ಕಾರವಾರ ಕಡಲ ತೀರದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ವಲಸೆ ಹಕ್ಕಿಗಳು

ಕಾರವಾರ : ಡಿಸೆಂಬರ್ ಮತ್ತು ಜನವರಿ ತಿಂಗಳು ಬಂತೆಂದರೆ ಕಾರವಾರ ಕಡಲ ತೀರದಲ್ಲಿ ವಿವಿಧ ವಲಸೆ ಹಕ್ಕಿಗಳ ಕಲರವ ನಗರಕ್ಕೆ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಕಡಲ ಕಿನಾರೆಯ ಉದ್ದಕ್ಕೂ ಅಪರೂಪದ ಪಕ್ಷಿ ಸಂಕುಲ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿವೆ. ಸಾವಿರಾರು ಕಿಲೋಮೀಟರ್ ದೂರದಿಂದ ವಲಸೆ ಬರುವ ವಿದೇಶಿ ಹಕ್ಕಿಗಳನ್ನು ಕಡಲ ಕಿನಾರೆಗೆ ಬರುವ ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ನಗರಿ ಕಾರವಾರದಲ್ಲಿ ಪ್ರತಿವರ್ಷ ಡಿಸೆಂಬರ್ ಮತ್ತು ಜನವರಿ ತಿಂಗಳು ಬಂತೆಂದರೆ ಸಾಕು ವಿದೇಶದಿಂದ ವಲಸೆ ಬರುವ ಸೀಗಲ್ ಪಕ್ಷಿಗಳು ಕಡಲ ತೀರದಲ್ಲಿ ತುಂಬಿಕೊಳ್ಳುತ್ತವೆ. ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರ ಇದೀಗ ಪಕ್ಷಿಧಾಮದಂತೆ ಕಂಡು ಬಂದು ನೋಡುಗರ ಕಣ್ಣಿಗೆ ಆನಂದ ತರಿಸುತ್ತಿದೆ.
ಕಾರವಾರದಲ್ಲಿ ವಿದೇಶಿ ಪಕ್ಷಿಗಳು ರಷ್ಯಾ ಭಾಗದ ಸೀಬರ್ಡ್ ಪಕ್ಷಿಗಳಾಗಿವೆ. ದಶಕಗಳಿಂದಲೂ ಕಾರವಾರದ ಕಡಲ ತೀರಕ್ಕೆ ಪ್ರತಿವರ್ಷ ವಲಸೆ ಬರುತ್ತವೆ. ಕಡಲ ತೀರದ ಬಳಿ ಸಮುದ್ರದಲ್ಲಿ ನಿಲ್ಲುವ ನಾಡದೋಣಿಗಳು ಹಾಗೂ ಸಮುದ್ರದಲ್ಲಿ ಕುಳಿತುಕೊಳ್ಳುವ ಪಕ್ಷಿಗಳ ಸಾಲು ಕಡಲತೀರಕ್ಕೆ ಬರುವ ಪ್ರವಾಸಿಗರನ್ನ ಆಕರ್ಷಿಸುತ್ತವೆ. ಅಲ್ಲದೇ ಹಚ್ಚ ಹಸಿರಿನ ಮರಗಳ ಮೇಲೆ ಸಾಲು ಸಾಲಾಗಿ ಕುಳಿತುಕೊಳ್ಳುವ ಬೆಳ್ಳಕ್ಕಿಗಳ ಹಿಂಡು ಬೆಳ್ಳನೆಯ ಹೊದಿಕೆ ಹೊದಿಸಿದಂತೆ ಕಾಣುತ್ತದೆ.
ಕಡಲ ತೀರವನ್ನು ನೋಡಿ ಇಲ್ಲಿನ ಸಮುದ್ರದಲ್ಲಿ ಈಜಾಡಿ ಎಂಜಾಯ್ ಮಾಡುವ ಪ್ರವಾಸಿಗರು ಇದೀಗ ಪಕ್ಷಿಗಳ ಸಮೂಹವನ್ನೂ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಕಳೆದೆರಡು ವರ್ಷಗಳಲ್ಲಿ ವಲಸೆ ಬರುವ ಸೀಗಲ್‌ಗಳ ಸಂಖ್ಯೆ ಕೊಂಚ ಕಡಿಮೆಯಾಗಿತ್ತಾದರೂ ಪ್ರಸಕ್ತ ವರ್ಷ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿರುವುದರಿಂದ ಪ್ರವಾಸಿಗರನ್ನ ಕಡಲತೀರ ತನ್ನತ್ತ ಸೆಳೆಯುತ್ತಿದೆ.
