ಕ್ರೀಡೆ

ಮೋಟಾರ್ ರೇಸ್ ನಲ್ಲಿ ತಾಯಿ-ಮಗಳ ಅನುಬಂಧ

– ಸೋಮಶೇಖರ್ ಪಡುಕರೆ

ಪುರುಷರೇ ಪ್ರಾಬಲ್ಯಹೊಂದಿರುವ ಮೋಟಾರ್ ರೇಸ್ ನಲ್ಲಿ ಮಹಿಳೆಯರೂ ಮಿಂಚುತ್ತಿರುವುದು ಖುಷಿಯ ವಿಷಯ, ಅದರಲ್ಲೂ ತಾಯಿ-ಮಗಳು ಒಂದಾಗಿ ಸ್ಪರ್ಧೆ ಮಾಡಿದರೆ? ಅದು ಈ ಕನ್ನಡ ಮಣ್ಣಿನಲ್ಲಿ ಮಾತ್ರ ಸಾಧ್ಯ. ಈ ಮಾತನ್ನು ಅತ್ಯಂತ ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಏಕೆಂದರೆ ತಮ್ಮ ಡಾಕ್ಟರ್ ವೃತ್ತಿಯ ನಡುವೆ ಮೋಟಾರ್ ರೇಸ್ ನಲ್ಲಿ ಮಿಂಚುತ್ತಿರುವ ಡಾ. ಶಿವಾನಿ ಮತ್ತು ಡಾ. ದೀಪ್ತಿ ಈಗ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದಾರೆ.

2019ರ ಭಾರತೀಯ ರಾಷ್ಟ್ರೀಯ ರ‍್ಯಾಲಿ ಚಾಂಪಿಯನ್ಷಿಪ್ ನಲ್ಲಿ ಪಾಲ್ಗೊಳ್ಳುವ ಮೂಲಕ ಈ ತಾಯಿ ಮಗಳು ಭಾರತದ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದರು. ಇವರಿಗೆ ಬೆಂಬಲವಾಗಿ ನಿಂತವರು ಮೋಟಾರ್ ಸ್ಪೋರ್ಟ್ಸ್ ಗೆ ಉತ್ತಮ ರೀತಿಯಲ್ಲಿ ಬೆಂಬಲ ನೀಡುತ್ತಿರುವವರ, ಸ್ವತಃ ರಾಷ್ಟ್ರೀಯ ರ‍್ಯಾಲಿ ಪಟು, ಬಿ,ಎಸ್. ಪೃಥ್ವಿ. ರಾಷ್ಟ್ರೀಯ ರೇಸ್ ಟ್ರ್ಯಾಕ್ ನಲ್ಲಿ ಕಂಡುಬಂದ ಈ ರ‍್ಯಾಲಿ ಕುಟುಂಬ (ತಂದೆ-ತಾಯಿ-ಮಗಳು) ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಿದಾಗ ಹಲವಾರು ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದವು.

ಬಿ.ಎಸ್. ಪೃಥ್ವಿ 2000 ವರೆಗೆ ಜೆಕೆ ತಂಡದಲ್ಲಿ ಹಲವಾರು ಸ್ಪರ್ಧೆಗಳಲ್ಲಿ ಪಾಲ್ಗೊಂಡವರು. ತಮ್ಮದೇ ಕಾರನ್ನು ಹೊಂದಿದ್ದರಿಂದ ಅಭ್ಯಾಸಕ್ಕೆ ತೊಂದರೆ ಇರಲಿಲ್ಲ. ದಾವಣಗೆರೆಯವರಾದ ಪೃಥ್ವಿ ಕುಟುಂಬಕ್ಕೆ ಕ್ರೀಡಾಕ್ಷೇತ್ರವೆಂದರೆ ಅಚ್ಚುಮೆಚ್ಚು.

ಪೃಥ್ವಿ ಅವರ ರೇಸಿಂಗ್ ಸಾಧನೆಯ ಬಗ್ಗೆ ಡಾ. ದೀಪ್ತಿ ಹಾಗೂ ಡಾ. ಶಿವಾನಿಗೆ ಅಪಾರವಾದ ಹೆಮ್ಮೆ. ಡಾ. ಶಿವಾನಿ ಅವರು ಎಂಬಿಬಿಎಸ್ ಪದವಿಯ ಎರಡನೇ ಪರೀಕ್ಷೆ ಬರೆದ ನಂತರ ತಂದೆಯವರಲ್ಲಿ ರೇಸಿಂಗ್ ನಲ್ಲಿ ಆಸಕ್ತಿ ಇರುವುದಾಗಿ ತಿಳಿಸಿದರು.

