ಹೊನ್ನಾವರ: ಸ್ಥಳಾವಕಾಶದ ಕೊರತೆ; ಇಕೋ ಬೀಚ್ನಲ್ಲಿ ದೋಣಿಗಳ ಲಂಗರು

ಕಾರವಾರ : ಹೊನ್ನಾವರ ತಾಲೂಕಿನ ಕಾಸರಕೋಡಿನಲ್ಲಿ ನಿರ್ಮಾಣವಾಗುತ್ತಿರುವ ಉದ್ದೇಶಿತ ವಾಣಿಜ್ಯ ಬಂದರು ಸ್ಥಳದಲ್ಲಿ ಮೀನುಗಾರಿಕೆಗೆ ತೊಡಕುಂಟಾಗುತ್ತಿರುವ ಹಿನ್ನೆಲೆಯಲ್ಲಿ ಮೀನುಗಾರರು ಕಂಗಾಲಾಗಿದ್ದಾರೆ.ಸಾಂಪ್ರದಾಯಿಕ ನಾಡದೋಣಿ ಮೀನುಗಾರರು ತಮ್ಮ ದೋಣಿಗಳನ್ನು ದಡದಲ್ಲಿ ಲಂಗರು ಹಾಕಲು ಸ್ಥಳಾಭಾವ ಎದುರಿಸುತ್ತಿದ್ದಾರೆ. ಈ ಕಾರಣಕ್ಕೆ ಅಂತರಾಷ್ಟ್ರೀಯ ಬ್ಲೂ ಪ್ಲ್ಯಾಗ್ ಮಾನ್ಯತೆ ಹೊಂದಿರುವ ಇಕೋ ಬೀಚ್ ನಲ್ಲಿ ನಾಡದೋಣಿಗಳನ್ನು ಲಂಗರು ಹಾಕುವ ಮೂಲಕ ಸರ್ಕಾರ ತಮ್ಮ ಅಳಲನ್ನು ಕೇಳುತ್ತಿಲ್ಲವೆಂದು ಅಸಮಾಧಾನಗೊಂಡಿದ್ದಾರೆ.
ಮಳೆಗಾಲದ ಎರಡು ತಿಂಗಳ ಅವಧಿಯಲ್ಲಿ ನಾಡದೋಣಿಗಳ ಮೂಲಕ ಮೀನುಗಾರಿಕೆ ನಡೆಸುವವರು ಸಮುದ್ರ ತಟದಲ್ಲಿ ದೋಣಿಗಳನ್ನು ಲಂಗರು
ಹಾಕಬೇಕಾಗುತ್ತದೆ.ಬಂದರು ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ದೋಣಿಗಳನ್ನು ಲಂಗರು ಹಾಕಲು ಸಮಸ್ಯೆಯಾಗುತ್ತಿದೆ.ಇದನ್ನು ಮನಗಂಡ ಮೀನುಗಾರರು ದೋಣಿಗಳನ್ನು ಇಕೋ ಬೀಚ್ ನಲ್ಲಿ ಇಟ್ಟಿದ್ದಾರೆ.
ಈ ಪ್ರದೇಶಗಳಲ್ಲಿ 800 ಕ್ಕೂ ಅಧಿಕ ನಾಡದೋಣಿಗಳಿದ್ದು,ಮುಂದಿನ ದಿನಗಳಲ್ಲಿ ವಾಣಿಜ್ಯ ಬಂದರು ಸಮಸ್ಯೆ ಗಂಭೀರವಾದಲ್ಲಿ ಮೀನುಗಾರರು ದೋಣಿಗಳನ್ನು ಲಂಗರು ಹಾಕಲು ಇಕೋ ಬೀಚ್ ಮತ್ತಿತರ ಪ್ರದೇಶ ಅವಲಂಬಿಸಬೇಕಾಗುತ್ತದೆ. ಸರ್ಕಾರ ಹಾಗೂ ಅಧಿಕಾರಿಗಳು ಮೀನುಗಾರರ ಈ ಸಮಸ್ಯೆಯನ್ನು ಬಗೆಹರಿಸಿ ಮೀನುಗಾರಿಕೆಗೆ ತೊಂದರೆಯಾಗದಂತೆ ಬಂದರು ನಿರ್ಮಾಣ ಕಾಮಗಾರಿಯತ್ತ ಗಮನ ಹರಿಸಬೇಕಿದೆ.




