ದೋಣಿ ಮಗುಚಿ ಅಪಾಯದಲ್ಲಿದ್ದ ಮೀನುಗಾರರ ರಕ್ಷಣೆ

ಕಾರವಾರ : ಒಂದೆಡೆ ಕೊರೋನ ಆರ್ಭಟ, ಇನ್ನೊಂದೆಡೆ ಮಳೆಯಿಂದ ಮೀನುಗಾರರಿಗೆ ಸಮಸ್ಯೆ ಹೀಗೆ ಮೀನುಗಾರರ ಬದುಕು ಬಹಳ ದುಸ್ತರವಾಗಿದೆ. ಇದರ ಮಧ್ಯೆ ಮೀನುಗಾರಿಕೆಗೆ ತೆರಳಿದಾಗ ಅವಘಡ ಸಂಭವಿಸಿದೆ.
ಮುರ್ಡೇಶ್ವರದ ಅರಬ್ಬೀ ಸಮುದ್ರಲ್ಲಿ ಮೀನುಗಾರಿಕೆಗೆ ತೆರಳಿ ವಾಪಾಸ್ಸಾಗುವ ವೇಳೆ ಅಲೆಯ ರಭಸಕ್ಕೆ ಗಿಲ್ನಟ್ ದೋಣಿ ಮಗುಚಿದ ಕಾರಣ 7 ಮಂದಿ ಮೀನುಗಾರರು ಅಪಾಯದಲ್ಲಿದ್ದ ಘಟನೆ ವರದಿಯಾಗಿದ್ದು,ಈ ಕುರಿತಾದ ವಿಡಿಯೋ ವೈರಲ್ ಆಗಿದೆ.
ಜನಾರ್ದನ ಹರಿಕಾಂತ ಇವರಿಗೆ ಸೇರಿದ ಜಲ ಗಂಗಾ ದೋಣಿ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆ ತೆರಳಿ ವಾಪಾಸ್ಸಾಗುವ ವೇಳೆ ಅಲೆಯ ರಭಸಕ್ಕೆ ದೋಣಿ ಮಗುಚಿದ್ದು,ಮೀನುಗಾರರು ಸಮುದ್ರಕ್ಕೆ ಹಾರಿಕೊಂಡು ನಂತರ ಮಗುಚಿದ ದೋಣಿಯ ಮೇಲೆ ಕೂತು ಸಹಾಯ ಯಾಚಿಸಿದ್ದಾರೆ.
ದೋಣಿಯಲ್ಲಿದ್ದ 7 ಮೀನುಗಾರರು ಸಮುದ್ರಕ್ಕೆ ಹಾರಿಕೊಂಡು ನಂತರ ಮಗುಚಿದ ದೋಣಿಯ ಮೇಲೆ ಕೂತು ಸಹಾಯ ಯಾಚಿಸುತ್ತಿರುವುದನ್ನು ಗಮನಿಸಿದ ದಡದಲ್ಲಿದ್ದ ಮೀನುಗಾರರು ತಕ್ಷಣ ಇನ್ನೊಂದು ಬೋಟ್ ಮೂಲಕ 7 ಮಂದಿಯನ್ನು ರಕ್ಷಣೆ ಮಾಡಿ ದಡಕ್ಕೆ ಕರೆ ತಂದಿದ್ದಾರೆ.
ಮುರುಡೇಶ್ವರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು,ದೋಣಿ ಮಗುಚಿದ ಕಾರಣ ದೋಣಿಯ ಎಂಜಿನ್ ಹಾಗೂ ಮೀನುಗಾರಿಕೆಗೆ ಬಳಸುವ ಬಲೆ ಸೇರಿ ಸುಮಾರು ಒಂದೂವರೆ ಲಕ್ಷ ರೂ. ಹಾನಿಯಾಗಿರುವುದಾಗಿ ಅಂದಾಜಿಸಲಾಗಿದೆ.




