ಹೊಸ ಬಜೆಟ್ ನತ್ತ ಎಲ್ಲರ ಚಿತ್ತ; ಹಳೆಯ ಯೋಜನೆಗಳಿಗೆ ಹಿಡಿದಿದೆ ಗ್ರಹಣ!

ರಾಮನಗರ: ವಿಧಾನಸಭಾ ಚುನಾವಣೆ ಸನಿಹದಲ್ಲಿ ಇರುವಾಗ ಬಿಜೆಪಿ ಸರಕಾರ ಮಂಡಿಸಲಿರುವ ರಾಜ್ಯ ಬಜೆಟ್ ಲೆಕ್ಕಚಾರದ ಕುರಿತು ಸಾರ್ವಜನಿಕರು ಸಾಕಷ್ಟು ಕನಸು ಕಂಡಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿ ಘೋಷಣೆಯ ನಿರೀಕ್ಷೆಯಲ್ಲಿದ್ದಾರೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ಘೋಷಣೆಗೊಂಡಿರುವ ಯೋಜನೆಗಳಲ್ಲಿಯು ಕಾರ್ಯಗತಗೊಂಡಿರುವುದೇ ಬೆರಳೆಣಿಕೆಯಷ್ಟು, ಕಾಮಗಾರಿಗಳು ಇನ್ನು ನಡೆಯುತ್ತಿದ್ದು, ಲೋಕಾರ್ಪಣೆಗೊಂಡಿರುವ ಇತಿಹಾಸವೇ ಇಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಈ ಹಿಂದೆ ಮುಖ್ಯಮಂತ್ರಿಗಳು ಮಂಡಿಸಿದ್ದ ಅನೇಕ ಯೋಜನೆಗಳು ಈವರೆಗೂ ಅನುಷ್ಠಾನಗೊಂಡಿಲ್ಲ. ಹಳೆ ಯೋಜನೆಗಳಿಗೆ ಅನುದಾನದೊಂದಿಗೆ ಹೊಸ ಬಜೆಟ್ ಸುತ್ತ ಸಾರ್ವಜನಿಕರ ನಿರೀಕ್ಷೆಗಳು ಬೆಟ್ಟದಷ್ಟಿವೆ. . 2021-22ರ ಅಯವ್ಯಯದಲ್ಲಿ ಮುಖ್ಯಮಂತ್ರಿಗಳು ಜಿಲ್ಲೆಗೆ ಏನೇನು ಕೊಡುಗೆ ನೀಡಲಿದ್ದಾರೆ ಎಂಬ ಬಗ್ಗೆ ಜನರಲ್ಲಿ ಕುತೂಹಲದ ಚರ್ಚೆಗಳು ನಡೆಯುತ್ತಿದೆ.
ರಾಮನಗರ ಮತ್ತು ಚನ್ನಪಟ್ಟಣವನ್ನು ಅವಳಿ ನಗರಗಳಂತೆ ಅಭಿವೃದ್ಧಿ ಪಡಿಸುವುದು, ಜಿಲ್ಲೆಯಲ್ಲಿ ಮೆಗಾ ಮಾರುಕಟ್ಟೆ ಮತ್ತು ಮಾರುಕಟ್ಟೆ ಟರ್ಮಿನಲ್ ನಿರ್ಮಿಸುವ ಮೂಲಕ ಬಡ ರೈತರು ಬೆಳೆಯುವ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಬೇಕು. ತೋಟಗಾರಿಕೆ ಇಲಾಖೆ ಈಗಾಗಲೇ ಸಲ್ಲಿಸಿರುವ ಪ್ರಸ್ತಾವನೆಯಂತೆ ಜಿಲ್ಲೆಯಲ್ಲಿ ನೀರಾ ಸಂಸ್ಕರಣಾ ಘಟಕ ಸ್ಥಾಪಿಸಬೇಕು. ರೇಷ್ಮೆ ನಗರಿಗೇ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ಚೀನಾ ತಂತ್ರಜ್ಞಾನವನ್ನು ಜಿಲ್ಲೆಯ ಪಿಲೇಚರಿ ಘಟಕಗಳಿಗೂ ಅಳವಡಿಸಬೇಕು. ರೀಲರ್ ಪಾರ್ಕ್ ನಿರ್ಮಾಣಕ್ಕೆ ಕೂಡಲೇ ಚಾಲನೆ ನೀಡಬೇಕು. ಎಂಬುದು ರೇಷ್ಮೆ ಬೆಳೆಗಾರರ ಆಗ್ರಹವಾಗಿದೆ.
