ಕೃಷ್ಣಾ ನದಿ ಪ್ರವಾಹದಿಂದಾದ ಹಾನಿ ಕುರಿತು ಜಮಖಂಡಿಯಲ್ಲಿ ಸಭೆ

ಬಾಗಲಕೋಟೆ: ಜಮಖಂಡಿ ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಿಂದ ಸತತವಾಗಿ ಪ್ರವಾಹ ಉಂಟಾಗಿ ಜನರು ರೈತರ ಪರಿಸ್ಥಿತಿ ಚಿಂತಾಜನಕ ಆಗಿದೆ. ಮನೆ, ಬೆಳೆ ಕಳೆದುಕೊಂಡು ಸಂತ್ರಸ್ತರು ಜೀವನ ಬರ್ಬಾದ್ ಆಗಿದೆ. ಸರ್ಕಾರದಿಂದ ಸಿಗಬೇಕಾದ ನೆರವು ಸಿಗುತ್ತಿಲ್ಲ ಎನ್ನುವ ಕೂಗು ಇದ್ದು, ಈ ನಿಟ್ಟಿನಲ್ಲಿ ಜಮಖಂಡಿಯಲ್ಲಿ ಕೃಷ್ಣಾ ನದಿ ಪ್ರವಾಹದಿಂದ ಉಂಟಾದ ಕುಂದುಕೊರತೆಗಳ ಬಗ್ಗೆ ಸಭೆ ನಡೆಯಿತು.
ಜಮಖಂಡಿ ನಗರದ ಶ್ರೀ ನಂದಿಕೇಶ್ವರ ದೇವಸ್ಥಾನದಲ್ಲಿ ಕೃಷ್ಣಾ ತೀರ ರೈತ ಸಂಘದ ನೇತೃತ್ವದಲ್ಲಿ ಕೃಷ್ಣಾ ನದಿ ಪ್ರವಾಹ ಉಂಟಾದ ಕುಂದು ಕೊರತೆಗಳ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳೊಂದಿಗೆ ಸಾರ್ವಜನಿಕ ಸಭೆ ಕರೆಯಲಾಗಿತ್ತು. ಸಭೆಯಯಲ್ಲಿ ರೈತರು, ರಾಜಕೀಯ ನಾಯಕರು ಹಲವು ಚರ್ಚೆ ಮಾಡಿ ನಿರ್ಣಯ ತೆಗೆದುಕೊಂಡರು.
ಮೊದಲನೆಯದಾಗಿ ಕೃಷ್ಣಾ ಮೇಲ್ದಂಡೆ ಯೋಜನೆಯ 524 ಮುಳುಗಡೆ ಮಾಡಿ ಶಾಶ್ವತ ಪರಿಹಾರ ಘೋಷಣೆ ಮಾಡುವುದು. ಮತಕ್ಷೇತ್ರದ ಎಲ್ಲ ಪುನರ್ ವಸತಿ ಕೇಂದ್ರಗಳನ್ನು ಮೂಲ ಗ್ರಾಮ ಪಂಚಾಯತ ಗಳಿಗೆ ವರ್ಗಾವಣೆ ಮಾಡಬೇಕು.ಇನ್ನು ಹಿರೇಪಡಸಲಗಿ, ಕುಂಬರಹಳ್ಳ, ಸನಾಳ ಗ್ರಾಮಗಳ ಪುನರ್ ವಸತಿ ಕೇಂದ್ರಗಳನ್ನು ಮಾಡುವುದು.ಆಗಸ್ಟ್ 2019 ರಲ್ಲಿ ಆದ ಪ್ರವಾಹದಲ್ಲಿ ನೀಡಿದ ಪರಿಹಾರ ಪ್ರಕಾರ 2021 ರಲ್ಲಿ ಬಂದ ಪ್ರವಾಹಕ್ಕೂ ಪರಿಹಾರ ನೀಡಬೇಕು. ಸುಮಾರು 20 ರಿಂದ 30 ವರ್ಷಗಳಿಂದ ವಾಸವಿರುವ ಜನರಿಗೆ ಪುನರ್ ವಸತಿ ಕೇಂದ್ರಗಳಲ್ಲಿ ಜಾಗ ನೀಡುವುದು ಎಂದು ಎಲ್ಲ ಸಂತ್ರಸ್ತರ ಹಾಗೂ ಎಲ್ಲ ಮುಖಂಡರ ಒಪ್ಪಿಗೆ ಮೇರೆಗೆ ರಾಜ್ಯದ ಮುಖ್ಯ ಮಂತ್ರಿಗಳಿಗೆ ಹಾಗೂ ನೀರಾವರಿ ಮಂತ್ರಿಗಳಿಗೆ ಮನವಿ ಸಲ್ಲಿಸಲು ನಿರ್ಣಯ ತೆಗೆದುಕೊಳ್ಳಲಾಯಿತು.
ಎಲ್ಲ ರಾಜಕೀಯ ಮುಖಂಡರು, ಗ್ರಾಮ ಪಂಚಾಯತ ಚುನಾಯಿತ ಸದಸ್ಯರು, ಹಾಗೂ ಎಲ್ಲ ಗ್ರಾಮಗಳ ಹಿರಿಯರು, ಮುಖಂಡರು ಮತ್ತು ಮುಂಚೂಣಿ ಘಟಕದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.




