ಜಿಲ್ಲಾ ಸುದ್ದಿದಾವಣಗೆರೆ

ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳ ನರಳಾಟ: ಸೂಕ್ತ ವೇಳೆ ಚಿಕಿತ್ಸೆ ಸಿಗದೇ ಮೃತಪಟ್ಟ ವ್ಯಕ್ತಿ

ದಾವಣಗೆರೆ: ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸೂಕ್ತ ಚಿಕಿತ್ಸೆ ಕಾರಣ ವ್ಯಕ್ತಿಯೊಬ್ಬರು ಮೃತಪಟ್ಟ ದಾರುಣ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತ್ಯಾವಣಿಗೆಯಲ್ಲಿ ನಡೆದಿದೆ.

ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಹನುಮಂತಪ್ಪ ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ತ್ಯಾವಣಿಗೆ ಸಮೀಪದ ಕಬ್ಬಳ – ದೊಡ್ಡಘಟ್ಟ ಗ್ರಾಮದ ವೆಂಕಟೇಶ್ವರ ಕಾನ್ವೆಂಟ್ ಬಳಿ ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ನಲ್ಲೂರು ಗ್ರಾಮದ ಹನುಮಂತಪ್ಪ ಮತ್ತು ಲಾರಿ ಡ್ರೈವರ್ ಫಯಾಜ್ ಗಾಯಗೊಂಡಿದ್ದರು.

ಗಾಯಗೊಂಡವರನ್ನು ತ್ಯಾವಣಿಗೆ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತಂದರೆ. ಅಲ್ಲಿ ವೈದ್ಯರೇ ಇರಲಿಲ್ಲ. 4 ಗಂಟೆ ಸುಮಾರಿಗೆ ವೈದ್ಯರಾದ ಚನ್ನಬಸಪ್ಪ ಕರ್ತವ್ಯ ಮುಗಿಸಿಕೊಂಡು ಮನೆಗೆ ಹೋಗಿದ್ದಾರೆ. ಗಾಯಾಳುಗಳು ಆಸ್ಪತ್ರೆಯ ಎದುರು ಒಂದುವರೆ ಗಂಟೆಯವರೆಗೆ ಜೀವನ್ಮರಣದ ನಡುವೆ ಒದ್ದಾಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಆದರೂ ಒಂದೂ ಆ್ಯಂಬುಲೆನ್ಸ್ ಬರಲಿಲ್ಲ. ಇದೇ ಆಸ್ಪತ್ರೆಯಲ್ಲಿ ಆಂಬ್ಯಲೆನ್ಸ್ ಇದ್ದರೂ ಸಹ ಆಸ್ಪತ್ರೆಯಲ್ಲೇ ಕೆಟ್ಟು ನಿಂತಿದೆ. ತ್ಯಾವಣಿಗೆ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಗೆ ಇದು ಹಿಡಿದ ಕನ್ನಡಿ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಆ್ಯಂಬುಲೆನ್ಸ್ ಸಿಗದ ಕಾರಣ ಕೆರೆಬಿಳಚಿ ಗ್ರಾಮದಿಂದ ಖಾಸಗಿ ಆ್ಯಂಬುಲೆನ್ಸ್ ಬಂದು ಗಾಯಾಳುಗಳನ್ನು ದಾವಣಗೆರೆಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಿಸದೇ ಹನುಮಂತಪ್ಪ ಮೃತಪಟ್ಟಿದ್ದಾರೆ. ಇನ್ನು ಫಯಾಜ್ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ. ಜಿಲ್ಲಾ ಮತ್ತು ತಾಲೂಕು ಆರೋಗ್ಯಾಧಿಕಾರಿಗಳು ಕೇವಲ ದೂರವಾಣಿಯಲ್ಲಿ ಮಾತನಾಡಿದರೆ ವಿನಾಃ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಸೂಕ್ತ ಸಮಯಕ್ಕೆ ಆ್ಯಂಬುಲೆನ್ಸ್ ಬಂದು ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಿದ್ದರೆ ಹನುಮಂತಪ್ಪ ಬದುಕುಳಿಯುತ್ತಿದ್ದರು. ಆದರೆ, ಇಲ್ಲಿನ ಅವ್ಯವಸ್ಥೆಗೆ ಒಂದು ಜೀವವೇ ಹೋಗಿದೆ ಎಂದು ತ್ಯಾವಣಿಗೆ ಗ್ರಾಮಸ್ಥರು ಆರೋಪಿಸಿದ್ದಾರೆ.

ತ್ಯಾವಣಿಗೆ ಆಸ್ಪತ್ರೆಯು ದಿನದ 24 ಗಂಟೆಯೂ ಕಾರ್ಯನಿರ್ವಹಿಸಬೇಕೆಂಬ ಸರ್ಕಾರದ ಆದೇಶವಿದ್ದರೂ ರಾತ್ರಿ ವೇಳೆಯಲ್ಲಿ ವೈದ್ಯರೇ ಇರೋದಿಲ್ಲ. ಮನುಷ್ಯನ ಜೀವಕ್ಕೆ ಬೆಲೆನೇ ಇಲ್ಲದಂತಾಗಿದೆ. ಗಾಯಾಳುಗಳು ಜೀವನ್ಮರಣದ ನಡುವೆ ಹೋರಾಡುತ್ತಾ ಇರುವ ದೃಶ್ಯ ನೋಡಿದರೆ ಮನಕಲುಕುತ್ತೆ. ಈಗಲಾದರೂ ಎಚ್ಚೆತ್ತುಕೊಂಡು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಮೃತನ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡಬೇಕು. ಮುಂದಿನ ದಿನಗಳಲ್ಲಿ ಇಂಥ ಘಟನೆ ಸಂಭವಿಸದಂತೆ ಎಚ್ಚರ ವಹಿಸಬೇಕು. ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೇ, ಆ್ಯಂಬುಲೆನ್ಸ್ ಕೆಟ್ಟು ನಿಂತಿದ್ದರೂ ಇದುವರೆಗೆ ಯಾಕೆ ಸರಿಪಡಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button