ಅಭಿಮತಸಂಪಾದಕೀಯ

ನಿಜವಾದ ಭಯೋತ್ಪಾದಕರು ಯಾರು?

ಮಂಡ್ಯದ ಕಾಲೇಜು.. ಒಂದೆಡೆ ನೂರಾರು ಸಂಖ್ಯೆಯಲ್ಲಿರುವ ಹಿಂದುತ್ವವನ್ನು ಗುತ್ತಿಗೆಗೆ ತೆಗೆದುಕೊಂಡಂತೆ ಕೇಸರಿ ಶಾಲು ಧರಿಸಿ ಜೈಶ್ರೀರಾಮ್ ಎಂಬ ಘೋಷಣೆಯೊಂದಿಗೆ ಬರುತ್ತಿರುವ ಯುವಕರು. ಮತ್ತೊಂದೆಡೆ ಅದೇ ಸಮಯದಲ್ಲಿ ಬುರ್ಖಾ, ಹಿಜಾಬ್ ಧರಿಸಿದ ಅದೇ ಕಾಲೇಜಿನ ವಿದ್ಯಾರ್ಥಿನಿ ಮುಸ್ಕಾನ್ ರಂಗಪ್ರವೇಶ. ಅಂಥ ಸಮಯದಲ್ಲಿ ಅಲ್ಲಿ ಮುಸ್ಲಿಂ ಯುವತಿಯನ್ನು ನೋಡಿ ಕೆರಳಿದ ಹಿಂದುತ್ವದ ಅಮಲನ್ನು ತಲೆಗೇರಿಸಿಕೊಂಡಿದ್ದ ಗುಂಪು ಅವಳತ್ತಲೇ ಬರುತ್ತದೆ. ಅವರು ಜೈ ಶ್ರೀರಾಮ್ ಘೋಷಣೆ ಕೂಗುತ್ತ ತನ್ನತ್ತಲೇ ಬರುವುದನ್ನು ಮುಸ್ಕಾನ್ ನೋಡುತ್ತಾಳೆ. ಅಳ್ಳೆದೆಯ ಬೇರೆ ಯಾರೇ ಆಗಿದ್ದರೂ ಆ ಸಮಯದಲ್ಲಿ ಕೈ ಕಾಲು ನಡುಗಿ ಕುಸಿಯುತ್ತಿದ್ದರು. ಆದರೆ ಮುಸ್ಕಾನ್​ ಎಂಬ ಆ ಯುವತಿಗೆ ಅದೆಲ್ಲಿತ್ತೋ ಧೈರ್ಯ, ಅವರ ಜೈ ಶ್ರೀರಾಮ್​ಗೆ ಪ್ರತಿಯಾಗಿ ತಮ್ಮ ಧರ್ಮದ ಘೋಷಣೆಯನ್ನು ಕೂಗಿಯೆಬಿಟ್ಟಳು- ಅಲ್ಲಾ ಹೋ ಅಕ್ಬರ್!

