Latestಜಿಲ್ಲಾ ಸುದ್ದಿದಾವಣಗೆರೆರಾಜ್ಯಸುದ್ದಿ

ದುಬಾರಿಯಾಗುತ್ತಿದೆ ತರಕಾರಿ : ಗ್ರಾಹಕರ ಜೇಬಿಗೆ ಬೀಳುತ್ತಿದೆ ಕತ್ತರಿ…!

ದಾವಣಗೆರೆ: ಕಳೆದ ಹದಿನೈದು ದಿನಗಳಿಗೆ ಹೋಲಿಸಿದರೆ ಬೆಣ್ಣೆನಗರಿಯಲ್ಲಿ ತರಕಾರಿ ದರ ಗಗನಕ್ಕೇರಿದೆ. ಈರುಳ್ಳಿ ಹೊರತುಪಡಿಸಿದರೆ ಉಳಿದೆಲ್ಲಾ ತರಕಾರಿಗಳ ದರ ಪ್ರತಿ ಕೆ. ಜಿ. ಗೆ ನೂರು ರೂಪಾಯಿಯ ಗಡಿ ದಾಟಿದೆ. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.

ಮೊದಲೇ ಕೊರೊನಾ ಸೋಂಕಿನಿಂದ ವ್ಯಾಪಾರವಿಲ್ಲದೇ ಕಂಗೆಟ್ಟಿರುವ ವ್ಯಾಪಾರಿಗಳು ದರ ಹೆಚ್ಚಳದಿಂದ ವ್ಯಾಪಾರವಾಗದೇ ಕಂಗೆಟ್ಟಿದ್ದಾರೆ. ಕಳೆದ ಎರಡು ವರ್ಷಗಳ ಬಳಿಕ ಒಳ್ಳೆಯ ಧಾರಣೆ ಬಂದಿದ್ದರೂ ಲಾಭ ಮಾತ್ರ ಸಿಗುತ್ತಿಲ್ಲ. ಈ ಬಾರಿ ಬೆಳೆಯೂ ಸಾಕಷ್ಟು ಪ್ರಮಾಣದಲ್ಲಿ ಬಂದಿಲ್ಲ. ಭಾರೀ ಮಳೆ ಸುರಿದ ಕಾರಣ ಬೆಳೆಯೆಲ್ಲಾ ಹಾಳಾಗಿದ್ದರೆ, ಮತ್ತೆ ಕೆಲವೆಡೆ ಜಮೀನಿನಲ್ಲಿ ನೀರು ನಿಂತು ತರಕಾರಿ ಕೊಳೆತು ಹೋಗಿದೆ.

ಇನ್ನು ನುಗ್ಗೇಕಾಯಿಯಂತೂ ಕೇಳುವ ಹಾಗೆಯೇ ಇಲ್ಲ. ಬೆಲೆ ಜಾಸ್ತಿಯಾಗಿದೆ. ಗುಣಮಟ್ಟದ್ದು ಇದ್ದರಂತೂ ಮುಗಿದೇ ಹೋಯ್ತು. ಅವರು ಹೇಳಿದ್ದೇ ರೇಟು. ಕಾಯಿ ಕಾಯಿ ನುಗ್ಗೇಕಾಯಿ ಎಂದುಕೊಂಡು ಬಂದವರು ದರ ಕೇಳಿ ದಂಗಾಗಿ ಹೋಗುತ್ತಿದ್ದಾರೆ. ಕೆಲವರಂತೂ ಮಾರುಕಟ್ಟೆಯಲ್ಲಿ ನುಗ್ಗೇಕಾಯಿ ಖರೀದಿಸಲು ಬಂದು ಕೆಜಿಗೆ ಎಷ್ಟು ಹಣ ಕೇಳುತ್ತಿದ್ದಂತೆಯೇ ವಾಪಸ್ ಹೋಗುತ್ತಿದ್ದಾರೆ. ನುಗ್ಗೇಕಾಯಿ ಪೂರೈಕೆ ಜಾಸ್ತಿಯಿಲ್ಲದ ಕಾರಣ ಈ ರೀತಿಯ ದರ ಹೆಚ್ಚಳವಾಗಿದೆ.

