ಉತ್ತರ ಕನ್ನಡ

ಗುಡ್ಡ ಕುಸಿತ; 345 ಜನರ ಜೀವ ಉಳಿಸಿದ ರೈಲು ಸಿಬ್ಬಂದಿ

ಕಾರವಾರ : ಭಾರೀ ಮಳೆಯ ಕಾರಣ ರೈಲು ಹಳಿಯ ಮೇಲೆ ಗುಡ್ಡದ ಮಣ್ಣು ಜಾರಿ ಬೀಳುತ್ತಿರುವುದನ್ನು ಗಮನಿಸಿದ ರೈಲು ಸಿಬ್ಬಂದಿ ಸಮಯ ಪ್ರಜ್ಞೆಯಿಂದ 345 ಪ್ರಯಾಣಿಕರ ಜೀವ ಉಳಿದಿದೆ. ಅಪಾಯವನ್ನು ಊಹಿಸಿದ ಸಿಬ್ಬಂದಿ ತುರ್ತು ಬ್ರೇಕ್ ಉಪಯೋಗಿಸಿ ರೈಲು ನಿಲ್ಲಿಸಿದ್ದರು.

ಜುಲೈ,23 ರಂದು ಕುಲೇಮ್‌ನಿಂದ ಕ್ಯಾಸೆಲ್ ರಾಕ್ ಕಡೆಗೆ ಸಂಚಾರ ನಡೆಸುತ್ತಿದ್ದ ರೈಲಿನ ಮೇಲೆ ಗುಡ್ಡ ಕುಸಿದು ಬಿದ್ದಿತ್ತು.ರೈಲು ಹಳಿ ತಪ್ಪಿತ್ತು. ಈ ಸಮಯದಲ್ಲಿ ರೈಲಿನಲ್ಲಿದ್ದ ಸಿಬ್ಬಂದಿಯ ಕಾರ್ಯವನ್ನು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಗಜಾನನ ಮಲ್ಯ ಶ್ಲಾಘಿಸಿದ್ದಾರೆ. ಉತ್ತಮ ಕಾರ್ಯವನ್ನು ಗುರುತಿಸಿ ನಗದು ಬಹುಮಾನ ಘೋಷಿಸಿದ್ದಾರೆ.

ರೈಲು ಸಂಖ್ಯೆ 01134 ಮಂಗಳೂರು ಜಂಕ್ಷನ್ – ಛತ್ರಪತಿ ಶಿವಾಜಿ ಟರ್ಮಿನಸ್ ಮುಂಬೈ ರೈಲಿನ ಲೋಕೋ ಪೈಲಟ್,ಸಹಾಯಕ ಲೋಕೋ ಪೈಲಟ್ ಮತ್ತು ಗಾರ್ಡ್ ಗಳ ಸಮಯ ಪ್ರಜ್ಞೆಯಿಂದಾಗಿ ಭಾರೀ ಅನಾಹುತ ತಪ್ಪಿತ್ತು. ಲೋಕೋ ಪೈಲಟ್ ರಣ್​ಜಿತ್ ಕುಮಾರ್, ಗಾರ್ಡ್ ಶೈಲೇಂದರ್ ಕುಮಾರ್ ಅವರ ಸಮಯ ಪ್ರಜ್ಞೆಯಿಂದ ಪ್ರಯಾಣಿಕರ ಜೀವ ಉಳಿಯಿತು.

ಕ್ಯಾಸೆಲ್ ರಾಕ್ ಮತ್ತು ಕುಲೇಮ್ ನಡುವೆ ಇರುವ ನಿಲ್ದಾಣಗಳಾದ ಕಾರಂಜೋಲ್, ದೂಧ್ ಸಾಗರ್ ಮತ್ತು ಸೋನಾಲಿಮ್ ಗಳನ್ನು ಕೇವಲ ರೈಲು ಮಾರ್ಗದ ಮೂಲಕ ತಲುಪಬಹುದಾಗಿದ್ದು,ರಸ್ತೆ ಸಂಪರ್ಕವಿಲ್ಲ.

ಘಟನೆಯ ವಿವರ

ಜುಲೈ,23ರ ಬೆಳಿಗ್ಗೆ ಸುಮಾರು 6.10ಕ್ಕೆ ಕುಲೇಮ್‌ನಿಂದ ಉತ್ತರ ಕನ್ನಡ ಜಿಲ್ಲೆಯ ಕ್ಯಾಸೆಲ್ ರಾಕ್ ಕಡೆಗೆ ರೈಲು ಸಂಚಾರ ನಡೆಸುತ್ತಿತ್ತು.ದೂದ್‌ ಸಾಗರ್ – ಸೋನಾಲಿಮ್ ಭಾಗದ ಬಳಿ ಮುಂಭಾಗದ ಇಂಜಿನ್ ಲೋಕೋ ಪೈಲಟ್ ರಣ್ ಜಿತ್ ಕುಮಾರ್ ಮಳೆಯಿಂದಾಗಿ ಗುಡ್ಡದಿಂದ ರೈಲು ಹಳಿಯ ಮೇಲೆ ಮಣ್ಣು ಜಾರಿ ಬೀಳುತ್ತಿರುವುದನ್ನು ಗಮನಿಸಿದರು.

