ರಷ್ಯಾ ಸೇರಲು ಲುಹಾನ್ಸ್ಕ್ನಲ್ಲಿ ಮತದಾನ

ಕೀವ್: ರಷ್ಯಾ ದಶಕಗಳ ಹಿಂದೆ ಒಡೆದು ಚೂರುಚೂರಾಗಿ ಉಕ್ರೇನ್ ಮೊದಲಾದ ಹೊಸ ರಾಷ್ಟ್ರಗಳು ಉದಯಿಸಿದಾಗ ರಷ್ಯಾದ ಅರ್ಧಕ್ಕರ್ಧ ಬಲ ಕಡಿಮೆಯಾಗಿತ್ತು. ಆದರೆ ರಷ್ಯಾಗೆ ಮಾತ್ರ ತನ್ನ ಹಿಡಿತದಿಂದ ತಪ್ಪಿಸಿಕೊಂಡು ಅಸ್ತಿತ್ವಕ್ಕೆ ಬಂದಿದ್ದ ಹಲವು ಹೊಸ ದೇಶಗಳ ಮೇಲೆ ತನ್ನದೇ ಪ್ರಭುತ್ವ ಸಾಧಿಸುವ ಬಯಕೆ. ಅದಕ್ಕೆ ಉಕ್ರೇನ್ ಸಹ ಹೊರತಾಗಿರಲಿಲ್ಲ. ಹಲವು ವರ್ಷಗಳ ಕಾಲ ಉಕ್ರೇನ್ನಲ್ಲಿ ರಷ್ಯಾ ಮಾತು ಕೇಳುವ ಅಧ್ಯಕ್ಷನಿದ್ದುದರಿಂದ ಅಂಥ ತೊಂದರೆ ರಷ್ಯಾಕ್ಕೆ ಎದುರಾಗಿರಲಿಲ್ಲ. ಆದರೆ ಝೆಲೆನ್ಸ್ಕಿ ಅಧ್ಯಕ್ಷನಾದ ನಂತರ ರಷ್ಯಾಕ್ಕೆ ಇರಿಸುಮುರುಸು ಶುರುವಾಯಿತು. ರಷ್ಯಾ ಮಾತು ಕೇಳುವ ಬದಲು ಝೆಲೆನ್ಸ್ಕಿ ಪಶ್ಚಿಮದ ದೇಶಗಳ ಜೊತೆಗೆ ಸೇರಲು, ಅದರಲ್ಲೂ ನ್ಯಾಟೋ ಕೂಟ ಸೇರಲು ಹಾತೊರದದ್ದು ರಷ್ಯಾದ ಅಧ್ಯಕ್ಷ ಪುಟಿನ್ಅನ್ನು ಕೆರಳಿಸಿತು.
ಪುಟಿನ್ ಬಲವಂತದಿಂದ ಕ್ರಿಮಿಯಾ ವಶಪಡಿಸಿಕೊಂಡ. ನಂತರ ಉಕ್ರೇನ್ನ ಎರಡು ಅತಿ ದೊಡ್ಡ ಪ್ರದೇಶಗಳಾದ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ನಲ್ಲಿನ ಬಂಡುಕೋರರಿಗೆ ಸಹಾಯ ಮಾಡಿದ. ಇವೆರಡೂ ಉಕ್ರೇನ್ನಿಂದ ಹೊರಬರಲಿ ಎಂಬುದೇ ಪುಟಿನ್ ಬಯಕೆ. ಯಾವಾಗ ಝಿಲೆನ್ಸ್ಕಿಯ ಬಂಡಾಯ ಮನೋಧರ್ಮ ಹೆಚ್ಚಾಯಿತೊ, ತಾನು ಪರೋಕ್ಷವಾಗಿ ಬಂಡುಕೋರರಿಗೆ ಸಹಾಯ ಮಾಡುವುದು ಪ್ರಯೋಜನವಾಗಲಿಲ್ಲವೋ ರಷ್ಯಾ ಉಕ್ರೇನ್ ಮೇಲೆ ನೇರವಾಗಿಯೇ ಯುದ್ಧಕ್ಕಿಳಿದಿದ್ದು ಈಗ ಇತಿಹಾಸ.
ಅದಕ್ಕೂ ಮೊದಲು ಇವೆರಡಕ್ಕೂ ಸ್ವತಂತ್ರ ದೇಶಗಳು ಎಂಬುದನ್ನು ತಾವು ಮಾನ್ಯ ಮಾಡುವುದಾಗಿ ರಷ್ಯಾದ ಪರವಾಗಿ ಪುಟಿನ್ ಹೇಳಿಕೆಯನ್ನೂ ಕೊಟ್ಟುಬಿಟ್ಟ. ಏಕೆಂದರೆ ಇವೆರಡೂ ಉಕ್ರೇನ್ನಿಂದ ಸ್ವತಂತ್ರವಾದರೆ ತಮ್ಮ ಅಧೀನಕ್ಕೆ ಬಂದಹಾಗೆಯೇ ಎಂಬುದು ಪುಟಿನ್ ಲೆಕ್ಕಾಚಾರ.
ಈ ಹಿನ್ನೆಲೆಯಲ್ಲಿ ಉಕ್ರೇನ್ನ ಬಂಡುಕೋರ ಪ್ರಾಂತ್ಯ ಲುಹಾನ್ಸ್ಕ್, ಈಗ ರಷ್ಯಾಗೆ ಸೇರ್ಪಡೆಯಾಗುವ ಕುರಿತು ಶೀಘ್ರದಲ್ಲೇ ಜನಮತ ಗಣನೆ ನಡೆಸುವ ಸಾಧ್ಯತೆ ಇದೆ.

ಶೀಘ್ರ ಲುಹಾನ್ಸ್ಕ್ ನಲ್ಲಿ ರಷ್ಯಾ ಸೇರುವ ಕುರಿತಾಗಿ ಜನಮತಗಣನೆ ನಡೆಯಲಿದೆ. ರಷ್ಯಾ ಒಕ್ಕೂಟ ಸೇರುವ ಕುರಿತಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ತಮ್ಮ ಸಾಂವಿಧಾನಿಕ ಹಕ್ಕನ್ನು ಬಳಸುತ್ತಾರೆ ಎಂದು ಸ್ಥಳೀಯ ನಾಯಕ ಪಶೆಚ್ನಿಕ್ ಹೇಳಿದ್ದಾರೆ. ಆದರೆ ಆಗಲೇ ಅರ್ಧಬರ್ಧ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಪುಟಿನ್ ಇದನ್ನು ಎಷ್ಟರ ಮಟ್ಟಿಗೆ ಒಪ್ಪಿಕೊಳ್ಳುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.




