ರೌಡಿಗಳ ಕಾಟ ಖಂಡಿಸಿ ಪ್ರತಿಭಟನೆ

ರಾಮನಗರ: ಚನ್ನಪಟ್ಟಣ ನಗರವೂ ಸೇರಿದಂತೆ ತಾಲ್ಲೂಕಿನಾದ್ಯಂತ ಇತ್ತೀಚೆಗೆ ರೌಡಿಗಳ ಅಟ್ಟಹಾಸ ಹೆಚ್ಚಾಗುತ್ತಿದ್ದು, ಜನರು ಭಯಭೀತರಾಗಿ ಜೀವ ಹಿಡಿದು ಓಡಾಡುವಂತಹ ಸ್ಥಿತಿ ತಲುಪಿದ್ದಾರೆ. ಇದಕ್ಕೆಲ್ಲಾ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ ಎಂದು ಚನ್ನಪಟ್ಟಣ ನಗರ ಡಿವೈಎಸ್ಪಿ ಕಛೇರಿಯ ಮುಂದೆ ಪಕ್ಷಾತೀತವಾಗಿ ನಾಯಕರು ಮತ್ತು ಸಾರ್ವಜನಿಕರು ಇಂದು ಬೆಳಗ್ಗೆ ಪ್ರತಿಭಟನೆ ನಡೆಸಿದರು.
ಇತ್ತೀಚೆಗೆ ಹಳೆಯ ಎರಡು ಗುಂಪಿನ ರೌಡಿಗಳ ನಡುವೆ ಗಲಾಟೆಯಾಗಿದ್ದು, ಒಂದು ಗುಂಪು ಅಕ್ಕೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆ, ಮತ್ತೊಂದು ಗುಂಪು ಪೂರ್ವಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದೆ. ದೂರಿನ ಹಿನ್ನೆಲೆಯಲ್ಲಿ ನಗರ ವೃತ್ತ ನಿರೀಕ್ಷಕ ದಿವಾಕರ್ ರೌಡಿ ಪೆರೇಡ್ ನಡೆಸಿದ್ದರೂ ಮೂಲ ರೌಡಿಗಳು ಬಾರದಿದ್ದದ್ದು ಅನುಮಾನ ಮೂಡಿಸಿದೆ. ಪೆರೇಡ್ ನಡೆದ ಮೂರು ದಿನಗಳ ನಂತರ ನೆನ್ನೆ ರಾತ್ರಿ ಕೆಂಪೇಗೌಡ ಬಡಾವಣೆಯ ಕಾರ್ ಸರ್ವಿಸ್ ಸೆಂಟರ್ ನಿಂದ ಆರಂಭವಾದ ಜಗಳ, ಸಾತನೂರು ರಸ್ತೆಯ ಮಹ ದೇಶ್ವರ ನಗರದ ೩೧ನೇ ವಾರ್ಡಿನ ನಗರಸಭಾ ಸದಸ್ಯರಾದ ಮಂಗಳಮ್ಮನವರ ಮನೆಯ ಅಂಗಳದಲ್ಲಿ ಕೊನೆಗೊಂಡಿದೆ.
ಈ ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಪೊಲೀಸ್ ವೈಫಲ್ಯ ಕುರಿತು ಧಿಕ್ಕಾರ ಕೂಗಿದರು. ತಾಳ್ಮೆ ಕಳೆದುಕೊಂಡ ಡಿವೈಎಸ್ಪಿ ರಮೇಶ್ ಅವರು, ಪ್ರತಿಭಟನಾಕಾರರ ಮೇಲೆ ಹರಿಹಾಯ್ದರು. ನೀವು ನನ್ನ ಹೆಣದ ಮೇಲೆ ಪ್ರತಿಭಟನೆ ಮಾಡಿ, ಕಛೇರಿಯ ಮುಂದೆ ಯಾಕೆ ಕೂರುತ್ತೀರಿ, ನಿಮ್ಮದೇ ಸರ್ಕಾರವಿದೆ, ನನ್ನನ್ನು ವರ್ಗಾಯಿಸಿ ಎಂದು ಕೂಗಾಡಿದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾ ನಿರತರು, ಎಸ್ಪಿ ಸ್ಥಳಕ್ಕೆ ಬರುವ ತನಕ ನಾವು ಇಲ್ಲಿಯೇ ಕೂರುತ್ತೇವೆ ಎಂದು ಪಟ್ಟು ಹಿಡಿದರು.
ಸ್ಥಳದಲ್ಲಿಯೇ ಇದ್ದ ಗ್ರಾಮಾಂತರ ವೃತ್ತ ನಿರೀಕ್ಷಕ ಟಿ.ಬಿ ಶಿವಕುಮಾರ್ ಮತ್ತು ಉಪ ನಿರೀಕ್ಷಕ ಹೆಚ್.ಎಂ ಶಿವಕುಮಾರ್ ಅವರು, ಇದು ನಮ್ಮ ವ್ಯಾಪ್ತಿಯಲ್ಲಿ ನಡೆದಿದ್ದು, 24 ಗಂಟೆಯ ಒಳಗಡೆ ಆ ರೌಡಿಗಳನ್ನು ಹೆಡೆಮುರಿ ಕಟ್ಟಿ ಕಾನೂನು ಸುಪರ್ದಿಗೆ ಒಪ್ಪಿಸುತ್ತೇವೆ. ಮುಂದಿನ ವಿಚಾರಣೆ ಕಾನೂನಿನ ಚೌಕಟ್ಟಿನಲ್ಲಿ ನಡೆಯುತ್ತದೆ. ಪ್ರತಿಭಟನೆ ಯನ್ನು ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಪ್ರತಿಭಟನಾಕಾರರು, ಡಿವೈ ಎಸ್ಪಿ ಸಮ್ಮುಖದಲ್ಲಿ ಹೇಳಬೇಕೆಂದು ಪಟ್ಟು ಹಿಡಿದ ನಂತರ, ಡಿವೈಎಸ್ಪಿ ರಮೇಶ್, ಎರಡು ದಿನಗಳ ಒಳಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ, ತಾವು ಭರವಸೆ ಇಡಬೇಕು ಎಂದ ನಂತರ ಪ್ರತಿಭಟನಾಕಾರರು ಮನವಿ ಪತ್ರವನ್ನು ಓದಿ, ಎಲ್ಲರ ಅನುಮತಿಯೊಂದಿಗೆ ಡಿವೈಎಸ್ಪಿಯವರಿಗೆ ನೀಡಿದರು.




