ಚಾರ್ಮಾಡಿ ಘಾಟ್; ಲಘು ವಾಹನಗಳಿಗೆ ಮಾತ್ರ ಸಂಚರಿಸಲು
ಚಿಕ್ಕಮಗಳೂರು: ಚಾರ್ಮಾಡಿ ಘಾಟಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಹೇರಿದ್ದ ನಿರ್ಬಂಧವನ್ನು ಸಡಿಲಿಸಲಾಗಿದ್ದು ಜನರ ಒತ್ತಾಯದ ಮೇರೆಗೆ ಚಾರ್ಮಾಡಿ ಘಾಟಿಯಲ್ಲಿ ಲಘು ವಾಹನ ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ.
ಟ್ರಾವೆಲ್ಲರ್, ಆಂಬುಲೆನ್ಸ್, ಕಾರು, ಜೀಪು, ವ್ಯಾನ್ ಹಾಗೂ ಎರಡು ಚಕ್ರದ ವಾಹನ ದಿನದ 24 ಗಂಟೆ ಸಂಚರಿಸಲು ಅವಕಾಶ ನೀಡಲಾಗಿದೆ. ಕೆಎಸ್ಆರ್ಟಿಸಿ ಬಸ್, ಆರು ಚಕ್ರದ ಲಾರಿ ಬೆಳಗ್ಗೆ 6 ರಿಂದ ಸಂಜೆ 7ರವರೆಗೆ ಸಂಚರಿಸಲು ಅವಕಾಶ ನೀಡಲಾಗಿದೆ. ಆದರೆ ಭಾರೀ ವಾಹನ ಸಂಚಾರಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ.
ನಿಷೇಧವಿದ್ದೂ ಭಾರೀ ವಾಹನಗಳು ಸಂಚಾರ:
ಚಾರ್ಮಾಡಿ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಸಂಪೂರ್ಣ ನಿಷೇಧವಿದ್ದರೂ ಬೆಳ್ತಂಗಡಿ ಭಾಗದಿಂದ ಚಿಕ್ಕಮಗಳೂರು ಜಿಲ್ಲೆಗೆ ಪ್ರವೇಶಿಸುವ ಬರುವ ಭಾರೀ ವಾಹನಗಳನ್ನು ಚಾರ್ಮಾಡಿಯ ತನಿಖಾ ಠಾಣೆಯಲ್ಲಿ ತಡೆಯದೆ ಬಿಟ್ಟು ಕಳುಹಿಸುತ್ತಿರುವುದು ಕಂಡುಬಂದಿದೆ.
ಇಂದು 14 ಚಕ್ರದ ಲಾರಿಯೊಂದನ್ನು ಕೊಟ್ಟಿಗೆಹಾರದ ಚೆಕ್ಪೋಸ್ಟಿನಲ್ಲಿ ಬಣಕಲ್ ಪಿಎಸ್ಐ ಗಾಯತ್ರಿ ಮತ್ತು ಸಿಬ್ಬಂದಿಗಳು ತಡೆಹಿಡಿದಿದ್ದಾರೆ. ಅತ್ತ ಚಾರ್ಮಾಡಿ ತನಿಖಾ ಠಾಣೆಯಲ್ಲಿ ಸಿಬ್ಬಂದಿಗಳು ಲಾರಿ ಚಾಲಕರಿಂದ ಹಣ ಪಡೆದು ವಾಹನಗಳು ಸಂಚರಿಸಲು ಅವಕಾಶ ನೀಡುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.
