ಪ್ರಾಮಾಣಿಕರಾಗಿ ಬದಲಾದ ಕಳ್ಳರು

ಇತಿಹಾಸ ಪ್ರಸಿದ್ಧ ಚಂದ್ರಗುಪ್ತ ಮೌರ್ಯನ ಮಂತ್ರಿಯಾಗಿದ್ದ ಚಾಣಕ್ಯ ಮಹಾ ಬುದ್ಧಿವಂತ. ಅಷ್ಟೇ ಅಲ್ಲ ಪ್ರಾಮಾಣಿಕ ಕೂಡ. ಒಮ್ಮೆ ಚಂದ್ರಗುಪ್ತ ಹಾಗೂ ಚಾಣಕ್ಯ ಜನರ ಕಷ್ಟ ಸುಖ ಅರಿಯಲು ರಾತ್ರಿ ಹೊತ್ತು ವೇಷ ಬದಲಾಯಿಸಿ ಸಂಚಾರ ಹೊರಟರು. ಅದು ಚಳಿಗಾಲ ಬಹಳ ಚಳಿಯಿತ್ತು. ಬಡಜನರು ಚಳಿಯಿಂದ ನಡಗುತ್ತಿರುವುದನ್ನು ನೋಡಿದ ರಾಜ, ಚಾಣಕ್ಯನಿಗೆ ’ಇವರೆಲ್ಲರಿಗೂ ಕಂಬಳಿ ಕೊಡುವ ವ್ಯವಸ್ಥೆ ಆಗಬೇಕು’ ಎಂದು ಹೇಳಿದ.
ರಾಜನ ಆದೇಶದಂತೆ ಸಿದ್ಧವಾದ ಕಂಬಳಿಗಳನ್ನು ಚಾಣಕ್ಯನ ಮನೆಯಲ್ಲಿ ಇಡಲಾಯಿತು. ಚಾಣಕ್ಯನ ಮನೆ ಬಹಳ ಚಿಕ್ಕದ್ದು. ಅದರಲ್ಲಿ ಒಂದು ಕಡೆ ಕಂಬಳಿಗಳನ್ನು ಜೋಡಿಸಲಾಗಿತ್ತು. ಇದನ್ನು ಗಮನಿಸಿದ ಕಳ್ಳರು ರಾತ್ರಿ ಚಾಣಕ್ಯನ ಮನೆಗೆ ನುಗ್ಗಿ ಕಂಬಳಿಗಳನ್ನು ಕದಿಯಬೇಕೆಂದು ಯೋಚಿಸಿದರು. ಆ ದಿನ ರಾತ್ರಿ ಚಾಣಕ್ಯನ ಮನೆಗೆ ಪ್ರವೇಶಿಸಿದ ಕಳ್ಳರಿಗೆ ಕಾಣಿಸಿದ್ದು ಒಂದೆಡೆ ಜೋಡಿಸಿದ್ದ ಕಂಬಳಿಗಳು.
ಅಲ್ಲೇ ದೂರದಲ್ಲಿ ಮಲಗಿದ್ದ ಚಾಣಕ್ಯ ಮತ್ತು ಅವನ ತಾಯಿ ಹರಕು ಕಂಬಳಿಗಳನ್ನು ಹೊದ್ದು ಮುದುರಿ ಮಲಗಿದ್ದನ್ನು ಕಂಡ ಕಳ್ಳರಿಗೆ ಆಶ್ಚರ್ಯವಾಯಿತು. ಕಂಬಳಿಯ ರಾಶಿಯೇ ಇದ್ದರೂ ಚಾಣಕ್ಯ ಮತ್ತು ಅವನ ತಾಯಿ ಅದನ್ನು ಹೊದ್ದುಕೊಳ್ಳದೆ ಚಳಿಯಲ್ಲಿ ಮುದುರಿಕೋಂಡು ಮಲಗಿದ್ದಾರಲ್ಲ ಎಂದು ಯೋಚಿಸಿದ ಕಳ್ಳರಿಗೆ ತಾವು ಬಂದ ಉದ್ದೇಶವೇ ಮರೆತು ಹೋಯಿತು.
