ಬೆಂಗಳೂರಿನಲ್ಲಿ ತಮಿಳುನಾಡಿನ ಮಾಜಿ ಸಚಿವರ ಬಂಧನ

ಬೆಂಗಳೂರು : ನಟಿಯೋರ್ವಳ ಮೇಲೆ ಅತ್ಯಾಚಾರ. ಕೊಲೆ ಬೆದರಿಕೆಯೊಡ್ಡಿದ್ದ ಆರೋಪದ ಹಿನ್ನೆಲೆಯಲ್ಲಿ ತಮಿಳುನಾಡಿನ ಮಾಜಿ ಸಚಿವ ಮಣಿಕಂದನ್ ಅವರನ್ನು ಬೆಂಗಳೂರಿನಲ್ಲಿ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.
ಮಾಜಿ ಸಚಿವರ ಮೇಲೆ ಅತ್ಯಾಚಾರ ಆರೋಪ ಕೇಳಿಬಂದ ಬೆನ್ನಲ್ಲೇ ಮಣಿಕಂದನ್ ತಲೆ ಮರೆಯಿಸಿಕೊಂಡಿದ್ದು, ತಮಿಳುನಾಡು ಪೊಲೀಸರ ವಿಶೇಷ ತಂಡ ಕೊನೆಗೂ ಮಣಿಕಂದನ್ ಅವರನ್ನು ಇಂದು ಬಂಧಿಸಿದೆ.
ಎಐಎಡಿಎಂಕೆ ಪಕ್ಷದ ಮಣಿಕಂದನ್ 2017ರಲ್ಲಿ ಐಟಿ ಸಚಿವರಾಗಿದ್ದ ವೇಳೆಯಲ್ಲಿ ಮಲೇಷ್ಯಾದ ನಟಿಯೊಂದಿಗೆ ಪರಿಚಯವಾಗಿತ್ತು. ಮಲೇಷ್ಯಾದಲ್ಲಿ ಹೂಡಿಕೆ ಮಾಡುವ ಸಲುವಾಗಿ ನಟಿಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದರು. ವ್ಯವಹಾರದ ಹಿನ್ನೆಲೆಯಲ್ಲಿ ದೆಹಲಿ ಹಾಗೂ ಚೆನ್ನೈ ನಡುವೆ ಇಬ್ಬರೂ ಸಾಕಷ್ಟು ಬಾರಿ ಓಡಾಡಿಕೊಂಡಿದ್ದರು. ನಂತರದಲ್ಲಿ ನಟಿಯನ್ನು ಮದುವೆಯಾಗುವುದಾಗಿಯೂ ಭರವಸೆಯನ್ನು ನೀಡಿದ್ದಾರೆ.
ಹಲವು ವರ್ಷಗಳ ಕಾಲ ಇಬ್ಬರೂ ಲಿವಿಂಗ್ ಇನ್ ರಿಲೇಷನ್ ಶಿಪ್ ನಲ್ಲಿಯೂ ಇದ್ದರು. ಅಲ್ಲದೇ ಮದುವೆಯಾಗುವುದಾಗಿ ನಂಬಿಸಿ ಮಣಿಕಂದನ್ ನಟಿಯ ಮೇಲೆ ಅತ್ಯಾಚಾರವೆಸಗಿ, ಮೂರು ಬಾರಿ ಗರ್ಭಪಾತವನ್ನೂ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.
