ಸಂಜೆಯ ಸ್ನ್ಯಾಕ್ಸ್ ಗೆ ಸವಿದು ನೋಡಿ ‘ಹೀರೆಕಾಯಿ ದೋಸೆ’

- – ಪವಿತ್ರಾ
ಜಿಟಿಪಿಟಿ ಮಳೆ ಬರುವಾಗ ಸಂಜೆ ಸಮಯಕ್ಕೆ ಏನಾದರೂ ಬಾಯಿ ಆಡಿಸುವುದಕ್ಕೆ ಇದ್ದರೆ ಚೆನ್ನಾಗಿರುತ್ತದೆ. ಎಣ್ಣೆಯಲ್ಲಿ ಹುರಿದ ತಿನಿಸುಗಳಿಗಿಂತ ತರಕಾರಿ ಬಳಸಿ ಮಾಡುವ ಕೆಲವೊಂದು ಸ್ನ್ಯಾಕ್ಸ್ ಆರೋಗ್ಯಕ್ಕೆ ಒಳ್ಳೆಯದು. ಇಲ್ಲಿ ಹೀರೆಕಾಯಿ ದೋಸೆ ಮಾಡುವ ವಿಧಾನ ಇದೆ. ಇದನ್ನು ಸಂಜೆ ಸಮಯದಲ್ಲಿ ಮಾಡಿಕೊಂಡು ಸವಿಯಬಹುದು, ಊಟದ ಜತೆ ಕೂಡ ಸೈಡ್ ಡಿಶ್ ಆಗಿ ತಿನ್ನಬಹುದು. ಮಾಡುವ ವಿಧಾನ ಹೀಗಿದೆ.
ಬೇಕಾಗುವ ಸಾಮಗ್ರಿಗಳು:
2 –ಹೀರೆಕಾಯಿ, ಎಣ್ಣೆ-ದೋಸೆ ಮಾಡುವಷ್ಟು, 2 ಕಪ್-ಅಕ್ಕಿ, 1 ಟೇಬಲ್-ಹೆಸರುಕಾಳು, 1 ಟೇಬಲ್ ಸ್ಪೂನ್-ಕಡಲೆಬೇಳೆ, ಸ್ವಲ್ಪ –ಮೆಂತ್ಯಕಾಳು, 2 ಟೇಬಲ್ ಸ್ಪೂನ್-ಧನಿಯಾ, 1 ಟೇಬಲ್ ಸ್ಪೂನ್-ಜೀರಿಗೆ, 1 ಕಪ್-ತೆಂಗಿನಕಾಯಿ ತುರಿ, 1 ಟೀ ಸ್ಪೂನ್-ಅರಿಶಿನ, ಲಿಂಬೆಹಣ್ಣಿನ ಗಾತ್ರದ-ಹುಣಸೆಹಣ್ಣು, 2 ಟೇಬಲ್ ಸ್ಪೂನ್-ಬೆಲ್ಲ, 4ರಿಂದ 8-ಒಣಮೆಣಸು, ಉಪ್ಪು-ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
ಮೊದಲಿಗೆ ಒಂದು ಪಾತ್ರೆಯಲ್ಲಿ ಅಕ್ಕಿ, ಹೆಸರುಕಾಳು, ಕಡಲೆಬೇಳೆ, ಮೆಂತ್ಯಕಾಳುಗಳನ್ನು ಹಾಕಿ ಚೆನ್ನಾಗಿ ತೊಳೆದು 5 ಗಂಟೆಗಳ ಕಾಲ ನೆನೆಸಿ. ನಂತರ ಇದರ ನೀರನ್ನು ಬಸಿದುಕೊಂಡು ಮಿಕ್ಸಿ ಜಾರಿಗೆ ಹಾಕಿ. ಅದಕ್ಕೆ ಒಣಮೆಣಸು, ಜೀರಿಗೆ, ಧನಿಯಾ, ಬೆಲ್ಲ, ಹುಣಸೆಹಣ್ಣು, ಅರಿಶಿನ, ಉಪ್ಪು ಹಾಕಿ ನಯವಾಗಿ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣ ತುಂಬಾ ದಪ್ಪಗೂ ಇರಬಾರದು ತೆಳುವಾಗಿಯೂ ಇರಬಾರದು. ನಂತರ ಹೀರೆಕಾಯಿ ಸಿಪ್ಪೆ ತೆಗೆದು ತೆಳುವಾಗಿ, ವೃತ್ತಾಕರವಾಗಿ ಕತ್ತರಿಸಿಕೊಳ್ಳಿ. ಗ್ಯಾಸ್ ಮೇಲೆ ತವಾ ಇಟ್ಟು ಅದಕ್ಕೆ ಎಣ್ಣೆ ಸವರಿ ಹೀರೆಕಾಯಿಯ ತುಂಡುಗಳನ್ನು ದೋಸೆ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಒಂದೊಂದೇ ಕಾವಲಿಯ ಮೇಲೆ ಇಡಿ. ಇದನ್ನು ದೋಸೆ ಆಕಾರದಲ್ಲಿ ಇಟ್ಟು ಎರಡೂ ಕಡೆ ಚೆನ್ನಾಗಿ ಕಾಯಿಸಿದರೆ ರುಚಿಯಾದ ಹೀರೆಕಾಯಿ ದೋಸೆ ರೆಡಿ.