ಏಕೆ ಹರಿದ ಕಂಬಳಿಯನ್ನು ಹೊದ್ದು ಮುದುಡಿ ಮಲಗಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಕಳ್ಳರ ಯಜಮಾನ ಚಾಣಕ್ಯನ್ನು ಎಬ್ಬಿಸಿ ’ಅಯ್ಯಾ ನಿಮ್ಮ ಮನೆಯಲ್ಲಿ ಕಂಬಳಿಯ ರಾಶಿಯೇ ಇದೆ. ಆದರು ನೀವಿಬ್ಬರೂ ಹರಿದ ಕಂಬಳಿ ಹೊದ್ದು ಚಳಿಯಿಂದ ಮುದುಡಿ ಮಲಗಿದ್ದೀರಲ್ಲಾ, ಇದಕ್ಕೆ ಕಾರಣವೇನು? ಎಂದು ಕೇಳಿದ.
ಆಗ ಚಾಣಕ್ಯ ’ಅಯ್ಯಾ ಯಜಮಾನ, ಈ ಕಂಬಳಿಗಳಲ್ಲಿ ಒಂದೇ ಒಂದನ್ನು ಹೊದ್ದು ಮಲಗಿದರೂ ನಾನು ನಿನ್ನಂತೆಯೇ ಆಗಿ ಬಿಡುತ್ತೇನಲ್ಲಾ’ ಎಂದ. ಈ ಮಾತು ಕಳ್ಳರ ಯಜಮಾನನಿಗೆ ಅರ್ಥವಾಗಲ್ಲಿಲ್ಲ. ’ನೋಡಿ ನನ್ನ ಬಳಿ ಹರಿದ ಕಂಬಳಿಯಾದರೂ ಇದೆ. ಮಹಾರಾಜರು ಏನು ಇಲ್ಲದವರಿಗೆ ಕಳಿಸಿರುವ ಕಂಳಿಗಳವು. ಅದನ್ನು ಹೊದ್ದು ನಾನು ಕಳ್ಳನಾಗಲೇ?’ ಎಂದ ಚಾಣಕ್ಯ. ಇದನ್ನು ಕೇಳಿದ ಕಳ್ಳರಿಗೆ ತಮ್ಮ ತಪ್ಪಿನ ಅರಿವಾಯಿತು.
ಕಳ್ಳತನದಿಂದ ಬೇರೆಯವರಿಗೆ ತೊಂದರೆಯಾಗುತ್ತದೆ ಎಂಬ ಅರಿವು ನಮಗೆ ಬಾರದೆ ಹೋಯಿತಲ್ಲ ಎಂದು ಪಶ್ಚಾತಾಪ ಪಟ್ಟರು.ಅವರೆಲ್ಲಾ ಚಾಣಕ್ಯನಿಗೆ “ನೀವು ನಮ್ಮ ಕಣ್ಣು ತೆರೆಸಿದಿರಿ. ಇನ್ನು ಮುಂದೆ ಕಳ್ಳತನ ಮಾಡುವುದಿಲ್ಲ. ಕಷ್ಟ ಪಟ್ಟು ದುಡಿದು ಬದುಕುತ್ತೇವೆ” ಎಂದು ನಮಸ್ಕರಿಸಿ ಅಲ್ಲಿಂದ ಹೊರಟು ಹೋದರು. ಚಾಣಕ್ಯನ ಪ್ರಾಮಾಣಿಕತೆ ಹಾಗೂ ನೈತಿಕತೆಯು ಕಳ್ಳರ ಮನಪರಿವರ್ತನೆ ಮಾಡಿತ್ತು.
ನೀತಿ: ನಾವು ಪ್ರಾಮಾಣಿಕವಾಗಿದ್ದರೆ ನಮ್ಮನ್ನು ನೋಡಿ ಇನ್ನೊಬ್ಬರು ಅದೇ ರೀತಿ ಕಲಿಯುತ್ತಾರೆ.




