ಹೊಸ ಪುಸ್ತಕದಲ್ಲಿ ಹಿಂದೂತ್ವದ ಬಗ್ಗೆ ಟೀಕೆ; ಕಾಂಗ್ರೆಸ್ನ ಸಲ್ಮಾನ್ ಖುರ್ಷಿದ್ ವಿರುದ್ಧ ಬಿಜೆಪಿ ಆಕ್ರೋಶ

ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅಯೋಧ್ಯೆ ಕುರಿತ ತಮ್ಮ ಹೊಸ ಪುಸ್ತಕದ ಕಾರಣದಿಂದಾಗಿ ವಿವಾದಕ್ಕೆ ಸಿಲುಕಿದ್ದಾರೆ.
ಹಿಂದುತ್ವವನ್ನು ಮೂಲಭೂತ ಇಸ್ಲಾಮಿಕ್ ಭಯೋತ್ಪಾದಕ ಗುಂಪುಗಳೊಂದಿಗೆ ಹೋಲಿಸಿದ್ದಾರೆ ಎಂದು ಆರೋಪಿಸಿರುವ ದೆಹಲಿ ಮೂಲದ ಇಬ್ಬರು ವಕೀಲರು ಸಲ್ಮಾನ್ ಖುರ್ಷಿದ್ ವಿರುದ್ಧ ದೂರು ದಾಖಲಿಸಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಐದು ರಾಜ್ಯಗಳ ಚುನಾವಣೆಗೆ ಮುನ್ನ ಬಿಜೆಪಿ ಕೂಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಮುಸ್ಲಿಂ ಮತಗಳನ್ನು ಪಡೆಯಲು ಕೋಮು ರಾಜಕೀಯ ನಡೆಸುತ್ತಿದೆ ಎಂದು ಆರೋಪಿಸಿದೆ.
ಸಲ್ಮಾನ್ ಖುರ್ಷಿದ್ ಅವರನ್ನು ಕಾಂಗ್ರೆಸ್‌ನಿಂದ ವಜಾಗೊಳಿಸಬೇಕು ಮತ್ತು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಹಿಂದೂಗಳ ಬಗ್ಗೆ ಗೌರವ ಹೊಂದಿದ್ದಲ್ಲಿ ಸಲ್ಮಾನ್ ಹೇಳಿಕೆಗೆ ಸಂಬಂಧಿಸಿ ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ಪುಸ್ತಕದಲ್ಲಿನ ‘ಅಯೋಧ್ಯೆಯ ಮೇಲೆ ಬೆಳಕು: ನಮ್ಮ ಕಾಲದಲ್ಲಿ ರಾಷ್ಟ್ರೀಯತೆ” ಎಂಬ ಅಧ್ಯಾಯದಲ್ಲಿನ ಒಂದು ಭಾಗವು, ಸನಾತನ ಧರ್ಮ ಮತ್ತು ಋಷಿಗಳು ಮತ್ತು ಸಂತರಿಗೆ ತಿಳಿದಿರುವ ಶಾಸ್ತ್ರೀಯ ಹಿಂದೂ ಧರ್ಮವನ್ನು ಹಿಂದುತ್ವದ ನಿಜವಾದ ಆವೃತ್ತಿಯಿಂದ ಬದಿಗೆ ತಳ್ಳಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಐಸಿಸ್ ಮತ್ತು ಬೊಕೊ ಹರಾಮ್‌ನಂತಹ ಜಿಹಾದಿ ಇಸ್ಲಾಂ ಗುಂಪುಗಳನ್ನು ಹೋಲುವ ಆವೃತ್ತಿಯನ್ನು ಕಾಣುತ್ತಿದ್ದೇವೆ ಎಂದು ಅವರು ಬರೆದಿತುವುದಾಗಿ ಆರೋಪಿಸಲಾಗಿದೆ.
ಇದನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ಮುಸ್ಲಿಂ ಮತಗಳನ್ನು ಪಡೆಯಲು ಕೇಸರಿ ಭಯೋತ್ಪಾದನೆ ಎಂಬ ಪದವನ್ನು ಸೃಷ್ಟಿಸಿರುವ ಪಕ್ಷದಿಂದ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಟೀಕಿಸಿದ್ದಾರೆ.