ತೈಲ ಬೆಲೆಯನ್ನೂ ಮೀರಿ ನಿಂತಿರುವ ತರಕಾರಿಗಳು ಅದರಲ್ಲೂ ಎಲ್ಲಾ ಖಾದ್ಯಕ್ಕೂ ಅಗತ್ಯವಾಗಿದ್ದ ಟೊಮ್ಯಾಟೊ ಸಹ ಶತಕದ ಗಡಿ ದಾಟಿದೆ. ಗ್ರಾಹಕರು ಟೊಮ್ಯಾಟೊ ಬಿಟ್ಟು ಪರ್ಯಾಯ ಮಾರ್ಗದತ್ತ ಚಿತ್ತ ಹರಿಸಿದ್ದಾರೆ. ಯಾಕೆಂದರೆ ಅಷ್ಟೊಂದು ಹಣ ಕೊಟ್ಟು ಟೊಮೊಟೋ ಖರೀದಿಸಿದರೆ ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಬೆಲೆ ಕುಸಿದಾಗ ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸುವ ರೈತರಿಗೆ ಟೊಮಾಟೊ ಒಳ್ಳೆಯ ಬೆಲೆ ಸಿಕ್ಕರೂ ಪ್ರಯೋಜನ ಮಾತ್ರ ಇಲ್ಲ.

ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ ತರಕಾರಿ ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚಾಗಲು ಕಾರಣವೇನು? ಎಂಬುದು. ಈ ಬಾರಿ ಭಾರೀ ಮಳೆ ಸುರಿದ ಕಾರಣ ತರಕಾರಿ ಫಸಲಿಗೆ ಬರುವ ಹೊತ್ತಿಗೆ ನೀರು ನಿಂತು ಹಾಳಾಗಿ ಹೋದರಿಂದಾಗಿ ಹೆಚ್ಚಾಗಿ ಬೆಳೆ ಬಂದಿಲ್ಲ. ಬೆಳೆದಿದ್ದ ಬೆಳೆಯೆಲ್ಲಾ ನೀರು ಪಾಲಾಗಿದೆ. ಅಸಲಿರಲಿ, ಮಾಡಿದ ಖರ್ಚು ಬಾರದೇ ರೈತರು ಭಾರೀ ನಷ್ಟ ಅನುಭವಿಸಿದ್ದಾರೆ. ಪೂರೈಕೆಯು ಕಡಿಮೆಯಾಗಿದೆ. ಎಲ್ಲಿಯೂ ಸಿಗುತ್ತಿಲ್ಲ. ಇದರಿಂದಾಗಿ ಬೆಲೆ ಗಗನಕ್ಕೇರಿದೆ. ರೈತರ ಬಳಿ ಹೋದರೆ ಅಲ್ಲಿ ನಾವು ನಿರೀಕ್ಷಿಸಿದಷ್ಟು ತರಕಾರಿ ಸಿಗುತ್ತಿಲ್ಲ. ಹಾಗಾಗಿ, ಬೆಲೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ ಎಂದು ದಾವಣಗೆರೆಯ ತರಕಾರಿ ಮಾರಾಟಗಾರರು.

ಇನ್ನು ಈಗಾಗಲೇ ಮದುವೆ, ಸಭೆ, ಸಮಾರಂಭಗಳು ಹೆಚ್ಚಾಗಿ ನಡೆಯುತ್ತಿವೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಇದ್ದ ಕಾರಣ ಮದುವೆ ಹಾಗೂ ದೊಡ್ಡ ದೊಡ್ಡ ಸಮಾರಂಭಗಳು ಹೆಚ್ಚಾಗಿ ನಡೆಯಲಿಲ್ಲ. ಆದ್ರೆ, ರಾಜ್ಯ ಸರ್ಕಾರ ಮದುವೆಗೆ 500 ಜನರಿಗೆ ಅನುಮತಿ ನೀಡಿರುವ ಕಾರಣ ಮದುವೆಗಳು ವಿಜೃಂಭಣೆಯಿಂದ ನೆರವೇರುತ್ತಿವೆ. ಯಾವುದೇ ಮದುವೆ ಇರಲಿ, ಅಲ್ಲಿ ಸಸ್ಯಹಾರ ಊಟ ಇದ್ದೇ ಇರುತ್ತದೆ. ಬೆಳಿಗ್ಗೆ ತಿಂಡಿ, ಮಧ್ಯಾಹ್ನದ ಊಟಕ್ಕೆ ತರಕಾರಿ ಬೇಕು. ಹಾಗಾಗಿ, ಹೆಚ್ಚಿನ ಹಣ ಕೊಟ್ಟಾದರೂ ಮದುವೆ ಮಾಡುವವರು ಖರೀದಿಸುತ್ತಿದ್ದಾರೆ. ಈ ಕಾರಣದಿಂದಲೂ ದರಗಳು ಕೈಗೆ ಎಟುಕದ ರೀತಿಯಲ್ಲಿ ಹೋಗಿವೆ ಅಂತಾರೆ ಗ್ರಾಹಕರು.

