ಕೊಬ್ಬಿನ ಕುದುರೆ ಮತ್ತು ಜಾಣ ಕತ್ತೆ

ಬಟ್ಟೆ ವ್ಯಾಪಾರಿಯೊಬ್ಬ ಕತ್ತೆ ಹಾಗೂ ಕುದುರೆಯನ್ನು ಸಾಕಿಕೊಂಡಿದ್ದ. ಕತ್ತೆಗೆ ಭಾರವಾದ ಬಟ್ಟೆ ಮೂಟೆಗಳನ್ನು ಹೊರಿಸಿ ಕುದುರೆಯ ಮೇಲೆ ಕುಳಿತು ಪ್ರಯಾಣ ಆರಂಭಿಸಿದ. ಮಾರ್ಗ ಮಧ್ಯೆ ದಣಿವಾರಿಸಿಕೊಳ್ಳಲು ಮರದಡಿ ವಿರಮಿಸಿದ. ಆಗ ಕುದುರೆ ಮೆಲ್ಲನೆ ಕತ್ತೆಯ ಹತ್ತಿರ ಹೋಗಿ “ಎಂಥ ಜನ್ಮನಪ್ಪಾ ನಿಂದು? ಜೀವನ ಪೂರ್ತಿ ಭಾರವಾದ ವಸ್ತುಗಳನ್ನು ಹೊತ್ತುಕೊಂಡು ಸಾಗುವುದೇ ನಿನ್ನ ಹಣೆಬರವಾಯಿತು, ಅಲ್ವಾ!
ಇಂತಹ ದುರ್ಗತಿ ಯಾರಿಗೊ ಬೇಡಪ್ಪಾ ಮುಂದಿನ ಜನ್ಮ ಅಂತ ಇದ್ರೆ ಕತ್ತೆಯಾಗಿ ಮಾತ್ರ ಹುಟ್ಟಲಾರೆ” ಎಂದು ಅಪಹಾಸ್ಯ ಮಾಡಿ ನಕ್ಕಿತು. ಈ ಮಾತು ಕೇಳಿ ಕತ್ತೆಗೆ ತುಂಬಾ ಅವಮಾನವಾಯಿತು. ಸೊಕ್ಕಿನ ಕುದುರೆಗೆ ಬುದ್ಧಿ ಕಲಿಸುವ ಉಪಾಯ ಮಾಡಿತು. ಕೆಲ ಹೊತ್ತಿನ ನಂತರ ವ್ಯಾಪಾರಿ ಪ್ರಯಾಣ ಮುಂದುವರಿಸಲು ಸರಕನ್ನು ಕತ್ತೆಯ ಮೇಲೆ ಏರಿಸಿದಾಗ ಕತ್ತೆ ಅದನ್ನು ಬೀಳಿಸಿ ತಾನು ನೆಲಕ್ಕೆ ಬಿದ್ದು ಒದ್ದಾಡ ತೊಡಗಿತು. ಇದರಿಂದ ವ್ಯಾಪಾರಿಗೆ ತುಂಬಾ ದಿಗಿಲಾಯಿತು.
’ಅಯ್ಯೋ ಪಾಪ! ಕತ್ತೆಯ ಆರೋಗ್ಯ ಸರಿ ಇಲ್ಲವೆಂದು ತೋರುತ್ತಿದೆ’ ಎಂದುಕೊಂಡು ಆ ಭಾರವಾದ ಬಟ್ಟೆಯ ಮೂಟೆಗಳನ್ನು ಕುದುರೆಯ ಮೇಲೆ ಹೊರಿಸಿ ಪ್ರಯಾಣ ಮುಂದುವರೆಸಿದನು. ಕತ್ತೆಯನ್ನು ನಿಂದಿಸಿದ ತಪ್ಪಿಗೆ ಕುದುರೆಗೆ ತಕ್ಕ ಶಿಕ್ಷೆಯಾಯಿತು.
ನೀತಿ: ಯಾರನ್ನೂ ನಿಂದಿಸಬಾರದು.




