Latestಮೆಟ್ರೋರಾಜಕೀಯರಾಜ್ಯಸುದ್ದಿ

ರೈತರ ಬೆಳೆ ಸಮೀಕ್ಷೆ ಮಾಡಿ ತಕ್ಷಣ ಪರಿಹಾರ ನೀಡಿ: ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಪತ್ರ

ಬೆಂಗಳೂರು: ರಾಜ್ಯದಲ್ಲಿ ನಿರಂತರವಾಗಿ ಸುರಿದ ಮಳೆ ಹಾನಿಯಿಂದ ಬೆಳೆ ನಷ್ಟಕ್ಕೆ ಸರ್ಕಾರ ಸಮೀಕ್ಷೆ ನಡೆಸಿ ಪರಿಹಾರ ನೀಡದೇ ಅಮಾನವೀಯ ನಡವಳಿಕೆ ಪ್ರದರ್ಶಿಸುತ್ತಿದೆ. ಮಳೆಹಾನಿ ಸಂಬಂಧ ತೊಂದರೆಗೆ ಒಳಗಾಗಿರುವ ರೈತರ ಬೆಳೆಗಳ ಬಗ್ಗೆ ತಕ್ಷಣ ಸಮೀಕ್ಷೆ ನಡೆಸಿ, ಪರಿಹಾರ ನೀಡಬೇಕು ಎಂದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, ‘ಕೃಷಿ ಇಲಾಖೆಯ ಮಾಹಿತಿ ಅನ್ವಯ ವ್ಯಾಪಕ ಮಳೆಯಿಂದಾಗಿ ಅಕ್ಟೋಬರ್ ಅಂತ್ಯದ ವೇಳೆಗೆ 11.22 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆದ ಬೆಳೆ ನಷ್ಟವಾಗಿದೆ. ಆದರೆ, ಸರ್ಕಾರ ಕೈ ಕಟ್ಟಿ ಕುಳಿತಿದೆ. ನಷ್ಟವಾಗಿರುವ ಬೆಳೆಗಳನ್ನು ಸಮರ್ಪಕವಾಗಿ ಸಮೀಕ್ಷೆ ಮಾಡುವುದಾಗಲಿ, ಪರಿಹಾರ ನೀಡುವುದನ್ನಾಗಲಿ ಮಾಡುತ್ತಿಲ್ಲ’ ಎಂದು ದೂರಿದ್ದಾರೆ.

ಮಳೆಯಿಂದಾಗಿ ಕೊಯಿಲಿಗೆ ಬಂದ ಬೆಳೆಗಳು ಹೊಲ ಗದ್ದೆಗಳಲ್ಲೆ ಕೊಳೆತು ಹೋಗುವಂತಾಗಿದೆ. ವಾಡಿಕೆಯಂತೆ ರಾಜ್ಯದಲ್ಲಿ 69.79 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುತ್ತದೆ. ಕಳೆದ ವರ್ಷ ಮುಂಗಾರಿನಲ್ಲಿ ವಾಡಿಕೆಗಿಂತ ಸುಮಾರು 8 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಅಂದರೆ, 77.65 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಕಳೆದ ಬಾರಿಗಿಂತ ಈ ಬಾರಿ 1.07 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹೆಚ್ಚಾಗಿ ಬಿತ್ತನೆಯಾಗಿದೆ. ರಾಗಿ, ಭತ್ತ, ಮುಸುಕಿನ ಜೋಳ, ತೊಗರಿ, ಹತ್ತಿ, ಮೆಣಸಿನ ಕಾಯಿ, ಶೇಂಗಾ, ಹೆಸರು, ಉದ್ದು ಮುಂತಾದವುಗಳ ಕೊಯಿಲಿನ ಕೆಲಸ ನಡೆಯುತ್ತಿದೆ. ಆದರೆ ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾದ ಮಳೆ ಇನ್ನೂ ನಿಂತಿಲ್ಲ ಎಂದು ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಸಕಾಲಕ್ಕೆ ರಸಗೊಬ್ಬರ ಸಿಗಲಿಲ್ಲ:

ಆರಂಭದಲ್ಲಿ ಬಿತ್ತನೆ ಮಾಡುವಾಗ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಮಳೆ ಕೈಕೊಟ್ಟ ಕಾರಣ ದಕ್ಷಿಣ ಒಳನಾಡು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಬಿತ್ತನೆ ಬೀಜಗಳು ಸರಿಯಾಗಿ ಹುಟ್ಟಲಿಲ್ಲ. ಆನಂತರ ಸರಿಯಾದ ಸಮಯಕ್ಕೆ ರಸಗೊಬ್ಬರ ಸಿಗಲಿಲ್ಲ. ಇಷ್ಟರ ನಡುವೆಯೂ ರೈತರು ಕಷ್ಟ ಪಟ್ಟು ಬೆಳೆಗಳನ್ನು ಬೆಳೆದಿದ್ದಾರೆ. ಆದರೆ ವ್ಯಾಪಕವಾಗಿ ಸುರಿಯುತ್ತಿರುವ ಮಳೆ ಕಾರಣದಿಂದ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ ಎಂದೂ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನಷ್ಟದಲ್ಲಿ ವಾಣಿಜ್ಯ ಬೆಳೆ:

ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ ಅಡಿಕೆ, ಕಾಫಿ, ಮೆಣಸು ಮುಂತಾದ ವಾಣಿಜ್ಯ ಬೆಳೆಗಳು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿವೆ. ಕೊಳೆ ರೋಗದ ಜೊತೆಗೆ ಅಡಿಕೆಗೆ ಹಳದಿ ಎಲೆ ರೋಗ ಬಂದಿದೆ. ಮೆಣಸಿನ ಬಳ್ಳಿಗಳು ಕೊಳೆತು ಹೋಗುತ್ತಿವೆ. ಕಾಫಿಯೂ ಕೊಳೆ ರೋಗದ ಸಮಸ್ಯೆ ಎದುರಿಸುತ್ತಿದೆ. ಆದರೆ, ಕೃಷಿ ಇಲಾಖೆಯ ಮಾಹಿತಿಗಳಲ್ಲಿ ಕಳೆದ ಒಂದೂವರೆ ತಿಂಗಳಿಂದ ಅತಿ ಹೆಚ್ಚು ಮಳೆ ಬಿದ್ದು ಹಾನಿಯಾಗಿರುವ ಜಿಲ್ಲೆಗಳ ಮಾಹಿತಿ ಇಲ್ಲ ಎಂದಿದ್ದಾರೆ.

ಮಲೆನಾಡು, ಕರಾವಳಿ ಜಿಲ್ಲೆಗಳ ಅಡಿಕೆ, ಮೆಣಸು, ಕಾಫಿಗೆ ಆಗಿರುವ ನಷ್ಟದ ಮಾಹಿತಿಯೂ ಇಲ್ಲ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಮೈಸೂರು, ಮಂಡ್ಯ, ಚಾಮರಾಜನಗರ ಮುಂತಾದ ಜಿಲ್ಲೆಗಳಲ್ಲಿ ಬೆಳೆದ ರಾಗಿ, ಭತ್ತ, ಮುಸುಕಿನ ಜೋಳದ ಬೆಳೆಗಳಿಗೆ ಆಗಿರುವ ನಷ್ಟದ ಕುರಿತು ಸಮೀಕ್ಷೆಯೆ ನಡೆಸಿಲ್ಲ ಎಂದೂ ಸಿದ್ದರಾಮಯ್ಯ ಪತ್ರದಲ್ಲಿ ದೂರಿದ್ದಾರೆ.

ಹಲವೆಡೆ ಬರ:

ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಜಿಲ್ಲೆಗಳ ಬೆಳೆಗಳಲ್ಲಿ ಜುಲೈ ತಿಂಗಳಿಂದ ಸುರಿಯುತ್ತಿರುವ ಮಳೆಯಿಂದ ರೈತರು ಭಾರಿ ಸಮಸ್ಯೆ ಎದುರಿಸುತ್ತಿದ್ದಾರೆ. ಅನೇಕ ಕಡೆ ಬರದ ಸಮಸ್ಯೆಯೂ ಇದೆ ಎಂದು ತಿಳಿಸಿದ್ದಾರೆ.

ಅಮಾನವೀಯ ನಡೆ:

ಕೇಂದ್ರ ಸರ್ಕಾರವೂ ಕೂಡ ಸಮರ್ಪಕ ಪರಿಹಾರ ನೀಡುತ್ತಿಲ್ಲ. 2019-20, 2020-21ರ ವರ್ಷಗಳಲ್ಲಿ ಸುಮಾರು ರೂ 1.5 ಲಕ್ಷದಿಂದ ರೂ 2 ಲಕ್ಷ ಕೋಟಿ ನಷ್ಟವಾಗಿತ್ತು. ಕೇಂದ್ರ 2019-20ರಲ್ಲಿ ರೂ 1,652.85, 2020-21ರಲ್ಲಿ ರೂ 1,328.30 ಕೋಟಿ ಮಾತ್ರ ಬಿಡುಗಡೆ ಮಾಡಿದೆ. ಅಂದರೆ, ಕೇವಲ ರೂ 2981.15 ಕೋಟಿ ಬಿಡುಗಡೆ ಮಾಡಿದೆ. 2021-22ರ ನಷ್ಟಕ್ಕೆ ನಯಾ ಪೈಸೆ ನೀಡಿಲ್ಲ. ಕೇಂದ್ರ ಮತ್ತು ರಾಜ್ಯಗಳೆರಡೂ ಈ ರೀತಿ ನಿರ್ಲಕ್ಷ್ಯ ತೋರಿಸುವುದು ಅತ್ಯಂತ ಅಮಾನವೀಯ ನಡವಳಿಕೆ’ ಎಂದೂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button