ಕಳೆದ ವಾರದ ಹಿಂದೆ ಒಂದು ಕೆಜಿಗೆ ನುಗ್ಗೇಕಾಯಿಗೆ 300 ರಿಂದ 400 ರೂಪಾಯಿಯವರೆಗೆ ಪಡೆಯಲಾಗುತ್ತಿತ್ತು. ಮತ್ತೆ ಕೆಲವೆಡೆ ನುಗ್ಗೇಕಾಯಿಯೇ ಸಿಗುತ್ತಿಲ್ಲ. ಇದರಿಂದಾಗಿ ದರ ಜನರ ಕೈಗೆ ಸಿಗದಂತಾಗಿದೆ. ಕೆಲವೊಂದು ತರಕಾರಿ ಮಳಿಗೆಗಳಿಲ್ಲಿ ಮುಂಗಡವಾಗಿ ಅರ್ಧ ಹಣ ಕೊಟ್ಟು ಮಾರನೇ ದಿನ ಬಂದು ತೆಗೆದುಕೊಂಡು ಹೋಗುವಂತೆ ವ್ಯಾಪಾರಿಗಳು ಹೇಳುತ್ತಿದ್ದಾರೆ. ಆದ್ರೆ, ಅದು ಸಿಕ್ಕರೆ ಸಿಕ್ತು, ಇಲ್ಲಾಂದ್ರೆ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.

ಈರುಳ್ಳಿ ದರ ಪರವಾಗಿಲ್ಲ:

ಈಗ ಮಾರುಕಟ್ಟೆಯಲ್ಲಿ ಪರವಾಗಿಲ್ಲ ಎಂದರೆ ಅದು ಈರುಳ್ಳಿ ರೇಟ್. ಪ್ರತಿ ಕೆಜಿಗೆ 30 ರಿಂದ 40 ರೂಪಾಯಿಯವರೆಗೆ ಉಳ್ಳಾಗಡ್ಡಿ ಸಿಗುತ್ತಿದೆ. ದಾವಣಗೆರೆ ಎಪಿಎಂಸಿ ಮಾರುಕಟ್ಟೆಗೆ ಬಳ್ಳಾರಿ, ಹಾವೇರಿ, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಿಂದ ಈರುಳ್ಳಿ ಬೆಳೆಗಾರರು ಹೆಚ್ಚಾಗಿ ತರುತ್ತಿರುವುದರಿಂದ ದರ ಕಡಿಮೆಯಾಗಿದೆ. ಕಳೆದ ಹದಿನೈದು ದಿನಗಳ ಹಿಂದೆ ಇದ್ದ ದರಕ್ಕಿಂತ ಈಗ ಕಡಿಮೆಯಾಗಿದೆ.

ಇನ್ನು ಅಷ್ಟೇನೂ ಗುಣಮಟ್ಟವಿಲ್ಲದ ಮುಳುಗಾಯಿಗೆ 80 ರೂಪಾಯಿ ಪಡೆಯಲಾಗುತ್ತಿದೆ. ಚೆನ್ನಾಗಿರುವುದಕ್ಕೆ 100 ರೂಪಾಯಿ ತನಕ ಪಡೆಯಲಾಗುತ್ತಿದೆ. ಇನ್ನು ಹೂಕೋಸು ದರ ಏನೂ ಇದಕ್ಕಿಂತ ಭಿನ್ನವಿಲ್ಲ. ಸೊಪ್ಪಿನ ರೇಟ್ ಹೆಚ್ಚಾಗಿಯೇ ಇದೆ. ಬಟಾಣಿ 80 ರೂಪಾಯಿ ಇದೆ. ಮೆಣಸಿನ ಕಾಯಿ ಬಾಯಿ ರುಚಿಸುವ ಬದಲು ಗ್ರಾಹಕರಿಗೆ ಖಾರವಾಗಿದೆ. ಕೊತಂಬರಿ ಒಂದು ಕಟ್ ಗೆ 5 ರೂಪಾಯಿ, ಪಾಲಾಕ್, ಪುದಿನ ಒಂದು ಕಟ್ ಗೆ 10 ರೂಪಾಯಿ, ಎಳ್ ಅರವೆ 5 ರೂಪಾಯಿ ಹೀಗೆ ಎಲ್ಲಾ ತರಕಾರಿಯೂ ದುಬಾರಿಯಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button