ಹೌದು, ಈ ಘಟನೆ ನಡೆದು ವಾರಗಳೇ ಉರುಳಿವೆ. ಆದರೆ ಆ ಘಟನೆಯ ವಿಡಿಯೋ ಮಾತ್ರ ಇಡೀ ಪ್ರಪಂಚದಲ್ಲೇ ವೈರಲ್ ಆಯಿತು. ಮುಸ್ಕಾನ್ ಧೈರ್ಯಕ್ಕೆ ಇಡೀ ಮುಸ್ಲಿಂ ಸಮುದಾಯವೇ ಶಹಬಾಷ್ ಹೇಳಿತು. ಹಾಗೆ ನೋಡಿದರೆ ಮುಸ್ಕಾನ್​ಳ ಆ ಪ್ರತಿಕ್ರಿಯೆ ಆ ಕ್ಷಣದಲ್ಲಿ ಹುಟ್ಟಿಕೊಂಡಿದ್ದು ಎಂಬುದು ವಿಡಿಯೋ ನೋಡಿದ ಯಾರಿಗಾದರೂ ತಿಳಿಯದಿರದು. ಆದರೆ ಅವಳ ಧೈರ್ಯಕ್ಕೆ ಎಂಥ ವಿರೋಧಿಗಳೂ ಮೆಚ್ಚಲೇಬೇಕು. ಏಕೆಂದರೆ ಅವಳು ಮಾಡಬಾರದ್ದೇನೂ ಮಾಡಲಿಲ್ಲ. ಜೈಶ್ರೀರಾಮ್ ಗೆ ಪ್ರತಿಯಾಗಿ ಅಲ್ಲಾ ಹೋ ಅಕ್ಬರ್ ಎಂದು ಕೂಗಿದಳು. ಅಲ್ಲಾ ಹೋ ಅಕ್ಬರ್ ಎಂದರೆ ದೇವರು ದೊಡ್ಡವನು ಎಂದರ್ಥ. ಆ ದೇವರು ಅಲ್ಲಾ ಆಗಿರಬಹುದು, ಅಥವಾ ಶ್ರೀರಾಮನೇ ಆಗಿರಬಹುದು!

ಮುಸ್ಕಾನ್​ಳ ಈ ಸ್ಪಾಂಟೇನಿಯಸ್ ರಿಯಾಕ್ಷನ್​ಗೆ ಈಗ ಬೇರೊಂದು ಬಣ್ಣ ಕಟ್ಟಲಾಗುತ್ತಿದೆ. ಅದೆಂದರೆ ಅವಳು ಅಂತರರಾಷ್ಟ್ರೀಯ ಭಯೋತ್ಪಾದಕಿ ಎಂಬುದು! ಇಂಥ ಅಸಂಬದ್ಧ ಆರೋಪವನ್ನು ಮಾಡುತ್ತಿರುವ ಸಂಘಿಗಳಾಗಲಿ, ಅಥವಾ ಹಿಂದುತ್ವದ ಅಮಲು ತಲೆಗೇರಿಸಿಕೊಂಡ ತಲೆಕೆಟ್ಟವರಾಗಲಿ ಮನುಷ್ಯತ್ವವನ್ನೇ ಮರೆತಿರುವ ರಕ್ಕಸರು ಎಂಬುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಏನೂ ಅರಿಯದ ಮಂಡ್ಯದ ಒಬ್ಬ ಮುಗ್ದ ಬಾಲೆಗೆ ಅಂತರಾಷ್ಟ್ರೀಯ ಭಯೋತ್ಪಾದಕಿಯ ಪಟ್ಟ ಕಟ್ಟುವ ಮೂಲಕ ಇಡೀ ಒಂದು ಸಮುದಾಯವನ್ನು ಭಯಪಡಿಸಲು ಹೊರಟಿರುವ ಇವರ ಮನಸ್ಥಿತಿಯನ್ನು ನೋಡಿದರೆ ಅಲ್​ಖೈದಾ ಮುಖ್ಯಸ್ಥ ಅಲ್ ಜವಾಹರಿಯ ಭಯೋತ್ಪಾದನೆಗಿಂತ, ಇಂಥ ಬಾಲೀಶ ಆರೋಪವನ್ನು ಗಂಭೀರವಾಗಿ ಮಾಡುತ್ತಿರುವ ಈ ನೀಚರೇ ದೊಡ್ಡ ಭಯೋತ್ಪಾದಕರು ಎಂಬುದು ಸ್ಪಷ್ಟವಾಗುತ್ತದೆ.

ಓಂಪ್ರಕಾಶ್ ನಾಯಕ್, ಹಿರಿಯ ಉಪಸಂಪಾದಕ, BMG24x7ಲೈವ್​ಕನ್ನಡ

Spread the love

Related Articles

Leave a Reply

Your email address will not be published. Required fields are marked *

Back to top button