ಉತ್ತರ ಕನ್ನಡ

ನೆರೆ ಸಂತ್ರಸ್ತರಿಗೆ ಪರಿಹಾರ; ವೆಲ್​ಫೇರ್ ಪಾರ್ಟಿ ಆಫ್ ಇಂಡಿಯಾ ಆಗ್ರಹ

ಕಾರವಾರ : ಮಳೆಯಿಂದ ಪ್ರವಾಹ ಬಂದು 15 ದಿವಸ ಕಳೆದರೂ ನೆರೆ ಸಂತ್ರಸ್ತರಿಗೆ ಸರಕಾರದಿಂದ ಯಾವುದೇ ರೀತಿಯ ಪರಿಹಾರ ನೀಡಲಾಗಿಲ್ಲ.ನೆರೆ ಪೀಡಿತ ಜನರ ಸಂಕಷ್ಟವನ್ನು ಆಲಿಸಿ ವೆಲ್ಫೇರ್ ಪಾರ್ಟಿ ಕರ್ನಾಟಕದ ವತಿಯಿಂದ ಸರಕಾರಕ್ಕೆ ಪರಿಹಾರ ತಲುಪಿಸಬೇಕು ಎಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ ಎಂದು ವೆಲ್ಪೇರ್ ಪಾರ್ಟಿಯ ರಾಜ್ಯಾಧ್ಯಕ್ಷರಾದ ತಾಹೀರ್ ಹುಸೇನ್ ಹೇಳಿದರು.

ಸೋಮವಾರ ತಾಲೂಕಿನ ದಾವಾ ಸೆಂಟರಿನಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ವೆಲ್ಪೇರ್ ಪಾರ್ಟಿಯ ರಾಜ್ಯಾಧ್ಯಕ್ಷರಾದ ತಾಹೀರ್ ಹುಸೇನ್ ಅವರು ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ನೆರೆ ಪೀಡಿತ ಸಂತ್ರಸ್ತರಿಗೆ ವಾಸಕ್ಕೂ ವನವಾಸ,ಅಜ್ಞಾತವಾಸದ ಕಠಿಣ ಪರಿಸ್ಥಿತಿ ಎದುರಾಗಿದೆ. ಮಲಗಲು ಹಾಸಿಗೆ ಇಲ್ಲ, ದುಡಿಯಲು ಕೆಲಸವಿಲ್ಲ,ವಾಸಕ್ಕೆ ಸೂರಿಲ್ಲ,ತಿನ್ನಲು ಅನ್ನವಿಲ್ಲದಂತಹ ಕಠೋರ ಸತ್ಯ ನಮ್ಮ ಜಿಲ್ಲಾ ಪರ್ಯಟನೆಯಲ್ಲಿ ಮನದಟ್ಟು ಮಾಡಿಕೊಂಡಿದ್ದೇವೆ.ಇದು ಬರೀ ಘೋಷಣೆಗಳ ಸರ್ಕಾರ,ನೆರೆ ಸಂತ್ರಸ್ತರು ಕ್ಷಣ ಕ್ಷಣಕ್ಕೂ ಗೋಳು ಅನುಭವಿಸುತ್ತಿರುವಾಗ ನೆಪ ಮಾತ್ರಕ್ಕೆ ಭೇಟಿ ಕೊಟ್ಟ ಸಿಎಂ ನೆಪ ಮಾತ್ರದ ನೆರವಿನ ಘೋಷಣೆ ಮಾಡಿದ್ದಾರೆ.ತಕ್ಷಣದ ಪರಿಹಾರವಾಗಿ ಕೊಡಬೇಕಿದ್ದ 10 ಸಾವಿರ ರೂ. ಇನ್ನೂ ಸಂತ್ರಸ್ತರ ಕೈ ಸೇರಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

