ಗಂಗೂಬಾಯಿ ಕಾಠಿಯವಾಡಿ ಚಿತ್ರತಂಡದ ವಿರುದ್ಧ ತಿರುಗಿ ಬಿದ್ದ ಗಂಗೂಬಾಯಿ ಪುತ್ರ

ಬಾಲಿವುಡ್ ಚಿತ್ರರಂಗದಲ್ಲಿ ಸದ್ಯದ ಮಟ್ಟಿಗೆ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಸಿನಿಮಾ ಗಂಗೂಬಾಯಿ ಕಾಠಿಯವಾಡಿ. ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹಾಗೂ ಆಲಿಯಾ ಭಟ್ ಕಾಂಬಿನೇಷನ್ನಲ್ಲಿ ಬರ್ತಿರೋ ಮೊದಲ ಸಿನಿಮಾ ಸಾಕಷ್ಟು ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಸದ್ಯದಲ್ಲೇ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು ಇದೀಗ ಚಿತ್ರತಂಡದ ವಿರುದ್ಧ ಗುಂಗೂಬಾಯಿ ಪುತ್ರ ಬಾಬು ರಾವ್ಜಿ ತಿರುಗಿ ಬಿದ್ದಿದ್ದಾರೆ.
ಚಿತ್ರದಲ್ಲಿ ಗಂಗೂಬಾಯಿ ಅವರನ್ನ ಕೆಟ್ಟದಾಗಿ ತೋರಿಸಲಾಗಿದೆ ಎಂದು ಚಿತ್ರತಂಡ ಹಾಗೂ ಆಲಿಯಾ ಭಟ್ ವಿರುದ್ಧ ಗಂಗೂಬಾಯಿ ಕುಟುಂಬ ಕಿಡಿಕಾರಿದ್ದಾರೆ. ಜೊತೆಗೆ ಚಿತ್ರದ ಟ್ರೈಲರ್ ನೋಡಿದ ಗಂಗೂಬಾಯಿ ಕುಟುಂಬದ ಲಾಯರ್ ಕೂಡ ಬೆಚ್ಚಿ ಬಿದ್ದಿದ್ದಾರೆ. ಅಲ್ಲದೆ ಸಿನಿಮಾದ ಬಿಡುಗಡೆಗೆ ತಡೆ ಕೋರಿದ್ದು, ಚಿತ್ರ ಬಿಡುಗಡೆ ಸಂದರ್ಭದಲ್ಲಿ ಚಿತ್ರತಂಡಕ್ಕೆ ತಲೆ ನೋವು ಶುರುವಾಗಿದೆ.
ಗಂಗೂಬಾಯಿ ಪುತ್ರ ಬಾಬು ರಾವ್ಜಿ ಶಾ ಮಾಧ್ಯಮಗಳ ಮುಂದೆ ಆಕ್ರೋಶ ಹೊರ ಹಾಕಿದ್ದಾರೆ. ನನ್ನ ಅಮ್ಮನನ್ನ ಈ ಸಿನಿಮಾದಲ್ಲಿ ವೇಶ್ಯೆಯಾಗಿ ತೋರಿಸಲಾಗಿದೆ. ನನ್ನ ಅಮ್ಮನ ಬಗ್ಗೆ ಜನ ಏನೇನೋ ಹೇಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಗಂಗೂಬಾಯಿ ಕುರಿತು ಸಿನಿಮಾ ಮಾಡಲಾಗುತ್ತಿದೆ ಎಂದು ಗೊತ್ತಾದ ದಿನದಿಂದ ಗಂಗೂಬಾಯಿ ಕುಟುಂಬ ಮುಜುಗರಕ್ಕೆ ಒಳಗಾಗಿದೆ. ಈಗಿರುವ ಮನೆ ಬಿಟ್ಟು ಬೇರೆ ಕಡೆ ಹೋಗಿದ್ದಾರೆ. ಮುಂಬೈನ ಅಂಧೇರಿಯಿಂದ ಬೋರಿವಲಿ ಕಡೆ ಹೋಗಿ ಜೀವನ ನಡೆಸುತ್ತಿದ್ದಾರೆ. ಇವರ ಸಂಬಂಧಿಕರು ಕೂಡ ಗಂಗೂಬಾಯಿ ವೇಶ್ಯೆಯಾಗಿದ್ದಳ, ಸಮಾಜ ಸೇವಕಿನಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇದೇ ಕಾರಣದಿಂದ ಗಂಗೂಬಾಯಿ ಕುಟುಂಬ ಶಾಂತಿಯುತವಾಗಿ ಜೀವನ ನಡೆಸಲು ಸಾದ್ಯವಾಗುತ್ತಿಲ್ಲ ಎಂದು ಗಂಗೂಬಾಯಿ ಕುಟುಂಬದ ಪರ ವಕೀಲ ನರೇಂದ್ರ ತಿಳಿಸಿದ್ದಾರೆ.