ರಾಮನಗರ ಸೇರಿದಂತೆ ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಕಲ್ಪಿಸುವ ಮೇಕೆದಾಟು ಯೋಜನೆ ಅನುಷ್ಠಾನ, ಬಿಡದಿ ಸ್ಮಾರ್ಟ್ ಸಿಟಿಯಾಗಿ ಪರಿವರ್ತಿಸುವ ಹಾಗೂ ಬಿಡದಿಯವರೆಗೂ ಮೆಟ್ರೋ ರೈಲು ಸಂಚಾರ ವಿಸ್ತರಣೆ ಆಗುತ್ತದೆ ಎಂಬ ಭರವಸೆಗಳು ಮೂಡಿದೆ. ನಗರ ಮತ್ತು ಹಳ್ಳಿಗಳಲ್ಲಿ ಇಂದಿಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ. ಚನ್ನಪಟ್ಟಣ-ರಾಮನಗರ ಅವಳಿ ನಗರಗಳಿಗೆ ಕುಡಿಯುವ ನೀರಿನ ಪೂರೈಕೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು.
ಬೈರಮಂಗಲ ಕೆರೆ ನೀರು ಶುದ್ಧಿಕರಿಸುವ ಯೋಜನೆ ಕಾರ್ಯಗತಗೊಳಿಸುವುದು. ರಾಮನಗರದಲ್ಲಿ ಬೆಂಗಳೂರಿನಿಂದ ಮೈಸೂರು ಕಡೆಗೆ ತೆರಳುವ ಪ್ರಯಾಣಿಕರಿಗಾಗಿ ಬಸ್ ನಿಲ್ದಾಣ ಸ್ಥಾಪನೆ. ಮಾವು ಸಂಸ್ಕರಣ ಘಟಕ, ಎಳನೀರು ಸಂಸ್ಕರಣಾ ಮತ್ತು ಪ್ಯಾಕೆಜಿಂಗ್ ಘಟಕಕ್ಕೆ ಬೇಕಾದ ನೆರವು ನೀಡಬೇಕಿದೆ. ಶ್ರೀರಂಗ ಏತ ನೀರಾವರಿ ಯೋಜನೆಗೆ ಹೆಚ್ಚಿನ ಅನುದಾನ ಒದಗಿಸುವುದರೊಂದಿಗೆ ತ್ವರಿತವಾಗಿ ಯೋಜನೆ ಪೂರ್ಣಗೊಳಿಸುವುದು.
ನಾಡಪ್ರಭು ಕೆಂಪೇಗೌಡರ ಸಮಾಧಿ ಇರುವ ಮಾಗಡಿಯ ಕೆಂಪಾಪುರ ಗ್ರಾಮ ಅಭಿವೃದ್ಧಿಗೆ ನೀಡಿರುವ 50 ಕೋಟಿ ರೂ., ಅನುದಾನ ಸದ್ಭಳಕೆ ಮಾಡುವುದು. ಕೆಂಪಾಪುರವನ್ನು ಅಭಿವೃದ್ಧಿ ಪಡಿಸುವುದು. ತಿಪ್ಪಗೊಂಡನಹಳ್ಳಿ ಜಲಾಶಯದ ನೀರನ್ನು ರೈತರ ಕೃಷಿ ಚಟುವಟಿಕೆಗಳಿಗೆ ಏತ ನೀರಾವರಿ ಮೂಲಕ ನೀಡುವ ಯೋಜನೆ ಕಾರ್ಯಗತಗೊಳಿಸಬೇಕೆನ್ನುವ ಬೇಡಿಕೆಯೂ ವ್ಯಕ್ತವಾಗಿದೆ.