ಕೇಂದ್ರ ಸರ್ಕಾರವು ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಮುಂದುವರಿಸಿದೆ. ಗುಜರಾತ್‌ನಲ್ಲಿ ಪ್ರವಾಹ ಬಂದಾಗ ಪ್ರಧಾನಿ ನರೇಂದ್ರ ಮೋದಿ ವೈಮಾನಿಕ ಸಮೀಕ್ಷೆ ನಡೆಸಿ ತಕ್ಷಣ ₹ 1 ಸಾವಿರ ಕೋಟಿ ವಿಶೇಷ ಅನುದಾನ ಘೋಷಿಸಿದ್ದಾರೆ. ಕರ್ನಾಟಕದಲ್ಲೂ ಪ್ರವಾಹದಿಂದ ಜನ ಕಷ್ಟದಲ್ಲಿದ್ದಾರೆ ಎಂಬುದು ಗೊತ್ತಿದ್ದರೂ ಪರಿಹಾರ ಕೊಟ್ಟಿಲ್ಲ.2019 ರಲ್ಲಿ ಪ್ರವಾಹದಿಂದ ₹ 38,451 ಕೋಟಿ ನಷ್ಟವಾಗಿದ್ದು, ಕೇಂದ್ರದಲ್ಲಿ ₹1,869 ಕೋಟಿ ಮಾತ್ರ ಪರಿಹಾರದ ಹಣ ಲಭ್ಯವಾಗಿದೆ.2020ರಲ್ಲಿ ₹ 15,410 ಕೋಟಿ ನಷ್ಟವಾಗಿದ್ದು,ಪರಿಹಾರವಾಗಿ ಕೇವಲ ₹ 1,206 ಕೋಟಿ ದೊರೆತಿದೆ.ಈ ವರ್ಷದ ನಷ್ಟದ ಅಂದಾಜು ಮಾಡುವ ಕೆಲಸವೂ ಆಗಿಲ್ಲ ಎಂದರು.

ಪ್ರತಿ ವರ್ಷ ನೆರೆ ಬರುವುದು,ಜನ ಸಂತ್ರಸ್ತರಾಗುವುದು,ಸರಕಾರದ ಸವಲತ್ತುಗಳಿಂದ ವಂಚಿತರಾಗುವುದು ನಡೆದಿದೆ.ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಕೂಡಲೇ ಸರಕಾರ ಸಂತ್ರಸ್ತರ ನೆರವಿಗೆ ಧಾವಿಸಿ ಶಾಶ್ವತ ಪರಿಹಾರ ನೀಡಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಸರ್ಕಾರಕ್ಕೆ ಒತ್ತಾಯಿಸುತ್ತಿದೆ ಎಂದರು.

