ಕಾರವಾರ : ದಂಡೆಗಪ್ಪಳಿಸುವ ಜಲಚರಗಳ ಪ್ರಾಣಕ್ಕೆ ಕುತ್ತು

ಕಾರವಾರ : ಕೊರೋನಾ ಲಾಕ್ಡೌನ್ ಬಳಿಕ ಇದೀಗ ಉತ್ತರ ಕನ್ನಡದಲ್ಲಿ ಮೀನುಗಾರಿಕೆ ಆರಂಭವಾಗಿದೆ.ಇದರ ನಡುವೆಯೇ ಸಮುದ್ರದಲ್ಲಿ ಅಪರೂಪದ ಜಲಚರಗಳು ಸಾವನ್ನಪ್ಪುತ್ತಿವೆ.ಇದು ಕಡಲ ಜೀವಶಾಸ್ತ್ರಜ್ಞರ ಆತಂಕಕ್ಕೆ ಕಾರಣವಾಗಿದೆ.
ಈವರೆಗೆ ಸ್ವಚ್ಛಂದವಾಗಿದ್ದ ಕಡಲ ಜೀವಿಗಳೀಗ ಮೀನುಗಾರಿಕೆ ಆರಂಭ ಆದಾಗಿನಿಂದ ಬಲೆಗಳಿಗೆ ಸಿಲುಕಿ ಸಾವನ್ನಪ್ಪುತ್ತಿವೆ.ಕಳೆದ 15 ದಿನದ ಅಂತರದಲ್ಲಿ ಕಾರವಾರದ ಸಮುದ್ರ ತೀರದಲ್ಲಿ ಒಂದಾದ ಮೇಲೊಂದರಂತೆ ಕಡಲ ಜೀವಿಗಳು ಸಾವನ್ನಪ್ಪಿವೆ.ಅಪರೂಪದ ಹವಾಕ್ಸ್ ಬುಲ್ ಟರ್ಟಲ್ ಸೇರಿ ಮೂರು ಕಡಲಾಮೆ ಹಾಗೂ ಒಂದು ಹಂಪ್ಬ್ಯಾಕ್ ಡಾಲ್ಫಿನ್ ಕಳೆಬರ ಕಡಲ ತೀರಕ್ಕೆ ಬಂದು ಬಿದ್ದಿವೆ.
ಅರಬ್ಬೀ ಸಮುದ್ರ ಪ್ರದೇಶದಲ್ಲಿ ಅಪರೂಪದ ಹಂಪ್ ಬ್ಯಾಕ್ ಡಾಲ್ಫಿನ್ ಹಾಗೂ ಗ್ರೀನ್ ಕಡಲಾಮೆ ಪ್ರಭೇದಗಳು ಕಂಡು ಬಂದಿವೆ.ಇದೇ ಮೊದಲ ಬಾರಿಗೆ ಅಂಡಮಾನ್ – ನಿಕೋಬಾರ್ ಪ್ರದೇಶದಲ್ಲಿ ಕಾಣಸಿಗುವ ವಿಶೇಷ ಪ್ರಭೇದದ ಹವಾಕ್ಸ್ ಬಿಲ್ ಆಮೆಗಳು ಇರುವುದು ಕಳೆಬರದಿಂದ ತಿಳಿದು ಬಂದಿದೆ.
ಅಪರೂಪದ ಕಡಲ ಜೀವಿಗಳು ಕಾಣ ಸಿಗುವುದೇ ಅಪರೂಪ.ಆದರೆ ಒಂದರ ಮೇಲೊಂದರಂತೆ ಸಾವನ್ನಪ್ಪುತ್ತಿರುವುದು ನಿಜಕ್ಕೂ ದುರಂತ.ಈ ಬಗ್ಗೆ ಸಂಬಂಧಪಟ್ಟವರು ಇತ್ತ ಗಮನಹರಿಸಿ ಕಡಲ ಜೀವಿಗಳ ಸಂತತಿ ರಕ್ಷಣೆಗೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಿದೆ.