ಮುಂದಿನ ಅಪಾಯವನ್ನು ಊಹಿಸಿ ಕೂಡಲೇ ತುರ್ತು ಬ್ರೇಕ್ ಮೂಲಕ ರೈಲನ್ನು ನಿಲ್ಲಿಸಿದರು.ಹಳಿ ಮೇಲೆ ಕೆಸರು ಮಿಶ್ರಿತ ಬಂಡೆಗಳು ಬಿದ್ದಿದ್ದರಿಂದ ಬ್ರೇಕ್ ಹಾಕಿದ್ದರೂ ಇಂಜಿನ್ ಹಳಿ ತಪ್ಪಿತು.ಕೂಡಲೇ ದೂದ್‌ ಸಾಗರ್ ನಿಲ್ದಾಣದ ಸ್ಟೇಷನ್ ಮಾಸ್ಟರ್‌ಗೆ ವಿಷಯ ತಿಳಿಸಿ ಹುಬ್ಬಳ್ಳಿಯ ನಿಯಂತ್ರಣ ಕಛೇರಿಗೆ ಮಾಹಿತಿ ನೀಡುವಂತೆ ಹೇಳಿದರು.ತುರ್ತು ಬ್ರೇಕ್ ಪ್ರಯೋಗ ಗಮನಿಸಿದ ರೈಲಿನ ಗಾರ್ಡ್ ಶೈಲೇಂದರ್ ಕುಮಾರ್ ರೈಲಿನ ಕೊನೆಯಲ್ಲಿರುವ ಬ್ರೇಕ್ವ್ಯಾನ್‌ನ ಹ್ಯಾಂಡ್ ಬ್ರೇಕ್ ಪ್ರಯೋಗಿಸಿ ಇಂಜಿನ್ ಹತ್ತಿರ ಹೋದರು.

ಇದೇ ಸಮಯದಲ್ಲಿ ಗಾರ್ಡ್ ಮತ್ತು ಲೋಕೋಪೈಲಟ್‌ಗಳು ಮುಂದಿನ ಮತ್ತು ಹಿಂಭಾಗದ ಇಂಜಿನ್‌ಗಳ ಸಹಾಯಕ ಲೋಕೋ ಪೈಲಟ್‌ಗಳಿಗೆ ಹಳಿಯ ಎರಡೂ ದಿಕ್ಕಿನಲ್ಲಿ ನಿಗದಿತ ಅಂತರದಲ್ಲಿ ಡೆಟೋನೇಟರ್ ಇಡುವಂತೆ ಸೂಚಿಸಿದರು.ರೈಲನ್ನು ಸರಪಳಿಯ ಮೂಲಕ ಹಳಿಗಳೊಂದಿಗೆ ಬಂಧಿಸಿ ಭದ್ರಪಡಿಸಿದರು.ಮುಂಭಾಗದ ಇಂಜಿನ್‌ ಹಿಂದಿನ ಮೊದಲ ಬೋಗಿಯ ಮೇಲೆ ಗುಡ್ಡದಿಂದ ಕೆಸರು, ಮಣ್ಣು ಬೀಳುತ್ತಿರುವುದನ್ನು ಗಮನಿಸಿ ಮೊದಲ ಮೂರು ಬೋಗಿಗಳಲ್ಲಿದ್ದ ಪ್ರಯಾಣಿಕರನ್ನು ಬೇರೆ ಬೋಗಿಗಳಿಗೆ ಸ್ಥಳಾಂತರಿಸಿ ಈ ಮೂರು ಬೋಗಿಗಳನ್ನು ರೈಲಿನ ಉಳಿದ ಬೋಗಿಗಳಿಂದ ಪ್ರತ್ಯೇಕಿಸಿದರು.

ಹಿಂಭಾಗದಲ್ಲಿ ಅಳವಡಿಸಲಾಗಿದ್ದ ಬ್ಯಾಂಕಿಂಗ್ ಇಂಜಿನ್‌ಗಳ ಸಹಾಯದಿಂದ 345 ಪ್ರಯಾಣಿಕರಿದ್ದ ರೈಲನ್ನು ಕುಲೇಮ್ ನಿಲ್ದಾಣಕ್ಕೆ ಮರಳಿ ಕಳುಹಿಸಿದರು.

ಕ್ಯಾಸೆಲ್ ರಾಕ್ – ಕುಲೇಮ್ ಘಟ್ಟ ಪ್ರದೇಶದ ಮಾರ್ಗವು 27 ಕಿ.ಮೀ.ಉದ್ದವಿದೆ. ಪಶ್ಚಿಮ ಘಟ್ಟದ ಜನ ವಸತಿ ರಹಿತ ಕಾಡಿನ ಮೂಲಕ ಸಾಗುವ ಏಕಪಥ ಮಾರ್ಗವಿದು.ಇಡೀ ಘಟ್ಟದ ಮಾರ್ಗವು ಕಡಿದಾದ ಇಳಿಜಾರು ಹೊಂದಿದೆ. ಮುಂಭಾಗದ ಜೊತೆಗೆ ರೈಲಿಗೆ ಹಿಂಭಾಗದಲ್ಲೂ ಇಂಜಿನ್ ಅಳವಡಿಸುವ ಮೂಲಕ ಹೆಚ್ಚಿನ ಶಕ್ತಿಯನ್ನು ಒದಗಿಸಲಾಗುತ್ತದೆ.

Spread the love

Related Articles

Leave a Reply

Your email address will not be published. Required fields are marked *

Back to top button