Breaking NewsLatestಚಾಮರಾಜನಗರಜಿಲ್ಲಾ ಸುದ್ದಿ

ಮಲೈ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಮಹೋತ್ಸವ

ಚಾಮರಾಜನಗರ: ಮಲೈ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಮಹೋತ್ಸವ ಅಂಗವಾಗಿ ಧಾರ್ಮಿಕ ವಿಧಿವಿಧಾನಗಳು ನಿನ್ನೆಯಿಂದಲೇ ಆರಂಭವಾಗಿದೆ. ಇಂದು ಮಹದೇಶ್ವರ ಸ್ವಾಮಿಗೆ ವಿವಿಧ ಅಭಿಷೇಕಗಳ ಮೂಲಕ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಮಲೈ ಮಹದೇಶ್ವರ ಬೆಟ್ಟದಲ್ಲಿ ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದಿಂದ ಕೆಲ ದಿನಗಳ ಹಿಂದೆಯೇ ಎಲ್ಲಾ ಸಿದ್ದತೆ ಮಾಡಿಕೊಂಡಿತ್ತು. ಇಂದು ಹಾಲಿನ ಅಭಿಷೇಕ, ರುದ್ರಾಭಿಷೇಕ, ಎಳನೀರು ಅಭಿಷೇಕ ಸೇರಿ ವಿವಿಧ ಪೂಜಾ ಕೈಂಕರ್ಯಗಳು ನಡೆಯುತ್ತಿದೆ.

ನಾಲ್ಕು ದಿನಗಳಿಂದ ಭಕ್ತರು ಪಾದಯಾತ್ರೆ ಮೂಲಕ ವಾಹನಗಳಲ್ಲಿ, ಬಸ್ ಗಳಲ್ಲಿ ತಂಡೋಪತಂಡವಾಗಿ ಮಹದೇಶ್ವರ ಬೆಟ್ಟಕ್ಕೆ ಬಂದು ಮಾದಪ್ಪನ ದರ್ಶನ ಮಾಡುತ್ತಿದ್ದಾರೆ.

ಮಾರ್ಚ್ 3ರವರೆಗೆ ಶಿವರಾತ್ರಿ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ ಬೆಟ್ಟದಲ್ಲಿ ಭಕ್ತರ ವ್ಯಾಸ್ತವ್ಯಕ್ಕೆ ಅವಕಾಶ ನಿರ್ಬಂಧಿಸಲಾಗಿದೆ.

ರಾತ್ರಿ 10 ಗಂಟೆಯವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ಸೇವೆಗಳೂ ಲಭ್ಯವಿದೆ. ದಾಸೋಹ ವ್ಯವಸ್ಥೆಯೂ ಇದ್ದು, ಬೆಟ್ಟಕ್ಕೆ ಬಂದ ಭಕ್ತರು ರಾತ್ರಿ ಬೆಟ್ಟದಿಂದ ಹೊರಡುವುದು ಕಡ್ಡಾಯ. ಇದಕ್ಕಾಗಿ, ಕೆಎಸ್ ಆರ್ ಟಿ ಸಿ ವತಿಯಿಂದ ಹೆಚ್ಚುವರಿ ಬಸ್ ವ್ಯವಸ್ಥೆಗಳನ್ನೂ ಮಾಡಲಾಗಿದೆ.

ಪ್ರತಿ ವರ್ಷ ಶಿವರಾತ್ರಿ ಜಾತ್ರಾ ಮಹೋತ್ಸವ ನಾಲ್ಕು ದಿನಗಳ ಕಾಲ ನಡೆಯುತ್ತದೆ. ಲಕ್ಷಾಂತರ ಭಕ್ತರು ಈ ಸಮಯದಲ್ಲಿ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಕೊನೆಯ ದಿನ ಮಹಾ ರಥೋತ್ಸವ ನಡೆಯುತ್ತಿದೆ. ಅದೇ ದಿನ ರಾತ್ರಿ ಕೊಂಡೋತ್ಸವ ನಡೆಯುತ್ತದೆ.

