
ಕಿರುಗುಂದ ರಫೀಕ್
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆತಂಕವಾದಿಗಳು ಅಲ್ಲಿನ ಜನರನ್ನು, ನಗರಗಳನ್ನು, ಪ್ರಾಂತ್ಯಗಳನ್ನು, ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಕೊನೆಗೆ ಆ ದೇಶವನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡು ಆಧಿಪತ್ಯ ಸಾಧಿಸಿದ್ದಾರೆ.
ಕಳೆದ ಎರಡು ದಶಕಗಳಿಂದ ಅಮೆರಿಕದ ಸೈನ್ಯ ಅಫ್ಘಾನಿನಲ್ಲಿ ನೆಲೆಯೂರಿ ಉಗ್ರರನ್ನು ನಿಯಂತ್ರಿಸುವ ಕಾರ್ಯಾಚರಣೆಯಲ್ಲಿತ್ತು. ಆದರೆ ಅದೇನಾಯಿತೋ ಗೊತ್ತಿಲ್ಲ. ಈ ಬಾರಿ ಅಮೆರಿಕ ಸೇನೆ ಹಾಗೂ ನ್ಯಾಟೊ ಪಡೆಗಳು ಆಫಘಾನಿಸ್ತಾನವನ್ನು ತೊರೆಯಬೇಕಾದ ಪರಿಸ್ಥಿತಿ ಬಂದೊದಗಿತು. ಅಷ್ಟರ ಮಟ್ಟಿಗೆ ತಾಲಿಬಾನಿಗಳು ಅಟ್ಟಹಾಸಗೈದಿದ್ದಾರೆ.
ಅಮೆರಿಕ ತನ್ನ ಸೈನ್ಯವನ್ನು ವಾಪಸ್ ಕರೆಸಿಕೊಂಡ ಕೆಲವೇ ದಿನಗಳಲ್ಲಿ ತಾಲಿಬಾನ್ ಉಗ್ರರು ಆಫ್ಘನ್ನಿನ ಎಲ್ಲ ಪ್ರಾಂತ್ಯಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ಬಾಹ್ಯ ಜಗತ್ತಿನ ಸಂಪರ್ಕಕ್ಕೆ ಆಸ್ಪದವೇ ಆಗದ ರೀತಿಯಲ್ಲಿ ಇಡೀ ನಗರವನ್ನು ಸುತ್ತುವರಿದು ರಾಷ್ಟ್ರ ರಾಜಧಾನಿಯನ್ನೂ ಬಿಡದೆ ಸುತ್ತುವರಿದು, ಅಲ್ಲಿ ದೇಶದ ಆಡಳಿತದ ನಡೆಸುತ್ತಿದ್ದವರು ದಿಕ್ಕಾಪಾಲಾಗಿ ಓಡಿಹೋಗುತ್ತಾರೆಂದರೆ ಅಲ್ಲಿ ಎಂತಹ ಪರಿಸ್ಥಿತಿ ಎದುರಾಗಿರಬಹುದು ಎಂಬುದನ್ನು ಊಹಿಸಲು ಅಸಾಧ್ಯವಾಗಿದೆ.

ಅಫ್ಘಾನ್ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಕಾಬೂಲ್ ನಗರವನ್ನೂ ತೊರೆದಿದ್ದಾರೆ. ಅವರ ಬೆನ್ನಹಿಂದೆಯೇ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಸಹ ಹೋಗಿದ್ದು. ಈಗಾಗಲೇ ಆಫ್ಘನ್ ಆಡಳಿತವನ್ನು ಪೂರ್ಣವಾಗಿ ತಾಲಿಬಾನ್ ಸಂಘಟನೆಗೆ ಹಸ್ತಾಂತರಿಸುವ ಒಪ್ಪಂದದ ಬಗ್ಗೆ ವರದಿಯಾಗಿದ್ದು, ತಾಲಿಬಾನ್ ʼಮುಲ್ಲಾ ಅಬ್ದುಲ್ ಘನಿ ಬರಾದರ್ʼ ಆಫ್ಘನ್ ಸರ್ಕಾರದ ಜತೆಗೆ ಅಧಿಕಾರ ಹಸ್ತಾಂತರದ ನಿರ್ಧಾರ ಕೈಗೊಳ್ಳುವ ಮುಖಂಡ ಎಂಬುದಾಗಿ ತಿಳಿದುಬಂದಿದೆ.
