ತಮ್ಮ ಸಂಗಾತಿ ಜೊತೆ ಹೇಗಿರಬೇಕು ಗೊತ್ತಾ? ಇಲ್ಲಿದೆ ಕೆಲ ಟಿಪ್ಸ್ ಗಳು
ಮದುವೆ ಆದ್ಮೇಲೆ ಹುಡುಗ- ಹುಡುಗಿ ಸಾಕಷ್ಟು ಕನಸು ಕಟ್ಟಿಕೊಂಡಿರುತ್ತಾರೆ. ಮದುವೆಯ ನಂತರ ಹಾಗಿರಬೇಕು ಹೀಗಿರಬೇಕು ಅಂತಾ ಅಂದುಕೊಂಡಿರುತ್ತಾರೆ. ಇಬ್ಬರು ಹೊಂದಾಣಿಕೆಯಿಂದ ಇದ್ದರೆ ಎಲ್ಲವೂ ಚೆನ್ನಾಗಿರುತ್ತದೆ. ಒಂದು ವೇಳೆ ಏನಾದ್ರೂ ಮಿಸ್ ಆಯ್ತು ಅಂದರೆ ಸಾಕು ಜೀವನನೇ ಸಾಕಪ್ಪ ಅನಿಸಿಬಿಡುತ್ತದೆ. ಹೀಗಿರುವಾಗ ಸಂಗಾತಿ ಜೊತೆ ಹೇಗೆ ಸಮಯ ಕಳೆಯಬೇಕು.
ಇನ್ನು ತುಂಬಾ ಜನರಿಗೆ ತಮ್ಮ ಸಂಗಾತಿಯ ಜೊತೆ ಹೇಗಿರಬೇಕು ಎಂಬುದೇ ಹಲವರಿಗೆ ಮದುವೆಯ ಮುಂಚೆ ತಿಳಿದಿರುವುದಿಲ್ಲ. ಮದುವೆಯಾದ್ರೂ ಇಂತಹ ಸಣ್ಣ- ಸಣ್ಣ ವಿಚಾರಗಳನ್ನು ತಿಳಿದಿರುವುದಿಲ್ಲ. ಹೀಗಾಗಿ ಇಂತವರಿಗೆ ಇಲ್ಲಿದೆ ಕೆಲ ಟಿಪ್ಸ್ ಗಳು
ಸಂಗಾತಿಯನ್ನು ಗೌರವಿಸಿ
ಸಾಮನ್ಯವಾಗಿ ನೀವು ಯಾರನ್ನಾದರೂ ಪ್ರೀತಿಸುತ್ತೀರಿ ಎಂದಾದರೆ, ಅವರನ್ನು ಗೌರವಿಸಿ. ಗೌರವವಿಲ್ಲದೆಡೆ ಪ್ರೀತಿ ಇರಲು ಸಾಧ್ಯವಿಲ್ಲ. ಇದ್ದರೂ ಅದು ಉಸಿರುಕಟ್ಟಿಸುವಂಥದ್ದಾಗಿರುತ್ತದೆ, ಹೆಚ್ಚು ಕಾಲ ಬಾಳಲು ಸಾಧ್ಯವಿಲ್ಲ. ನಿಮ್ಮ ನಡುವೆ ಗೌರವವಿದ್ದಷ್ಟೂ ಸಂಬಂಧ ಭದ್ರವಾಗುತ್ತದೆ.
ನೈಜತೆ ಇರಲಿ
ನಿಜ ಜೀವನದಲ್ಲಿ ಅಂತಹ ಅದ್ಭುತ ರೋಮ್ಯಾನ್ಸ್ ಇರುವುದು ಸಹಜವೆನಿಸುವುದಿಲ್ಲ. ಬದಲಿಗೆ, ನಿಜವಾದ ಪ್ರಣಯ ಪರಸ್ಪರರ ಗೌರವ, ನಂಬಿಕೆ ಹಾಗೂ ಸ್ವಾತಂತ್ರ್ಯದಿಂದಲೇ ಬರುತ್ತದೆ ಎನ್ನುವುದನ್ನು ಅರ್ಥೈಸಿಕೊಳ್ಳಿ.
ಕುಟುಂಬಗಳ ನಡುವೆ ಸೌಹಾರ್ದ ಸಂಬಂಧ ಸಾಕು
ಇಂದಿನ ಬದುಕು ಹಿಂದಿನಂತಲ್ಲ. ಹಿಂದೆಲ್ಲ ಮದುವೆ ಎಂದರೆ ಎರಡು ಕುಟುಂಬಗಳ ನಡುವೆ ಏರ್ಪಡುವ ಸಂಬಂಧ ಎಂದು ವಿಶ್ಲೇಷಿಸಲ್ಪಡುತ್ತಿತ್ತು. ಮದುವೆಗೆ ಮುನ್ನವಾಗಲೀ, ಮದುವೆಯ ನಂತರವಾಗಲೀ ಎರಡು ಕುಟುಂಬಗಳನ್ನು ಎಷ್ಟು ಬೇಕೋ ಅಷ್ಟು ಹತ್ತಿರ, ಎಷ್ಟು ಬೇಕೋ ಅಷ್ಟೇ ದೂರದಲ್ಲಿ ಸೌಹಾರ್ದವಾಗಿ ಇಟ್ಟುಕೊಳ್ಳುವುದು ಸಂಬಂಧದ ದೃಷ್ಟಿಯಿಂದ ಒಳ್ಳೆಯದು.
ಮುಕ್ತ ಅಭಿವ್ಯಕ್ತಿ
ನಿಮಗೇನನ್ನಿಸುತ್ತದೆಯೋ ಅದನ್ನು ನೇರವಾಗಿ ಹೇಳುವುದರಿಂದ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ.
ನಿಮಗೆ ಏನನ್ನಿಸುತ್ತದೆಯೋ ಅದನ್ನು ಅಭಿವ್ಯಕ್ತಿಪಡಿಸುವಂತಹ ವಾತಾವರಣವಿಲ್ಲ ಎಂದಾದರೆ ಕ್ರಮೇಣ ಸಂವಹನದ ಕೊರತೆಯಾಗುತ್ತದೆ. ಇದರಿಂದ ಸಂಬಂಧದಲ್ಲಿ ಬಿರುಕುಗಳು ಏಳುವ ಸಾಧ್ಯತೆ ಹೆಚ್ಚಾಗುತ್ತದೆ.
ಬದಲಾವಣೆ ಒಪ್ಪಿಕೊಳ್ಳಿ
ಖಿನ್ನತೆಗೆ ಬೀಳದೆ ಸತ್ಯವನ್ನು ಒಪ್ಪಿಕೊಳ್ಳಬೇಕು. ಏಕಾಏಕಿ ಸಂಬಂಧದಿಂದ ಹೊರಬರಲು ಯತ್ನಿಸದೆ ಸುಧಾರಣೆಗೆ ಯತ್ನಿಸಬೇಕು. ಪರಸ್ಪರ ಪ್ರೀತಿ-ವಿಶ್ವಾಸವಿದ್ದಾಗ ಸುಧಾರಣಾ ಪ್ರಯತ್ನಗಳು ಖಂಡಿತವಾಗಿ ಫಲ ನೀಡುತ್ತವೆ.