ಇಂದು ಮಹದೇಶ್ವರ ಸ್ವಾಮಿಗೆ ಎಣ್ಣೆಮಜ್ಜನ ಸೇವೆ, ವಿಶೇಷ ಸೇವೆ ಮತ್ತು ಉತ್ಸವಗಳು ಜರುಗಲಿವೆ. ನಾಳೆ ಬುಧವಾರ ಅಮಾವಾಸ್ಯೆ ವಿಶೇಷ ಪೂಜೆ ಮತ್ತು ಉತ್ಸವಗಳು ಹಾಗೂ ಗುರುವಾರ ಮಾರ್ಚ್ 3ರಂದು ಬೆಳಿಗ್ಗೆ 8.10 ರಿಂದ 8.45 ಕ್ಕೆ ಸಲ್ಲುವ ಶುಭ ಮುಹೂರ್ತದಲ್ಲಿ ಮಾದೇಶ್ವರ ಸ್ವಾಮಿಯ ಮಹಾ ರಥೋತ್ಸವ ನೆರವೇರಲಿದೆ. ಅಂದೇ ದಿನ ರಾತ್ರಿ ಅಭಿಷೇಕ ಮುಗಿದ ಬಳಿಕ ನಡೆಯುವ ಕೊಂಡೋತ್ಸದೊಂದಿಗೆ ಈ ಬಾರಿಯ ಉತ್ಸವಕ್ಕೆ ತೆರೆ ಬೀಳಲಿದೆ.

3ರಂದು ನಡೆಯಲಿರುವ ರಥೋತ್ಸವದಲ್ಲಿ ಭಾಗಿಯಲು ಭಕ್ತರಿಗೆ ಅವಕಾಶ ಇಲ್ಲ. ಸ್ಥಳೀಯರು, ಪ್ರಾಧಿಕಾರದ ಅಧಿಕಾರಿಗಳು, ಸಿಬ್ಬಂದಿ ಮಾತ್ರ ಭಾಗವಹಿಸಲಿದ್ದಾರೆ. ಮಾರ್ಚ್ 2ರಂದು ಮಧ್ಯಾಹ್ನ 3 ಗಂಟೆಯಿಂದ ಮರುದಿನ ಮಧ್ಯಾಹ್ನದವರೆಗೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಮಹಾಶಿವರಾತ್ರಿ ಜಾತ್ರೆ ಪ್ರಾರಂಭವಾಗುವುದಕ್ಕೂ ಹಲವು ದಿನಗಳ ಮುಂಚಿತವಾಗಿ ಬೆಟ್ಟಕ್ಕೆ ಬರುವ ಭಕ್ತರು, ದೇವಾಲಯದ ಹೊರಭಾಗದಲ್ಲಿ ರಜಾ (ಕಸ) ಹೊಡೆದು ಹರಕೆಯನ್ನು ತೀರಿಸುತ್ತಿದ್ದರು. 15 ದಿನ ಮತ್ತು 7 ದಿನ ಅಥವಾ ಐದು ದಿನಗಳ ಕಾಲ ರಜಾ ಹೊಡೆದು ಮಹಾಶಿವರಾತ್ರಿ ದಿನದಂದು ತಮ್ಮ ಹರಕೆಗಳನ್ನು ತೀರಿಸುತಿದ್ದರು. ಕಳೆದ ಬಾರಿಯೂ ಜಾತ್ರೆ ರದ್ದಾಗಿದ್ದರಿಂದ ಹರಕೆ ಕಾಣಿಕೆಗಳು ತೀರಿಸಲಾಗಿಲ್ಲ. ಈ ಬಾರಿಯೂ ಕೋವಿಡ್ ನಿಯಮ ಜಾರಿಯಲ್ಲಿರುವುದರಿಂದ ಅರ್ಧದಷ್ಟು ಯಾತ್ರೆಯನ್ನು ಮೊಟಕುಗೊಳಿಸಿದ್ದಾರೆ.
ಏಳು ಲಕ್ಷ ಲಾಡು ತಯಾರಿಕೆ
ಸಾವಿರಾರು ಭಕ್ತರು ಕ್ಷೇತ್ರಕ್ಕೆ ಬರುವುದರಿಂದ ಲಾಡು ಪ್ರಸಾದ ಮಾರಾಟಕ್ಕಾಗಿ ಏಳು ಲಕ್ಷ ಲಾಡು ತಯಾರಿಸಲಾಗುತ್ತಿದೆ. ಇದೇ 25ರಿಂದ ಲಾಡು ತಯಾರಿಕೆ ಆರಂಭವಾಗಿದ್ದು, ಮಾರ್ಚ್ 3ರವರೆಗೂ ತಯಾರಿಕೆ ಮುಂದುವರಿಯಲಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button