ಒಂದು ದೇಶದಲ್ಲಿ ಧರ್ಮಾಂಧ ಉಗ್ರರು ಮೇಲುಗೈ ಸಾಧಿಸಿದರೆ ಏನಾಗುತ್ತದೆ ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿ ಕಾಣಿಸಿದೆ. ಬಾಹ್ಯ ರಾಷ್ಟ್ರಗಳ ಸೈನಿಕರು ಮತ್ತು ಸೈನ್ಯದೊಂದಿಗೆ ಇದ್ದ ಯುದ್ಧವಾಹನಗಳು, ಯುದ್ಧೋಪಕರಣಗಳನ್ನು ತಾವು ವಶಕ್ಕೆ ಪಡೆದುಕೊಂಡು ಅಟ್ಟಹಾಸಗೈಯುತ್ತಾ ಮೇಲುಗೈ ಸಾಧಿಸಿರುವ ತಾಲಿಬಾನ್ ಬಂಡುಕೋರರಿಗೆ ಇದು ಅಲ್ಪಕಾಲಿಕ ಗೆಲುವಷ್ಟೇ ಆಗಿದೆ.
ಭಯೋತ್ಪಾದನೆಯು ದೇಶದ ಅಭಿವೃದ್ಧಿಗೆ ಮಾರಕವಾದದ್ದು. ದೇಶವು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸರ್ವತೋಮುಖ ಅಭಿವೃದ್ಧಿ ಸಾಧಿಸಬೇಕೆಂದರೆ ದೇಶವಾಸಿಗಳ ಒಗ್ಗಟ್ಟು, ಶಾಂತಿ ಅತ್ಯಗತ್ಯವಾಗಿದೆ. ಆದರೆ ಆತಂಕವಾದಿಗಳಿಂದ ಇಂತಹದ್ದನ್ನು ನಿರೀಕ್ಷಿಸಲು ಸಾಧ್ಯವಿದೆಯೇ?
ಭೂತದ ಬಾಯಲ್ಲಿ ಭಗವದ್ಗೀತೆ!
ಆಡಳಿತ ಹಿಡಿಯುವ ಮೊದಲು ಅಫ್ಘಾನ್ ಜನರನ್ನು ಓಲೈಸಿಕೊಳ್ಳಲು ಬೇಕಾದ ಕಸರತ್ತಿನಲ್ಲೂ ತಾಲಿಬಾನ್ ತಲ್ಲೀನವಾಗಿದೆ. ಇದ್ದಕ್ಕಿದ್ದಂತೆ ತಾವು ಇನ್ನು ಯಾರಿಗೂ ಹಿಂಸೆ ಮಾಡುವುದಿಲ್ಲ ಎಂದು ಹೇಳತೊಡಗಿದೆ.
ಮೂಲದಲ್ಲಿ ಅಮೆರಿಕಕ್ಕೇ ಸೆಡ್ಡುಹೊಡೆದು, ಜಗತ್ತಿನ ಹಲವೆಡೆ ಭೀಭತ್ಸ ಕೃತ್ಯಗಳಿಂದ, ಅಪಾರ ಜನರ ಸಾವುನೋವಿಗೆ ಕಾರಣವಾಗಿ, ಅಫ್ಘಾನಿನಲ್ಲಿ ಸದಾ ಭಯೋತ್ಪಾದನೆ ಚಟುವಟಕೆಯಲ್ಲೇ ಬೆಳೆದಿರುವ ತಾಲಿಬಾನ್ ಸಂಘಟನೆ ಈಗ ಇದ್ದಕ್ಕಿದ್ದಂತೆ ಶಾಂತಿ ಸ್ಥಾಪನೆ ಮಾಡುತ್ತೇವೆಂದು ಹೇಳತೊಡಗಿದ್ದು, ಅಕ್ಷರಶಃ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿಸಿದಂತೆ ಭಾಸವಾಗಿದೆಯಷ್ಟೆ.




