ಸಮುದ್ರದಲ್ಲಿ ಬೋಟ್ಗೆ ಬೆಂಕಿ; ಏಳು ಜನ ಮೀನುಗಾರರ ರಕ್ಷಣೆ

ಕಾರವಾರ : ಕಾರವಾರದ ಲೈಟ್ ಹೌಸ್ ಬಳಿ ಸಮುದ್ರದಲ್ಲಿ ಮೀನು ಹಿಡಿಯಲು ತೆರಳಿದ್ದ ಉಡುಪಿ ಮೂಲದ ವರದಾ ಹೆಸರಿನ ಬೋಟೊಂದು ಬೆಂಕಿ ಅವಘಡಕ್ಕೆ ಒಳಗಾಗಿ ದೋಣಿಯಲ್ಲಿದ್ದ ಏಳು ಮಂದಿ ಮೀನುಗಾರರನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ರಕ್ಷಿಸಿದ ಘಟನೆ ನಡೆದಿದೆ.
ಉಡುಪಿ ಜಿಲ್ಲೆಯ ಮಲ್ಪೆಯ ವರದಾ ಹೆಸರಿನ ಬೋಟ್ ಲೈಟ್ ಹೌಸ್ ನಡುಗಡ್ಡೆಯಿಂದ 10 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುತ್ತಿತ್ತು.
ಈ ವೇಳೆ ಇಂಜಿನ್ ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು ಶಾರ್ಟ್ ಸರ್ಕೀಟ್ನಿಂದ ಬೆಂಕಿ ಹೊತ್ತಿಕೊಂಡಿತ್ತು.ಅವಘಡದ ಬಗ್ಗೆ ಮಾಹಿತಿ ಪಡೆದ ನವ ಮಂಗಳೂರಿನ ಕೋಸ್ಟ್ ಗಾರ್ಡ್ ಅಧಿಕಾರಿಗಳು ತಕ್ಷಣವೇ ಕಾರವಾರದ “ಸಿ 155” ಗಸ್ತು ನೌಕೆಯಲ್ಲಿ ರಕ್ಷಣಾ ಸಿಬ್ಬಂದಿಯನ್ನು ಕಾರವಾರಕ್ಕೆ ಕಳುಹಿಸಿಕೊಟ್ಟರು.
ಇನ್ನು ಬೆಂಕಿಯಿಂದ ಧಗಿಸುತಿದ್ದ ಬೋಟಿನಲ್ಲಿ ಮೀನುಗಾರರು ಸಹ ಇದ್ದಿದ್ದರಿಂದ ಬೋಟಿನಲ್ಲಿದ್ದ ಮೀನುಗಾರರನ್ನು ಸಮೀಪದಲ್ಲಿದ್ದ ಮತ್ತೊಂದು ವಜ್ರ ಎಂಬ ಹೆಸರಿನ ಮೀನುಗಾರಿಕಾ ಬೋಟ್ ನಲ್ಲಿ ಸ್ಥಳೀಯ ಮೀನುಗಾರರ ನೆರವಿನಿಂದ ರಕ್ಷಿಸಿ ರವಾನಿಸಿದರು.ಬಳಿಕ ಬೆಂಕಿಯನ್ನು ನಂದಿಸಲಾಯಿತು.ರಕ್ಷಿಸಲಾದ ಎಲ್ಲ ಮೀನುಗಾರರೂ ಯಾವುದೇ ಪ್ರಾಣಾಪಾಯವಿಲ್ಲದೇ ಪಾರಾಗಿದ್ದಾರೆ.
ಬೆಂಕಿ ಹೊತ್ತಿಕೊಂಡ ಬೋಟ್ ನ್ನು ಕಾರವಾರದ ಬೈತಖೋಲ್ ಮೀನುಗಾರಿಕಾ ಬಂದರಿಗೆ ಎಳೆದು ತರಲಾಗಿದೆ.ಕರಾವಳಿ ಕಾವಲು ಪಡೆಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.




