ಅಂಬೇಡ್ಕರ್ ಮತ್ತು ಗಾಂಧೀಜಿ ರೂಪಿಸಿದ ಸಮಾಜವನ್ನು ಇಂದು ಮಾಧ್ಯಮಗಳು ಕಟ್ಟಬೇಕಿದೆ: ಶಶಿಧರ್ ಭಟ್

ಕೋಲಾರ: ಇಂದಿನ ಮಾಧ್ಯಮ ಕೇವಲ ಸಂಘ ಪರಿವಾರಕ್ಕೆ ಮಾರಾಟವಾದ ಪತ್ರಿಕೋದ್ಯವಾಗಿದೆ. ಬ್ರಾಹ್ಮಣ ಜಾತಿಯ ಸ್ವಾಮೀಜಿಗಳು ಯಾವುದೇ ರೀತಿಯ ಹೀನ ಕೃತ್ಯಗಳು ಮಾಡಿದರೂ ಅದು ಬೆಳಕಿಗೆ ಬರುವುದಿಲ್ಲ ಎಂದು ಲೈವ್ ಕನ್ನಡ ಪ್ರಧಾನ ಸಂಪಾದಕ ಶಶಿಧರ್ ಭಟ್ ಅಭಿಪ್ರಾಯಪಟ್ಟರು.
ಕೋಲಾರ ಅಗ್ನಿ ಪತ್ರಿಕೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈವತ್ತಿನ ಪ್ರಧಾನಿ ಅತಿ ದೊಡ್ಡ ಸರ್ವಾಧಿಕಾರಿಯಾಗಿದ್ದಾರೆ. ಆದರೆ ಅವರ ಸರ್ವಾಧಿಕಾರವನ್ನು ಯಾವ ಮಾಧ್ಯಮವೂ ಚಕಾರವೆತ್ತುತ್ತಿಲ್ಲ, ವಿರೋಧ ಪಕ್ಷ ಕೇವಲ ಅಧಿಕಾರಕ್ಕಾಗಿ ಪ್ರಯತ್ನಿಸುತ್ತಿದಿಯೇ ಹೊರೆತು ತತ್ವ ಸಿದ್ದಾಂತಗಳ ಬಗೆಗಿನ ರಾಜಕೀಯ ಮಾಡುತ್ತಿಲ್ಲ ಎಂದರು.

ಪತ್ರಿಕೋದ್ಯಮ ಒಂದು ಸೇವೆಯಾಗಬೇಕೆ ಹೊರೆತು ಅದು ವ್ಯವಹಾರಿಕ ಸಂಸ್ಥೆಯಾಗಬಾರದು. ಪತ್ರಿಕೆ ಅಥವಾ ಮಾಧ್ಯಮ ಇಡೀ ಸಮಾಜವನ್ನು ರೂಪಿಸಬೇಕೇ ಹೊರೆತು ಯಾವುದೇ ಜಾತಿಯನ್ನು ರೂಪಿಸುವಂತಾಗಬಾರದು. ಅಪಾಯಕಾರಿ ಹಂತದಲ್ಲಿರುವ ಸಮಾಜವನ್ನು ಪತ್ರಿಕೋದ್ಯಮ ಉಳಿಸಬೇಕಿದೆ ಅದಕ್ಕಾಗಿ ಪರ್ಯಾಯ ಪತ್ರಿಕೋದ್ಯಮ ಸಮಾಜದಲ್ಲಿ ಬೆಳಕಿಗೆ ಬರಬೇಕು ಎಂದು ತಿಳಿಸಿದರು.
ಗಾಂಧೀಜಿ, ಅಂಬೇಡ್ಕರ್ ಕಟ್ಟಿದ ಸಮಾಜವನ್ನು ನಾವು ಉಳಿಸಬೇಕಿದೆ. ಈವತ್ತಿನ ಮಾಧ್ಯಮ ಉತ್ತಮ ಸಮಾಜವನ್ನು ಕಟ್ಟಬೇಕಿದೆ ಎಂದರು.



