
ಬೆಂಗಳೂರು: ಚಿಕ್ಕಮಗಳೂರಿನ ಮೂಡಿಗೆರೆಗೆ ನೆರೆ ಪರಿಹಾರವಿಲ್ಲ ಎಂದು ಬಿಜೆಪಿ ಶಾಸಕ ತಮ್ಮದೇ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದರೆ, ಅದೇ ಜಿಲ್ಲೆಯ ಸಿಟಿ ರವಿ ‘ಚೆಂಡು ಹೂವಿನ ಗಿಡ’ ಸೇವಿಸಿ ಬಾಯಿಗೆ ಬಂದಂತೆ ಮಾತಾಡುತ್ತಾ ತಿರುಗುತ್ತಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
ಗುರುವಾರ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್ನಾಯಕರುಗಳೆಲ್ಲ ಸಿಟಿ ರವಿಯವರ ಹುಕ್ಕಾಬಾರ್ ಹೇಳಿಕೆಗೆ ತಿರುಗೇಟು ನೀಡಿದ ಬೆನ್ನಲ್ಲೇ ಕಾಂಗ್ರೆಸ್ ರಾಜ್ಯ ಘಟಕ ಟ್ವೀಟ್ ಮಾಡಿದೆ.
ತನ್ನ ಜಿಲ್ಲೆಗೆ ನ್ಯಾಯ ಒದಗಿಸುವ ಕೆಲಸ ಮಾಡುವುದು ಸಿಟಿ ರವಿ ಆದ್ಯತೆ ಅಲ್ಲವೇ ಅಲ್ಲ ಎಂದು ಜನವಿರೋಧಿ ಬಿಜೆಪಿ ಎಂಬ ಹ್ಯಾಷ್ಟ್ಯಾಗ್ ಅಡಿಯಲ್ಲಿ ವ್ಯಂಗ್ಯವಾಡಿದೆ.
ಇದೇ ವೇಳೆ, ಬಿಜೆಪಿ ಸರ್ಕಾರದ ವಿರುದ್ಧವೂ ಕಾಂಗ್ರೆಸ್ ಟೀಕಿಸಿದೆ. ಕೊರೋನಾ 3ನೇ ಅಲೆಯ ಆತಂಕ ಕಾಡುತ್ತಿರುವಾಗ ಸಮರೋಪಾದಿಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕಾದ ಸರ್ಕಾರ ಇನ್ನೂ ಟೇಕಾಫ್ ಆಗಲೇ ಇಲ್ಲ, ಸಚಿವರು ತಮ್ಮ ಕೆಲಸ ಶುರು ಮಾಡಲಿಲ್ಲ.
ಸಿಎಂ ಬೊಮ್ಮಾಯಿ ಅವರು ಆಂತರಿಕ ಕಿತ್ತಾಟಗಳ ಸಂಧಾನ ಸಭೆಗಳಲ್ಲಿಯೇ ತಮ್ಮ ಅಧಿಕಾರವಧಿಯನ್ನ ಕಳೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ನಲ್ಲಿ ಹೇಳಿದೆ.
ಬಿಜೆಪಿ ಕೊರೊನಾಗಿಂತಲೂ ಭೀಕರ ಸೋಂಕು ಎಂದೂ ಕಾಂಗ್ರೆಸ್ ಟೀಕಿಸಿದೆ.



