Breaking NewsLatestಕೃಷಿರಾಷ್ಟ್ರೀಯ

ಸರ್ಕಾರವನ್ನು ಎಚ್ಚರಿಸಲು ರೈತರ ಹೊಸ ನಡೆ; ಜು.22ರಿಂದ ಸಂಸತ್ ಭವನದ ಹೊರಗೆ ಶಾಂತಿಯುತ ಪ್ರತಿಭಟನೆ

ನವದೆಹಲಿ: ಗುರುವಾರದಿಂದ ಸಂಸತ್ ಭವನದ ಹೊರಗೆ ರೈತರ ಪ್ರತಿಭಟನೆ ಆರಂಭವಾಗಲಿದೆ. 22 ರಾಜ್ಯಗಳ ರೈತರು ಈ ಪ್ರತಿಭಟನೆಯಲ್ಲಿ ಭಾಗಿಯಾಗಲು ದೆಹಲಿಯತ್ತ ಆಗಮಿಸುತ್ತಿದ್ದಾರೆ.

ಸಂಸತ್ ಮುಂಗಾರು ಅಧಿವೇಶನ ನಡೆಯುವಷ್ಟೂ ಕಾಲ ಸಂಸತ್ ಭವನದ ಹೊರಗೆ ಪ್ರತಿಭಟನೆ ನಡೆಯಲಿದ್ದು, ಪ್ರತಿದಿನ 200 ರೈತರಂತೆ ಪಾಲ್ಗೊಳ್ಳಲಿದ್ದಾರೆ ಎಂದು ವಿವಿಧ ರೈತ ಸಂಘಟನೆಗಳ ಒಕ್ಕೂಟವಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ಒತ್ತಾಯಿಸಿ ಕಳೆದ ವರ್ಷದ ನವೆಂಬರ್​ನಿಂದ ನಿರಂತರವಾಗಿ ರೈತರು ಪ್ರತಿಭಟನೆಯಲ್ಲಿ ತೊಡಗಿದ್ದು, ಇದೀಗ ಸರ್ಕಾರದ ಮೇಲೆ ಇನ್ನಷ್ಟು ಒತ್ತಡ ಹೇರಲು ಮುಂಗಾರು ಅಧಿವೇಶನದ ಸಂದರ್ಭದಲ್ಲಿ ನಿತ್ಯವೂ ಸಂಸತ್ ಭವನದ ಹೊರಗೆ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.

ಪ್ರತಿಭನೆಯ ಒಟ್ಟು ಸ್ವರೂಪ ಮತ್ತು ವಿವಿಧ ರಾಜ್ಯಗಳಿಂದ ರೈತರು ಆಗಮಿಸುವ ಹಿನ್ನೆಲೆಯಲ್ಲಿ ಇರಬೇಕಾದ ಅಗತ್ಯ ಸಮನ್ವಯದ ಬಗ್ಗೆ ಈಗಾಗಲೇ ರೈತ ಸಂಘಟನೆಗಳು ಚರ್ಚಿಸಿ ಅಂತಿಮ ರೂಪುರೇಷೆ ಸಿದ್ಧಪಡಿಸಿವೆ.

ಪಂಜಾಬ್, ಹರ್ಯಾಣದಿಂದ ಬರಲಿರುವ ಬೃಹತ್ ಸಂಖ್ಯೆಯ ರೈತರೊಂದಿಗೆ, ತಮಿಳ್ನಾಡು, ಕೇರಳ, ಕರ್ನಾಟಕ, ಆಂಧ್ರ, ತೆಲಂಗಾಣ, ಒಡಿಶಾ, ಪಶ್ಚಿಮ ಬಂಗಾಳ, ಅಸ್ಸಾಂ, ತ್ರಿಪುರ, ಮಣಿಪುರ, ಛತ್ತಿಸ್​ಘಡ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ಬಿಹಾರ್, ಜಾರ್ಖಂಡ್, ಉತ್ತರ ಪ್ರದೇಶ, ಉತ್ತರಾಖಂಡ್, ಹಿಮಾಚಲ ಪ್ರದೇಶ ಮತ್ತು ರಾಜಸ್ತಾನದ ರೈತರು ಈ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.

ಪ್ರತಿಭಟನೆ ಶಾಂತಿಯುತವಾಗಿರಲಿದೆ ಎಂದು ಕಿಸಾನ್ ಮೋರ್ಚಾ ತಿಳಿಸಿದೆ. ಪ್ರತಿಭಟನೆ ನಡೆಯುವ ಸಂಬಂಧ ದೆಹಲಿ ಪೊಲೀಸರ ಜೊತೆ ರೈತ ನಾಯಕರುಗಳ ಸಭೆ ಕೂಡ ಈಗಾಗಲೇ ನಡೆದಿದೆ.

ವಿವಿಧ ರಾಜ್ಯಗಳಿಂದ ಟ್ರ್ಯಾಕ್ಟರ್​ಗಳಲ್ಲಿ ಹೊರಟಿರುವ ರೈತರು ಬುಧವಾರ ಸಂಜೆ ರಾಜಧಾನಿ ತಲುಪಲಿದ್ದಾರೆ. ಈಗಾಗಲೇ ಕಳೆದ ನವೆಂಬರ್​ನಿಂದ ಪ್ರತಿಭಟನೆ ನಡೆಯುತ್ತಿರುವ ದೆಹಲಿ ಗಡಿಯಲ್ಲಿನ ಸಿಂಘು, ಗಾಜಿಯಾಬಾದ್, ತಿಕ್ರಿ, ಧಾನ್ಶಾ, ಮತ್ತು ರಾಜಸ್ತಾನ-ಹರ್ಯಾಣ ಗಡಿಯ ಶಹಜಾನ್​ಪುರ ಈ 5 ಸ್ಥಳಗಳಲ್ಲಿ ಈಗಾಗಲೇ ಇರುವ ರೈತರೊಡನೆ ಹೊಸದಾಗಿ ಪ್ರತಿಭನೆಟಗೆ ಆಗಮಿಸುವ ರೈತರಿಗೂ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಈ ಸ್ಥಳಗಳಿಂದಲೇ ಪ್ರತಿದಿನ 200 ರೈತರಂತೆ ಸಂಸತ್ ಭವನದ ಬಳಿ ಪ್ರತಿಭನೆಗೆ ಕರೆದೊಯ್ಯಲು ಯೋಜನೆ ರೂಪಿಸಲಾಗಿದೆ.

ಪ್ರತಿಭಟನೆಗೆ ಸ್ಪಂದಿಸುವ ಯೋಚನೆಯೇ ಸರ್ಕಾರಕ್ಕೆ ಇಲ್ಲ. ಯಾಕೆಂದರೆ ಈ ಸರ್ಕಾರ ಯಾವುದೇ ಪಕ್ಷದ ಸರ್ಕಾರವಾಗಿರದೆ, ಕಂಪನಿಗಳಿಂದ ನಡೆಯುತ್ತಿರುವ ಸರ್ಕಾರವಾಗಿದೆ ಎಂದು ಭಾರತೀಯ ಕಿಸಾನ್ ಯೂನಿಯನ್​ನ ನಾಯಕ ರಾಕೇಶ್ ಟಿಕಾಯತ್ ಸರ್ಕಾರವನ್ನು ಟೀಕಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button