ಖರ್ಗೆ ಹುಟ್ಟುಹಬ್ಬ; ಕಲಬುರ್ಗಿಯಲ್ಲಿ ಸಂಭ್ರಮಿಸಿದ ಅಭಿಮಾನಿಗಳು

ಕಲಬುರ್ಗಿ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ರಾಜ್ಯಸಭಾ ಪ್ರತಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ 80ನೇ ವಸಂತಕ್ಕೆ ಕಾಲಿಟ್ಟಿರುವ ಹಿನ್ನೆಲೆ ಕಲಬುರ್ಗಿಯಲ್ಲಿ ಅವರ ಅಭಿಮಾನಿಗಳು ಭವ್ಯವಾಗಿ ಜನ್ಮದಿನಆಚರಿಸಿದರು.
ನಗರದ ಜಗತ್ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರು, ಮಲ್ಲಿಕಾರ್ಜುನ ಖರ್ಗೆ ಅವರ ಸುಮಾರು ಇನ್ನೂರು ಅಡಿ ಎತ್ತರದ ಫ್ಲೆಕ್ಸ್ ಗೆ ಪುಷ್ಪಾರ್ಚನೆ ಮಾಡಿದರು. ಪಟಾಕಿಗಳನ್ನು ಸಿಡಿಸಿ, ಕೇಕ್ ಕತ್ತರಿಸಿ, ಪರಸ್ಪರ ಸಿಹಿ ಹಂಚಿಕೊಂಡ ಅಭಿಮಾನಿಗಳು, ಡೋಲಕ್ ಸದ್ದಿಗೆ ಸ್ಟೆಪ್ ಗಳನ್ನು ಹಾಕಿ ಸಂಭ್ರಮಿಸಿದರು. ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರ ಪರವಾಗಿ ಘೋಷಣೆ ಕೂಗಿದ ಕಾರ್ಯಕರ್ತರು, ಮುಂದಿನ ಸಿಎಂ ಖರ್ಗೆ ಎಂದು ಸಂಭ್ರಮಾಚರಣೆ ಮಾಡಿದರು.
ಇನ್ನೊಂದೆಡೆ, ದೆಹಲಿಯಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಲಬುರ್ಗಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಭೇಟಿಯಾಗಿ ಹುಟ್ಟುಹಬ್ಬದ ಅಭಿನಂದನೆ ಸಲ್ಲಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ್ ಗುತ್ತೇದಾರ ಅವರ ನೇತೃತ್ವದಲ್ಲಿ ನೂರಾರು ಜನ ದೆಹಲಿಗೆ ತೆರಳಿದ್ದಾರೆ.




