ಮತಾಂತರ ನಿಷೇಧ ಮಸೂದೆಗೆ ಹಿನ್ನಡೆಯಾಗಿಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆ

ಹುಬ್ಬಳ್ಳಿ : ವಿಧಾನಪರಿಷತ್ತಿನಲ್ಲಿ ಮತಾಂತರ ನಿಷೇಧ ವಿಧೇಯಕ ಅಂಗೀಕಾರಕ್ಕೆ ಹಿನ್ನೆಡೆಯಾಗಿಲ್ಲ. ಸದನದಲ್ಲಿ ನಮಗೆ ಅಗತ್ಯ ಬೆಂಬಲ ಇಲ್ಲ. ಅದರಳೊಗೆ ನಮ್ಮವರೇ ಮೂರನಾಲ್ಕು ಸದಸ್ಯರು ಸದನದಲ್ಲಿರಲಿಲ್ಲ. ಹೀಗಾಗಿ ಅವರನ್ನು ಕರೆ ತರುವ ಪ್ರಯತ್ನ ಮಾಡಲಾಯಿತು. ಇನ್ನಿಬ್ಬರು ಸದಸ್ಯರು ಬಂದಿದ್ದರೆ, ಮತಾಂತಾರ ನಿಷೇಧ ಕಾಯ್ದೆ ಪಾಸ್ ಮಾಡುವ ಉದ್ದೇಶವಿತ್ತು ಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸದಸ್ಯರು ಬರದ ಕಾರಣ ನ್ಯಾಯಸಮ್ಮತವಾಗಿ ಮುಂದಿನ ಅಧಿವೇಶನದಲ್ಲಿ ಮಂಡಿಸಲು ತೀರ್ಮಾನಿಸಿದ್ದೇವೆ ಎಂದರು.
ವಿಪಕ್ಷಗಳ ವಿರುದ್ಧ ಕಿಡಿಕಾರಿದ ಬೊಮ್ಮಾಯಿ, ಅವರ ಹಠದ ಧೋರಣೆಯಿಂದ ಸಭಾಪತಿಗಳ ಮನಸ್ಸಿಗೆ ನೋವಾಗಿದೆ. ಸಭಾಪತಿ ಎಂಬುವುದನ್ನು ಮರೆತು ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾರೆ. ಅದರಿಂದ ನೊಂದು ಸಭಾಪತಿ ರಾಜಿನಾಮೆ ನೀಡಲು ಮುಂದಾಗಿದ್ದರು. ನಂತರ ಅವರ ಮನವೊಲಿಸಲಾಯಿತು. ವಿಪಕ್ಷಗಳು ಆ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂದರು.
ನಾನು ಸದ್ಯಕ್ಕೆ ವಿದೇಶಕ್ಕೆ ಹೋಗುತ್ತಿಲ್ಲ
ಡಾವೋಸ್ ನಲ್ಲಿ ಶೃಂಗಸಭೆ ನಿಗದಿಯಾಗಿತ್ತು. ಅದನ್ನು ಜೂನ್ ತಿಂಗಳಿಗೆ ಮುಂದುವರಿಸಲಾಗಿದೆ. ಹೀಗಾಗಿ ಸದ್ಯಕ್ಕೆ ನಾನು ವಿದೇಶಕ್ಕೆ ಹೋಗುತ್ತಿಲ್ಲ ;ಶಸ್ತ್ರ ಚಿಕಿತ್ಸೆಗೆ ನಾನು ವಿದೇಶಕ್ಕೆ ಹೋಗುತ್ತಿದ್ದೇನೆ ಎಂಬುದನ್ನು ಸಿಎಂ ತಳ್ಳಿಹಾಕಿದರು.
ಓಮಿಕ್ರಾನ್ ಕುರಿತು ನಾಳೆ ಬೆಂಗಳೂರಿನಲ್ಲಿ ಸಭೆ
ದೇಶದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಭಾನುವಾರ ಬೆಂಗಳೂರಿನಲ್ಲಿ ತಜ್ಱರ ಸಭೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
