ಚಾಮರಾಜನಗರ

ಬಿಎಸ್​ವೈ ಪರ ಹೇಳಿಕೆ; ಸ್ವಾಮೀಜಿಗಳ ವಿರುದ್ಧ ಶ್ರೀನಿವಾಸ್​ಪ್ರಸಾದ್ ಕಿಡಿ

ಚಾಮರಾಜನಗರ: ಹೈಕಮಾಂಡ್ ನಡುವಿನ ಒಪ್ಪಂದದಂತೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದಾರೆಂದು ಸಂಸದ ಶ್ರೀನಿವಾಸಪ್ರಸಾದ್ ಹೇಳಿದ್ದಾರೆ.

ಚಾಮರಾಜನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 75 ವರ್ಷ ಮೇಲ್ಪಟ್ಟವರಿಗೆ ಆಯಕಟ್ಟಿನ ಹುದ್ದೆ ನೀಡಬಾರದೆಂಬ ಪಕ್ಷದ ನಿಲುವು ಇದೆ. ಆದರೂ ಯಡಿಯೂರಪ್ಪ ಅವರಿಗಾಗಿ ನಿಯಮ ಬದಲಿಸಿ ಸಿಎಂ ಸ್ಥಾನ ಕೊಟ್ಟಿದ್ದಾರೆ. ಎರಡು ವರ್ಷಗಳ ಬಳಿಕ ರಾಜೀನಾಮೆ ಕೊಡಬೇಕೆಂತಲೂ ಒಪ್ಪಂದ ಆಗಿತ್ತು. ಆ ಹಿನ್ನೆಲೆಯಲ್ಲಿ ಸಿಎಂ ರಾಜೀನಾಮೆ ಕೊಡಲಿದ್ದಾರೆ, ಬಿಜೆಪಿ ಹೈಕಮಾಂಡ್ ಕೂಡ ಯಡಿಯೂರಪ್ಪ ಅವರನ್ನು ಬಹಳ ಗೌರವಯುತವಾಗಿ ನೋಡಿಕೊಂಡಿದ್ದಾರೆ. ಈ ಹಿನ್ನೆಲೆ ರಾಜೀನಾಮೆ ಕೊಡುವ ಬಗ್ಗೆ ಯಡಿಯೂರಪ್ಪ ಅವರೇ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ತಿಳಿಸಿದರು.

ಹೈಕಮಾಂಡ್ ಮತ್ತು ಬಿಎಸ್ವೈ ಅವರ ವಿಚಾರ ಇದಾಗಿದ್ದು, ಮೂರನೇಯವರು ಮಾತನಾಡಬಾರದು, ಸ್ವಾಮೀಜಿಗಳು ಯಡಿಯೂರಪ್ಪ ಅವರೇ ಮುಂದುವರೆಯಬೇಕೆಂದು ಹೇಳುತ್ತಿದ್ದಾರೆ. ಸ್ವಾಮೀಜಿಗಳೇನು ಸೂಪರ್ ಹೈಕಮಾಂಡಾ..? ಎಂದು ಮಠಾಧೀಶರ ವಿರುದ್ಧ ಶ್ರೀನಿವಾಸ್ ಪ್ರಸಾದ್ ಕಿಡಿಕಾರಿದರು.

ಎಚ್‌.ವಿಶ್ವನಾಥ್ ಹೇಳಿಕೆಗಳಿಗೆ ಅವರು ಇದೇ ವೇಳೆ ಪ್ರತಿಕ್ರಿಯಿಸಿ, ವಿಶ್ವನಾಥ್ ಹೇಳಿಕೆಗಳಿಗೆ ಚಿಕ್ಕಾಸಿನ ಬೆಲೆಯಿಲ್ಲ, ನಾವು ಪಕ್ಷ ಕಟ್ಟಿದವರಲ್ಲ ಬೇರೆ ಪಕ್ಷದಲ್ಲಿ ಅನ್ಯಾಯ ಆಯಿತೆಂದು ನಾನು, ವಿಶ್ವನಾಥ್ ಇಲ್ಲಿಗೆ ಬಂದವರು, ಪಕ್ಷ ಬಲಪಡಿಸುವ ಕೆಲಸ ಮಾಡಬೇಕೇ ಹೊರತು ಹೊರೆಯಾಗಬಾರದು, ತೆವಳಿಗೆಲ್ಲಾ ಹೇಳಿಕೆ ಕೊಡಬಾರದು, ನಾನೇನು ಹೈಕಮಾಂಡಾ, ವಿಶ್ವನಾಥ್ ಹೈ ಕಮಾಂಡಾ ಎಂದು ಎಚ್.ವಿ ವಿರುದ್ಧ ಎಸ್ ಪಿ ವಾಗ್ದಾಳಿ ನಡೆಸಿದರು.

ದಲಿತ ಸಿಎಂ ಮಾಡಲು ಈಗ ಬಿಜೆಪಿಗೆ ಅವಕಾಶವಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದ ವಿ.ಶ್ರೀನಿವಾಸ್ ಪ್ರಸಾದ್, ದಲಿತ ಸಿಎಂ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಯಾರು ಎಂದು ಶ್ರೀನಿವಾಸ ಪ್ರಸಾದ್ ಖಾರವಾಗಿ ಪ್ರಶ್ನಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button