ಗ್ರಾಮಗಳಲ್ಲೇ ಬೀಡುಬಿಟ್ಟ ಕಾಡಾನೆಗಳು; ಸರ್ಕಾರ ನಿರ್ಲಕ್ಷ್ಯ

ಚಿಕ್ಕಮಗಳೂರು: ಮಲೆನಾಡು ಭಾಗದ ಅನೇಕ ಗ್ರಾಮಗಳಲ್ಲಿ ಕಾಡಾನೆಗಳು ರೈತರ ಗದ್ದೆ, ತೋಟ, ಜನವಸತಿ ಪ್ರದೇಶಗಳಿಗೆ ಲಗ್ಗೆಯಿಡುವುದು ಮುಂದುವರಿಸಿದ್ದು, ಜನ ಆತಂಕದಲ್ಲೇ ದಿನದೂಡುವಂತಾಗಿದೆ.
ಪ್ರತೀದಿನ ಒಂದಿಲ್ಲೊಂದು ದಿಕ್ಕಿನತ್ತ ಹಿಂಡು ಹಿಂಡಾಗಿ ಸಾಗಿ ಜನರನ್ನು ದಂಗುಬಡಿಸುತ್ತಿವೆ. ಇಂದು ಗೋಣಿಬೀಡು ಹೊಸಹಳ್ಳಿ ಗ್ರಾಮದ ಜನವಸತಿ ಪ್ರದೇಶದಲ್ಲಿ ಕಾಡಾನೆಯೊಂದು ರಸ್ತೆ ದಾಟುತ್ತಿರುವ ದೃಶ್ಯವನ್ನು ಸ್ಥಳೀಯರು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.
ಮೂಲರಹಳ್ಳಿ ಗ್ರಾಮದಲ್ಲಿ ಮೂರು ಕಾಡಾನೆಗಳು ಬೀಡುಬಿಟ್ಟಿವೆ. ಮೂಲರಹಳ್ಳಿಯ ನವೀನ್, ರವೀಶ್, ಸುಬ್ರಾಯಗೌಡ, ಲಕ್ಷ್ಮಣಗೌಡ, ರಘುರಾಮ್, ಭೈರಪ್ಪ ಗೌಡ, ಕಿರಣ್, ಕೃಷ್ಣೇಗೌಡ ಎಂಬವರ ತೋಟಗಳಿಗೆ ನುಗ್ಗಿ ಕಾಫಿ, ಅಡಕೆ, ಮೆಣಸು ಮುಂತಾದ ಬೆಳೆಗಳನ್ನು ನಾಶ ಮಾಡಿವೆ.

ಮೂಲರಹಳ್ಳಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದ್ದು ಇಲ್ಲಿ ಜೀವನ ಸಾಗಿಸುವುದು ದುಸ್ತರವಾಗಿದೆ. ಮಳೆಯಿಂದ ಬೆಳೆಗಳು ಒಂದೆಡೆ ನಾಶವಾಗಿದ್ದರೆ ಕಾಡು ಪ್ರಾಣಿಗಳ ಕಾಟದಿಂದ ರೈತರು ಭಾರೀ ನಷ್ಟ ಅನುಭವಿಸುವಂತಾಗಿದೆ.
ಕಳೆದ 10 ವರ್ಷ ದಿಂದ ಕಾಡಾನೆ ನಾಲ್ಕು ಜನರನ್ನು ಬಲಿತೆಗೆದುಕೊಂಡಿದೆ. ಮೂರು ವರ್ಷದ ಹಿಂದೆ ಸುನಿಲ್ ಎಂಬ ಯುವಕ ಆನೆ ದಾಳಿಯಿಂದ ಮೃತಪಟ್ಟಾಗ ಗ್ರಾಮಸ್ಥರು ಮೃತದೇಹವನ್ನು ಅರಣ್ಯಾಧಿಕಾರಿ ಕಚೇರಿ ಎದುರು ಇಟ್ಟು ಪ್ರತಿಭಟನೆ ನಡೆಸಿದ್ದರು.
ಎಷ್ಟೇ ಜನ ಬಲಿಯಾದರೂ, ನಿರಂತರ ಪ್ರತಿಭಟನೆ ನಡೆಸಿದರೂ ಸರ್ಕಾರ ಕಾಡಾನೆಗಳ ನಿಯಂತ್ರಣಕ್ಕೆ ಶಾಶ್ವತ ಕ್ರಮ ಕೈಗೊಳ್ಳದೆ ಜನರ ಬದುಕಿನೊಂದಿಗೆ ಚೆಲ್ಲಾಟ ನಡೆಸುತ್ತಿದೆ.




