Latestಕೃಷಿಚಿಕ್ಕಮಗಳೂರುರಾಜ್ಯ

ಮಾಯವಾಗುತ್ತಿದೆ ಮಲೆನಾಡಿನ ಪಾರಂಪರಿಕ ಭತ್ತದ ಕೃಷಿ

ಕಿರುಗುಂದ ರಫೀಕ್

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಹಿಂದೆಯಿದ್ದ ಕ್ರಮಬದ್ಧ ಕೃಷಿ ಚಟುವಟಿಕೆ ಈಗ ನಶಿಸಿ ಹೋಗಿದೆ. ಮೇ-ಜೂನ್ ಮಾಹೆಯ ನಡುವಿನಲ್ಲಿ ಮಳೆಗಾಲ ಆರಂಭವಾಗುತ್ತಿದ್ದಾಗ ಮಳೆ ಲೆಕ್ಕದ ಪ್ರಕಾರವೇ ಕೃಷಿ ಚಟುವಟಿಕೆ ನಡೆಯುತ್ತಿತ್ತು. ಇತ್ತೀಚಿನ ವರ್ಷಗಳಿಂದ ಪ್ರಕೃತಿ ವಿಕೋಪಗಳು ಹೆಚ್ಚಾಗಿ ಸಂಭವಿಸುತ್ತಿರುವುದು ಕೃಷಿಗೆ ತೀವ್ರ ಹಿನ್ನೆಡೆಯಾಗಲು ಕಾರಣವಾಗಿದೆ.

ರೈತರು ಪಾರಂಪರಿಕವಾಗಿ ಉಳಿಸಿಕೊಂಡು ಬಂದಿದ್ದ ಭತ್ತದ ಬೆಳೆ ಬಹುತೇಕ ಭಾಗದಲ್ಲಿ ಕಣ್ಮರೆಯಾಗತೊಡಗಿದೆ. ಮಳೆಯ ಏರುಪೇರು, ನದಿಪಾತ್ರದ ಗದ್ದೆಗಳಿಗೆ ಪ್ರವಾಹವಾಗಿ ಹರಿಯುವ ನೀರು, ಅತೀವೃಷ್ಟಿ ಹಾಗೂ ವಿವಿಧೆಡೆ ಕಾಡುಪ್ರಾಣಿಗಳ ಹಾವಳಿಯಿಂದ ಗದ್ದೆಯಲ್ಲಿ ಯಾವುದೇ ಬೆಳೆ ಉಳಿಸಿಕೊಳ್ಳಲು ಕಷ್ಟಸಾಧ್ಯವಾಗಿದೆ.

ಅಲ್ಪಸ್ವಲ್ಪ ಜಮೀನು ಹೊಂದಿದವರಿಗೆ ಬೆಳೆ ನಿರ್ವಹಣೆಗೆ ಯಥೇಚ್ಛ ಖರ್ಚಾಗುತ್ತಿದೆ. ಹೀಗಾಗಿ ಅನೇಕ ರೈತರ ಗದ್ದೆಗಳು ಏನನ್ನೂ ಬೆಳೆಯದೆ ಹಾಳುಬಿದ್ದಿವೆ. ಕೆಲ ರೈತರು ಭತ್ತದ ಗದ್ದೆಗಳಿಗೆ ಬಾಳೆ, ಅಡಕೆ, ಕಾಫಿ ಗಿಡಗಳನ್ನು ಬೆಳೆದಿದ್ದಾರೆ. ಕೃಷಿ ಕಾರ್ಮಿಕರ ಕೊರತೆ, ಅಧಿಕ ಸಂಬಳ, ಬೆಳೆದ ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ. ಇತ್ಯಾದಿ ಸಮಸ್ಯೆಯಿಂದ ರೈತರು ತತ್ತರಿಸಿದ್ದಾರೆ. ಇನ್ನು ಭತ್ತದ ಬೆಳೆಗೆ ಅಲ್ಲಲ್ಲಿ ಕೊಳವೆ ಹುಳು, ಎಲೆ ಸುರುಳಿ ಹುಳು, ಕಾಂಡಕೊರಕದ ಹುಳು, ಕಂಬಳಿ ಹುಳುಗಳ ಬಾಧೆ ಕಂಡುಬರುತ್ತಿದೆ. ಅಲ್ಲದೆ ಬೆಂಕಿರೋಗದ ಬಾಧೆ, ಕೀಟ ಹಾಗೂ ರೋಗಬಾಧೆ ತಡೆಯಲು ರೈತರು ಹರಸಾಹಸಪಡಬೇಕಾಗಿದೆ.