ಸಾರಿಗೆ ಸಿಬ್ಬಂದಿಗೆ ಪರಿಹಾರ ಕೊಡಲು ಆಗ್ರಹ

ಕೋವಿಡ್ ಸಾಂಕ್ರಾಮಿಕ ಕಾಲದಲ್ಲಿ ಸಾವಿಗೀಡಾದ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ಕುಟುಂಬಗಳಿಗೆ ಇದುವರೆಗೂ ಯಾವುದೇ ರೀತಿಯ ಪರಿಹಾರ ನೀಡಿಲ್ಲ ಎನ್ನುವ ವರದಿ ಮಾಹಿತಿ ಹಕ್ಕಿನಲ್ಲಿ ಕೇಳಿದ ಪ್ರಶ್ನೆಯಿಂದ ಬಹಿರಂಗವಾಗಿದೆ ಎನ್ನುವ ಆಘಾತಕಾರಿ ಮಾಹಿತಿ ಬಂದಿದೆ.ಮೃತಪಟ್ಟ ಸಾರಿಗೆ ನೌಕರರ ಕುಟುಂಬಕ್ಕೆ 30 ಲಕ್ಷ ರೂ.ಪರಿಹಾರ ಧನ ಕೊಡುವುದಾಗಿ ಸರಕಾರದ ಅಂದಿನ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಘೋಷಣೆ ಮಾಡಿದ್ದರು.ಆದರೆ ಇಲ್ಲಿಯವರೆಗೆ ಯಾವೊಬ್ಬ ನೌಕರನ ಕುಟುಂಬಕ್ಕೆ ಪರಿಹಾರ ಹಣ ಸಿಕ್ಕಿಲ್ಲ.ಮಾಜಿ ಸಚಿವರ ಮಾತು ಕೇವಲ ಹುಸಿ ಭರವಸೆ ಆಗಿದೆ.ಮೂರ್ನಾಲ್ಕು ತಿಂಗಳುಗಳ ಕಾಲ ವೇತನವಿಲ್ಲದೆ ಕುಟುಂಬ ನಿರ್ವಹಣೆಗೆ ಪರದಾಡುತ್ತಿರುವ ಸಾರಿಗೆ ಸಿಬ್ಬಂದಿಗಳ ಸಂಕಷ್ಟಕ್ಕೆ ಸಕಾಲದಲ್ಲಿ ಸಹಾಯ ಮಾಡಿಲ್ಲ.ಸರಕಾರದ ಈ ಕ್ರಮ ಖಂಡನೀಯ.ಕೊಟ್ಟ ಮಾತು ಉಳಿಸಿಕೊಳ್ಳುವಲ್ಲಿ ಸರಕಾರ ಎಡವಿದೆ ಎಂದು ಹೇಳಿದರು.

ಮಾರ್ಚ್ 2020 ರಿಂದ ಮಾರ್ಚ್ 2021 ರವರೆಗೆ ಒಟ್ಟು 32 ಜನ ಸಿಬ್ಬಂದಿಗಳು ಹಾಗೂ ಎಪ್ರಿಲ್ 2021 ರಿಂದ ಜೂನ್ 21 ರವರೆಗಿನ ಅವಧಿಯಲ್ಲಿ 48 ಜನ ವಾಯುವ್ಯ ಸಾರಿಗೆ ಸಿಬ್ಬಂದಿಗಳು ರಾಜ್ಯದಲ್ಲಿ ಕೊರೋನಾಕ್ಕೆ ಬಲಿಯಾಗಿದ್ದಾರೆ ಎಂಬ ಮಾಹಿತಿ ನೀಡಿದ ತಾಹೀರ್ ಹುಸೇನ್ ಅವರು ಸದರಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೃತರ ಅವಲಂಭಿತರಿಗೆ ಯಾವುದೇ ಪರಿಹಾರ ವಿತರಣೆ ಮಾಡಿರುವುದಿಲ್ಲ ಎಂದು ಮಾಹಿತಿ ಹಕ್ಕಿನಲ್ಲಿ ಕೇಳಿದ ಮಾಹಿತಿಗೆ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಕಛೇರಿಯಿಂದ ಉತ್ತರ ಬಂದಿರುವುದು ಆಘಾತಕಾರಿಯಾಗಿದೆ. ಕೊಟ್ಟ ಮಾತು ಉಳಿಸಿಕೊಳ್ಳುವಲ್ಲಿ ವಿಫಲವಾಗಿರುವ ಸರಕಾರದ ಕ್ರಮ ಖಂಡನೀಯ ಕೂಡಲೇ ಎಚ್ಚೆತ್ತುಕೊಳ್ಳುವ ಮೂಲಕ ಸರಕಾರ ಮೃತ ಸಾರಿಗೆ ಇಲಾಖೆ ನೌಕರರ ಕುಟುಂಬಗಳಿಗೆ ನ್ಯಾಯೋಚಿತ ಪರಿಹಾರ ವಿತರಣೆ ಮಾಡಬೇಕು ಎನ್ನುವ ಆಗ್ರಹ ನಮ್ಮದಾಗಿದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಮಾಧ್ಯಮ ಕಾರ್ಯದರ್ಶಿ ಅಜೀಜ್ ಜಾಗಿರ್ದಾರ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಸಿಫ್ ಶೇಖ್ ಇದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button