2021ರಲ್ಲಿಯೇ ಗಂಗೂಬಾಯಿ ಪುತ್ರ ಬಾಬು ರಾವ್ಜಿ ಮುಂಬೈ ಹೈ ಕೋರ್ಟ್ನಲ್ಲಿ ದೂರು ದಾಖಲಿಸಿದ್ದರು. ನ್ಯಾಯಾಲಯ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹಾಗೂ ಆಲಿಯಾ ಭಟ್ಗೆ ಸಮನ್ಸ್ ಜಾರಿ ಮಾಡಿತ್ತು. ಆದರೆ ಗಂಗೂಬಾಯಿ ಕುಟುಂಬ ಸಿನಿಮಾ ಬಿಡುಗಡೆ ಮಾಡಬಾರದು ಎಂಬ ವಾದವನ್ನು ನ್ಯಾಯಾಲಯ ತಳ್ಳಿ ಹಾಕಿತ್ತು.
ಗಂಗೂಬಾಯಿ ಅವರನ್ನ ಚಿತ್ರದಲ್ಲಿ ತಪ್ಪಾಗಿ ಬಿಂಬಿಸಿದಕ್ಕೆ ಏನಾದರೂ ಮಾಡುವ ಬದಲು ಸಾಕ್ಷಿಗಳನ್ನ ಕೇಳುತ್ತಿದ್ದಾರೆ. ಈಗಾಗಲೇ ಗಂಗೂಬಾಯಿ ಪುತ್ರ ಬಾಬು ರಾವ್ಜಿ ನ್ಯಾಯಾಲಯಕ್ಕೆ ಏನು ಬೇಕೋ ಅದೆಲ್ಲವನ್ನೂ ಒದಗಿಸಿದ್ದಾರೆ. ಆದ್ರೆ ನ್ಯಾಯಾಲಯ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವಕೀಲ ನರೇಂದ್ರ ಬೇಸರ ಹೊರ ಹಾಕಿದರು.
ಸಿನಿಮಾ ಸೆಟ್ಟೇರಿದ ದಿನದಿಂದಲೂ ಚಿತ್ರತಂಡದ ವಿರುದ್ಧ ಗಂಗೂಬಾಯಿ ಕುಟುಂಬ ತಿರುಗಿ ಬಿದ್ದಿದೆ. ಸಿನಿಮಾ ನಿಲ್ಲಿಸಲು ಗಂಗೂಬಾಯಿ ಕುಟುಂಬ ಪ್ರಯತ್ನಿಸುತ್ತಲೇ ಇದೆ. ಆದರೆ ಇದರ ಮಧ್ಯೆಯೇ ಶೂಟಿಂಗ್ ಮುಗಿಸಿರೋ ಬನ್ಸಾಲಿ ಟೀಂ ಇದೇ ಫೆಬ್ರವರಿ 25ರಂದು ವಿಶ್ವದಾದ್ಯಂತ ಬಿಡುಗಡೆ ಮಾಡಲು ಸಿದ್ಧವಾಗಿದೆ.
