಕ್ರೀಡೆಗೆ ಅನುಮತಿ ನೀಡಿರುವುದಕ್ಕೆ ಆಯೋಜಕರು ಸಂತಸಗೊಂಡಿದ್ದು,ಈಗಾಗಲೇ ಕ್ರೀಡೆಗಳನ್ನು ಪ್ರಾರಂಭಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

Spread the love

Related Articles

Leave a Reply

Your email address will not be published. Required fields are marked *

Back to top button