Hair: ಕೂದಲ ಆರೈಕೆಗೆ ಮುನ್ನ…

ಕೂದಲ ಆರೈಕೆ ಮಾಡುವವರು ಮಾಡಲೇ ಬೇಕಾದ ಕಾರ್ಯಗಳಲ್ಲಿ ಈ ಕೆಲವು ಅಂಶಗಳಿವೆ. ಉತ್ತಮ ಸಮತೋಲನ ಆಹಾರ ಸೇವನೆಯಿಂದ ಹಾಗೂ ಉತ್ತಮ ಜೀವನಶೈಲಿ ಅನುಸರಿಸುವುದರಿಂದ ನೀವು ಕೂದಲ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ದೇಹದ ಆರೋಗ್ಯಕ್ಕೆ ಮಾತ್ರವಲ್ಲ, ಕೂದಲು ಉದುರುವುದನ್ನು ತಡೆಯಲು ಕೂಡಾ ನೀವು ಸರಿಯಾದ ಸಮಯಕ್ಕೆ ನಿದ್ದೆ ಮಾಡುವುದು ಮುಖ್ಯವಾಗುತ್ತದೆ. ದಿನಕ್ಕೆ 7-8 ಗಂಟೆ ಹೊತ್ತು ನಿದ್ದೆ ಮಾಡದೆ ಹೋದರೆ ಕೂದಲು ಉದುರುವ ಸಮಸ್ಯೆ ಹೆಚ್ಚುತ್ತದೆ.
ವೈಯಕ್ತಿಕ ಬದುಕಿನ ಇಲ್ಲವೇ ಉದ್ಯೋಗ ಜೀವನದಲ್ಲಿ ಒತ್ತಡಗಳಿರುವುದು ಸಹಜ. ಅದರ ನಿವಾರಣೆಗೆ ನೀವು ಧ್ಯಾನ, ಯೋಗ ಹಾಗೂ ವಾಕಿಂಗ್ ಗಳನ್ನು ಮಾಡುವುದು ಮುಖ್ಯವಾಗುತ್ತದೆ. ಸೂರ್ಯನಮಸ್ಕಾರ ನಿತ್ಯ ಮಾಡುವುದರಿಂದ ದೇಹದ ಹಲವು ಸಮಸ್ಯೆಗಳು ದೂರವಾಗುವ ಜೊತೆಗೆ ಕೂದಲಿಗೆ ಸಂಬಂಧಿಸಿದ ತೊಂದರೆಗಳೂ ನಿವಾರಣೆಯಾಗುತ್ತವೆ.
ತಲೆಯನ್ನು ಸದಾ ಶುಚಿಯಾಗಿ ಇಟ್ಟುಕೊಳ್ಳುವ ಮೂಲಕ, ವಾರಕ್ಕೊಮ್ಮೆಯಾದರೂ ಬಾಚಣಿಗೆಯನ್ನು ತೊಳೆಯುವ ಮೂಲಕ, ತೆಂಗಿನೆಣ್ಣೆಯಿಂದ ನೆತ್ತಿಯ ಭಾಗವನ್ನು ಮಸಾಜ್ ಮಾಡುವ ಮೂಲಕ ಕೂದಲಿನ ಆರೈಕೆ ಮಾಡಿ. ರಾಸಾಯನಿಕ ಯುಕ್ತ ಶ್ಯಾಂಪೂ ಹಾಗೂ ಎಣ್ಣೆಗಳ ಬಳಕೆ ಕಡಿಮೆ ಮಾಡಿ.




