ಕಡಲ ಮಕ್ಕಳ ಕೈಸುಟ್ಟ ಡೀಸೆಲ್; ನಿಷೇಧ ಮುಗಿದರೂ ಮೀನುಗಾರಿಕೆಗೆ ತೆರಳದ ಬೋಟ್ಗಳು

ಕಾರವಾರ : ಮೀನುಗಾರರಿಗೆ ಕಳೆದ 60 ದಿನಗಳಿಂದ ಕಡಲಿಗಿಳಿಯದಂತೆ ಹಾಕಿದ್ದ ನಿರ್ಬಂಧ ಆಗಸ್ಟ್, 1ಕ್ಕೆ ತೆರವಾಗಿದೆ.ಆದರೆ ಕೋವಿಡ್ ಲಾಕ್ಡೌನ್ ಸೇರಿದಂತೆ ಇನ್ನಿತರ ಕಾರಣದಿಂದ ಸಂಕಷ್ಟದಲ್ಲಿದ್ದ ಮೀನುಗಾರರಿಗೆ ಮೊದಲ ದಿನವೇ ಡೀಸೆಲ್ ಬೆಲೆ ಏರಿಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.ಹೀಗಾಗಿ ಕಡಲಿಗೆ ಇಳಿಯಲು ಬೋಟ್ಗಳು ಹಿಂದೇಟು ಹಾಕಿವೆ.
ಜೂನ್ನಲ್ಲಿ ಮಳೆಗಾಲ ಪ್ರಾರಂಭವಾದ ವೇಳೆ ಆಳ ಸಮುದ್ರದಲ್ಲಿ ಮೀನುಗಳು ಮೊಟ್ಟೆ ಇಟ್ಟು ಸಂತಾನೋತ್ಪತ್ತಿಯಲ್ಲಿ ತೊಡಗುವ ಹಿನ್ನೆಲೆಯಲ್ಲಿ ಸರ್ಕಾರ ಎರಡು ತಿಂಗಳ ಕಾಲ ಮೀನುಗಾರಿಕೆಗೆ ನಿಷೇಧವನ್ನು ಹೇರುತ್ತದೆ.ಯಾರಾದರು ನಿಷೇಧ ಉಲ್ಲಂಘಿಸಿ ಕಡಲಿಗೆ ಇಳಿದರೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಬೋಟ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವುದರಿಂದ ಯಾವ ಮೀನುಗಾರಿಕಾ ಬೋಟ್ಗಳು ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವುದಿಲ್ಲ.
ಸರ್ಕಾರ ಹೇರಿದ್ದ ನಿಷೇಧ ಮುಕ್ತಾಯವಾಗಿ ಎರಡು ದಿನ ಕಳೆದರೂ,ಕಡಲಿಗೆ ಇಳಿದು ಮೀನು ಶಿಕಾರಿ ಮಾಡಿ ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದ ಮೀನುಗಾರರು ನಿಷೇಧದ ಎರಡು ತಿಂಗಳ ಅವಧಿಯೊಳಗೆ ಡೀಸೆಲ್ ಬೆಲೆ ಗಗನಕ್ಕೆ ಏರಿರುವುದರಿಂದ ಮೀನು ಶಿಕಾರಿ ಮಾಡಿಕೊಂಡು ಬಂದರೂ ಡೀಸೆಲ್ ಬೆಲೆ ಮೀನಿನ ಮಾರಾಟದಿಂದ ಬಂದ ಹಣಕ್ಕೆ ಸರಿದೂಗುವುದಿಲ್ಲ.ಹಾಗಾಗಿ ಹಲವು ಬೋಟ್ಗಳು ಕಡಲಿಗೆ ಇಳಿಯದೇ ಬಂದರಿನಲ್ಲಿಯೇ ಲಂಗರು ಹಾಕಿ ನಿಲ್ಲುವಂತಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕಿನಲ್ಲಿ ಸಾವಿರಾರು ಬೋಟ್ಗಳು ಮೀನುಗಾರಿಕೆಗೆ ಕಡಲಿಗೆ ಇಳಿಯುತ್ತವೆ.ಕಳೆದ ಮೂರ್ನಾಲ್ಕು ವರ್ಷದಿಂದ ಮೀನುಗಾರರು ಒಂದಲ್ಲಾ ಒಂದು ಸಮಸ್ಯೆ ಎದುರಿಸುತ್ತಿದ್ದಾರೆ.ಮತ್ಸ್ಯ ಕ್ಷಾಮದಿಂದ ಕಂಗಾಲಾಗಿದ್ದ ಮೀನುಗಾರರಿಗೆ ಉತ್ತಮವಾಗಿ ಮೀನು ಶಿಕಾರಿ ಮಾಡುವ ಸಮಯ ಬಂದಾಗ ಕೊರೋನಾ ಲಾಕ್ಡೌನ್ ಎದುರಾಗಿ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ ಈ ಬಾರಿ ಡೀಸೆಲ್ ಬೆಲೆ ಏರಿಕೆ ದೊಡ್ಡ ಸಮಸ್ಯೆಯಾಗಿ ಮೀನುಗಾರರಿಗೆ ಕಾಡ ತೊಡಗಿದೆ.
ಈ ಬಾರಿ ಮೀನುಗಾರರಿಗೆ ಸಬ್ಸಿಡಿ ದರದಲ್ಲಿ ಡೀಸೆಲ್ ಕೊಡುವುದನ್ನು ನಿಲ್ಲಿಸಿದ್ದು, ಟ್ಯಾಕ್ಸ್ ಫ್ರೀ ಡೀಸೆಲ್ ಕೊಡಲಾಗುವುದು ಎಂದು ಮೀನುಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಜಿಲ್ಲೆಯ ಕಾರವಾರ ಬಂದರಿನಲ್ಲಿ ಮಾತ್ರವಲ್ಲದೇ ಅಂಕೋಲಾ,ತದಡಿ, ಕುಮಟಾ,ಹೊನ್ನಾವರ,ಭಟ್ಕಳದಲ್ಲಿ ಕಡಲಿಗೆ ಮೀನುಗಾರಿಕೆ ಬೋಟ್ಗಳು ಇಳಿಯಲು ಹಿಂದೇಟು ಹಾಕಿದ್ದಾರೆ.
ಆಳ ಸಮುದ್ರದಲ್ಲಿ ಅಲೆಗಳ ಅಬ್ಬರ ಸಹ ಅಧಿಕವಾಗಿರುವ ಹಿನ್ನೆಲೆಯಲ್ಲಿ ಮೀನುಗಾರರು ಕಡಲಿಗೆ ಇಳಿಯಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಮೀನುಗಾರರಿಗೆ ಎರಡು ತಿಂಗಳು ಹಾಕಿದ್ದ ನಿರ್ಬಂಧ ಅವಧಿ ಮುಕ್ತಾಯವಾಗಿದ್ದು, ಇದರ ನಡುವೆ ಡೀಸೆಲ್ ಬೆಲೆ ಏರಿಕೆ ಮೀನುಗಾರರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.