ಹಿಂದೆ ಭತ್ತದ ನಾಟಿ ಅಥವಾ ಕೊಯ್ಲಿನ ವೇಳೆ ಜಾನಪದ ಹಾಡು, ಸೋಬಾನೆ ಪದಗಳನ್ನು ಹಾಡುತ್ತಿದ್ದರು. ತಮ್ಮದೇ ಆದ ರೀತಿಯಲ್ಲಿ ಜಾನಪದ ಶೈಲಿಯಲ್ಲಿ ಕೃಷಿ ಚಟುವಟಿಕೆ ಸಾಗಿತ್ತು. ಈಗ ಇಂತಹ ದೃಶ್ಯಗಳೇ ಮಾಯವಾಗಿವೆ ಎನ್ನುತ್ತಾರೆ ಕೆಲವು ಹಿರಿಯ ರೈತರು.

ಗ್ರಾಮೀಣ ಭಾಗದ ರೈತರ ಮಕ್ಕಳು ಐಟಿಬಿಟಿಯಂತಹ ಉದ್ಯೋಗಕ್ಕಾಗಿ ಮಹಾನಗರಗಳಿಗೆ ತೆರಳುತ್ತಿದ್ದಾರೆ. ಇದರಿಂದಾಗಿ ತಲತಲಾಂತರದಿಂದ ವ್ಯವಸಾಯ ಮಾಡುತ್ತ ಬಂದಿರುವ ತಮ್ಮ ಜಮೀನನ್ನು ಕಡೆಗಣಿಸಿದಂತಾಗಿದೆ. ರೈತರು ವಾಣಿಜ್ಯ ಬೆಳೆಗಳನ್ನು ಕೈ ಬಿಟ್ಟು, ಪರ್ಯಾಯ ಬೆಳೆಗಳತ್ತ ವಾಲುತ್ತಿದ್ದಾರೆ.

“ಮಲೆನಾಡು ಭಾಗದಲ್ಲಿ ಭತ್ತದ ಕೃಷಿಯನ್ನು ಲಾಭ-ನಷ್ಟವನ್ನು ಲೆಕ್ಕಾಚಾರ ಹಾಕದೇ ತಮ್ಮ ಕರ್ತವ್ಯ ಎಂಬಂತೆ ಪಾರಂಪರಿಕವಾಗಿ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದರು. ಆದರೆ ಈಗ ಆಳುಗಳ ಕೊರತೆ, ಶುಂಠಿ, ಅಡಕೆ, ಬಾಳೆ, ಕಾಫಿಯಂತಹ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ವ್ಯಾಮೋಹ, ಸೈಟುಗಳ ನಿರ್ಮಾಣದಿಂದ ಹಾಗೂ ಸರ್ಕಾರಗಳ ಪ್ರೋತ್ಸಾಹಕ ಯೋಜನೆಗಳ ಕೊರತೆಯಿಂದಾಗಿ ಭತ್ತದ ಕೃಷಿಯಲ್ಲಿ ದಿನ ದಿನ ದಿನವೂ ಆಸಕ್ತಿ ಕಳೆದುಹೋಗುತ್ತಿದೆ. ಇದರ ಪರಿಣಾಮವಾಗಿ ಭವಿಷ್ಯದಲ್ಲಿ ಅನ್ನ, ನೀರು ಎರಡೂ ಇನ್ನಷ್ಟು ಲಭ್ಯತೆ ಇರದೇ ಹೋಗುತ್ತದೆ. ಆದ್ದರಿಂದ ಅಲ್ಲೊಂದು ಇಲ್ಲೊಂದು ಗದ್ದೆಯಲ್ಲಿ ಕೇಳಿ ಬರುತ್ತಿರುವ “ಯೇಗಿಣಿ.. ಯೇಗಿಣಿಯೇ..!” ಎಂಬ ಹೆಣ್ಣಾಳುಗಳ ಸಸಿನೆಟ್ಟಿ ಹಾಡಿನ ಸೊಲ್ಲು ಜೀವ ಮಿಡಿತದ ಸಚಿತ್ರವಾಗಿ ನನಗೆ ಕಾಡುತ್ತದೆ.”
-ಡಾ. ಸಂಪತ್ ಬೆಟ್ಟಗೆರೆ, ಯುವ ಸಾಹಿತಿ

Spread the love

Related Articles

Leave a Reply

Your email address will not be published. Required fields are marked *

Back to top button