ಇನ್ನು ಪ್ರತಿವರ್ಷ ನವೆಂಬರ್ ತಿಂಗಳಿನಿಂದ ಸೀಗಲ್ ಎಂದು ಕರೆಯುವ ಸೀಬರ್ಡ್ ಪಕ್ಷಿಗಳು ಹಾಗೂ ಬೆಳ್ಳಕ್ಕಿಗಳು ಕಡಲತೀರಕ್ಕೆ ವಲಸೆ ಬರುತ್ತವೆ. ರಷ್ಯಾದಿಂದ ಹಾರಿ ಬರುವ ಈ ಪಕ್ಷಿಗಳು ಚಳಿಗಾಲದ ಎರಡು ಮೂರು ತಿಂಗಳುಗಳ ಕಾಲ ಕಾರವಾರದಲ್ಲಿ ಬೀಡು ಬಿಟ್ಟು ಬಳಿಕ ಟಿಬೇಟ್ ಭಾಗದತ್ತ ಮರಿಗಳನ್ನ ಮಾಡಲು ತೆರಳುತ್ತಿದ್ದವು. ರಾಜ್ಯದ ಕರಾವಳಿಯಲ್ಲಿ ವಿಶೇಷವಾಗಿ ಕಾರವಾರದ ಕಡಲತೀರ ಪ್ರದೇಶದಲ್ಲಿಯೇ ಇವು ಹೆಚ್ಚಾಗಿ ಕಾಣಸಿಗುವುದರಿಂದ ಇಲ್ಲಿಗೆ ಬರುವ ಪ್ರವಾಸಿಗರಿಗೆ ಈ ಹಕ್ಕಿಗಳು ಆಕರ್ಷಣೆಯಾಗಿದೆ. ಹೀಗಾಗಿ ಈ ಅವಧಿಯಲ್ಲಿ ಬಾನಾಡಿಗಳಿಂದ ತುಂಬಿರುವ ಕಡಲತೀರ ಪಕ್ಷಿ ಪ್ರೇಮಿಗಳಿಗೆ ಈ ವಿಶಿಷ್ಟ ಪಕ್ಷಿಗಳ ವೀಕ್ಷಣೆಗೆ ಉತ್ತಮ ಅವಕಾಶ ಮಾಡಿಕೊಟ್ಟಿದೆ.
ಈ ಹಿಂದೆ ಸಾವಿರ ಸಂಖ್ಯೆಯಲ್ಲಿ ಕಂಡುಬರುತ್ತಿದ್ದ ಈ ಸೀಗಲ್ ಪಕ್ಷಿಗಳನ್ನು ನೋಡಿಯೇ ಕಾರವಾರದ ಕದಂಬ ನೌಕಾನೆಲೆಯ ಯೋಜನೆಗೆ ಸೀಬರ್ಡ್ ಎಂದು ಹೆಸರಿಡಲಾಗಿತ್ತು. ಇನ್ನು ಕಳೆದೆರಡು ವರ್ಷಗಳಲ್ಲಿ ಉಂಟಾದ ನೆರೆ ಹಾಗೂ ಮತ್ಸ್ಯಕ್ಷಾಮದಿಂದಾಗಿ ಸೀಬರ್ಡ್ ಪಕ್ಷಿಗಳ ಸಂಖ್ಯೆ ಕಡಿಮೆಯಾಗಲು ಮುಖ್ಯ ಕಾರಣ ಎನ್ನಲಾಗಿದೆ. ಆಹಾರ ಸಿಗುವ ಪ್ರಮಾಣ ಕಡಿಮೆಯಾಗಿದ್ದರಿಂದ ಕಳೆದ ವರ್ಷ ಸೀಗಲ್‌ಗಳು ಬೇರೆಡೆಗೆ ತೆರಳಿದ್ದವಾದರೂ ಈ ಬಾರಿ ಮತ್ತೆ ಟ್ಯಾಗೋರ್ ಕಡಲತೀರಕ್ಕೆ ಭೇಟಿ ನೀಡಿವೆ. ವಿಶೇಷವಾಗಿ ಕಾರವಾರಕ್ಕೆ ಕಂದು ಹಾಗೂ ಕಪ್ಪು ಬಣ್ಣ ಮಿಶ್ರಿತ ಸೀಗಲ್‌ಗಳು ಆಗಮಿಸುತ್ತವೆ ಅಂತಾರೆ ಪಕ್ಷಿ ಪ್ರೇಮಿಗಳು.
ಚಳಿಗಾಲದಲ್ಲಿ ವಲಸೆ ಬಂದು ಟ್ಯಾಗೋರ್ ಕಡಲತೀರದಲ್ಲಿ ಬೀಡು ಬಿಡುವ ಸೀಗಲ್ ಪಕ್ಷಿಗಳು ಕಡಲತೀರದ ಅಂದವನ್ನ ಹೆಚ್ಚಿಸಿವೆ.ನೀವೂ ಸಹ ಈ ಬಾನಾಡಿಗಳನ್ನ ನೋಡಿ ಕಣ್ತುಂಬಿಕೊಳ್ಳಬೇಕಿದ್ರೆ ಕಾರವಾರ ಕಡಲ ತೀರಕ್ಕೊಮ್ಮೆ ಭೇಟಿ ನೀಡಬಹುದು.