ತಮ್ಮದೇ ರೇಸಿಂಗ್ ಕಾರುಗಳನ್ನು ಹೊಂದಿದ್ದ ಪೃಥ್ವಿ ಅವರಿಗೆ ಮಗಳ ಬಯಕೆಯನ್ನು ಈಡೇರಿಸಲು ಕಷ್ಟವಾಗಲಿಲ್ಲ. ಉತ್ತಮ ರೀತಿಯಲ್ಲಿ ತರಬೇತಿ ನೀಡಿದರು. ಟಿಡಿಎಸ್ ರ‍್ಯಾಲಿಯಲ್ಲಿ ನೇವಿಗೇಟರ್ ಅಗತ್ಯ ಇರುತ್ತದೆ. ಯಾರೆಂದು ಹುಡುಗಕುವಾಗ ಪತ್ನಿ ಡಾ, ದೀಪ್ತಿಯವರನ್ನೇ ಆಯ್ಕೆ ಮಾಡಿದರು. ತಾಯಿ-ಮಗಳ ಹೊಂದಾಣಿಕೆ ಚೆನ್ನಾಗಿರುತ್ತದೆ ಎಂಬುದು ಪೃಥ್ವಿ ಅವರ ನಿಲುವು.

ರಾತ್ರಿಯ ವೇಳೆ ಖಾಲಿ ಇರುವ ರಸ್ತೆಗಳಲ್ಲಿ ತಾಯಿ ಮಗಳ ಅಭ್ಯಾಸ ನಡೆಯಿತು. ಸಣ್ಣ ಪುಟ್ಟ ರ‍್ಯಾಲಿಗಳಲ್ಲಿ ಪಾಲ್ಗೊಂಡ ನಂತರ ಕಳೆದ ಮೂರು ವರ್ಷಗಳಲ್ಲಿ ಈ ತಾಯಿ ಮಗಳ ಜೋಡಿ ಕ್ರೀಡಾ ಕ್ಷೇತ್ರದ ಆಕರ್ಷಣೆ ಎನಿಸಿದೆ. ಮುಂದಿನ 2019ರ ರಾಷ್ಟ್ರೀಯ ರ‍್ಯಾಲಿಯಲ್ಲಿ ಡಾ. ಶಿವಾನಿ ಮತ್ತು ಡಾ. ದೀಪ್ತಿ ಪ್ರಶಸ್ತಿ ಗೆದ್ದುಕೊಂಡಾಗ ಅಲ್ಲೊಂದು ಇತಿಹಾಸ ನಿರ್ಮಾಣವಾಗಿತ್ತು. ತಾಯಿ-ಮಗಳು ಒಂದಾಗಿ ಪ್ರಶಸ್ತಿ ಗೆದ್ದ ಅಪೂರ್ವ ಕ್ಷಣ ಅದು.

 

ಭಾರತದ ಮೊದಲ ಮಹಿಳೆ !:

ಇಂಡೋನೇಷ್ಯಾದಲ್ಲಿ ನಡೆದ ಏಷ್ಯನ್ ಆಟೋ ಜಿಮ್ಖಾನ ಚಾಂಪಿಯನ್ಷಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಡಾ. ಶಿವಾನಿ ಪಾತ್ರರಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಲ್ಲಿ ಅತ್ಯಂತ ವೇಗದ ಗುರಿ ತಲಪುವ ತಂಡವನ್ನು ಆಯ್ಕೆ ಮಾಡಲಾಗಿತ್ತು. ಭಾರತ ತಂಡದಲ್ಲಿ ಇನ್ನಿಬ್ಬರು ಪುರುಷ ಸ್ಪರ್ಧಿಗಳು ಪಾಲ್ಗೊಮಡಿದ್ದರು. ತಂಡಕ್ಕೆ ಸಮಗ್ರ ನಾಲ್ಕನೇ ಸ್ಥಾನ ಲಭಿಸಿತ್ತು.

“ನ್ಯಾವಿಗೇಟರ್ ಆಗಿ ಪಕ್ಕದಲ್ಲೇ ತಾಯಿ ಕುಳಿತಿರುವಾಗ ನನಗೆ ಯಾವುದೇ ಚಾಂಪಿಯನ್ಷಿಪ್ ಕಷ್ಟವೆನಿಸುವುದಿಲ್ಲ, ಬದುಕಿನಲ್ಲಿ ಸರಿಯಾದ ದಾರಿ ತೋರುವ ನನ್ನಮ್ಮ ರ‍್ಯಾಲಿ ಟ್ರ್ಯಾಕ್ ನಲ್ಲೂ ಸೂಕ್ತ ದಾರಿಯನ್ನೇ ತೋರಿಸುತ್ತಾರೆ. ನನ್ನ ಯಶಸ್ಸಿನಲ್ಲಿ ಅಪ್ಪ –ಅಮ್ಮನ ಪತ್ರ ಪ್ರಮುಖವಾಗಿದೆ. ಡಾಕ್ಟರ್ ವೃತ್ತಿಯ ನಡುವೆ ನನ್ನ ಈ ಕ್ರೀಡಾ ಬದುಕಿಗಾಗಿ ಒಂದಿಷ್ಟು ಸಮಯವನ್ನು ಕಾಯ್ದಿರಿಸುವೆ,” ಎಂದು ಡಾ. ಶಿವಾನಿ ಹೇಳುತ್ತಾರೆ.

Spread the love

Related Articles

Leave a Reply

Your email address will not be published. Required fields are marked *

Back to top button