ರೇಷ್ಮೆ ಗೂಡು ಬ್ಯಾಂಕ್ ಸ್ಥಾಪನೆ, ರೈತರು ಮತ್ತು ರೀಲರ್ ಗಳ ಅನುಕೂಲಕ್ಕಾಗಿ ಬೆಲೆ ಸ್ಥಿರೀಕರಣ ನಿಗಯ ಪುನರ್ ಸ್ಥಾಪನೆ. ಕಚ್ಚಾ ರೇಷ್ಮೆ ಗುಣಮಟ್ಟ ಪ್ರಮಾಣೀಕರಿಸಲು ರೇಷ್ಮೆ ಪರೀಕ್ಷಾ ಕೇಂದ್ರದ ಸ್ಥಾಪನೆ ಈವರೆಗೂ ಈಡೇರಿಲ್ಲ. ಚನ್ನಪಟ್ಟಣದಲ್ಲಿರುವ ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮದ (ಕೆಎಸ್ ಐಸಿ) ಘಟಕದ ಪುನಶ್ಚೇತನಕ್ಕಾಗಿ 5 ಕೋಟಿ ರೂ.ಗಳನ್ನು ಒದಗಿಸಲಾಗಿತ್ತು. ಇದರಲ್ಲಿ ಒಂದು ಘಟಕ ಕಾರ್ಯಾರಂಭವಾಗಿದ್ದು, ಎರಡನೇ ಘಟಕ ಆರಂಭಕ್ಕೆ ಸಿದ್ದತೆಗಳು ಆರಂಭವಾಗಿದೆ. 5 ಕೋಟಿ ಪೈಕಿ ಎಷ್ಟು ಅನುದಾನ ಬಿಡುಗಡೆ ಆಗಿದೆ ಎಂಬುದು ಸ್ಥಳೀಯ ಅಕಾರಿಗಳ ಬಳಿ ಮಾಹಿತಿ ಇಲ್ಲ.
ಕೋವಿಡ್ ಸಮಯಕ್ಕೂ ಮುನ್ನ ರಾಜ್ಯ ಸರಕಾರ ಮಂಡಿಸಿದ್ದ ಬಜೆಟ್ ನಲ್ಲಿ ಎರಡು ಯೋಜನೆಗಳು ಮಾತ್ರ ಜಿಲ್ಲೆಗೆ ವರದಾನವಾಗುವಂತ್ತಿತು. ಆದರೆ, ಅದರಲ್ಲಿ ಒಂದು ಯೋಜನೆಯನ್ನು ವರ್ಗಾವಣೆ ಮಾಡಲಾಗಿದ್ದು, ಇನ್ನೊಂದು ಯೋಜನೆ ಪ್ರಾರಂಭಗೊಂಡಿಲ್ಲ.
ರಾಮದೇವರ ಬೆಟ್ಟದ ರಣಹದ್ದು ಧಾಮದಲ್ಲಿ, ರಣಹದ್ದು ಸಂತಾನೋತ್ಪತ್ತಿ ಕೇಂದ್ರವನ್ನು ಎರಡು ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದಿದ್ದರು. ಆದರೆ, ಈ ಯೋಜನೆ ಬದಲಾಗಿದ್ದು, ಬ್ರಿಡಿಂಗ್ ಸೆಂಟರ್ಗೆ ಪ್ರತಿಯಾಗಿ ಫೀಡಿಂಗ್ ಸೆಂಟರ್ ಆಗಿದೆ. ಆದರೆ, ಇನ್ನು ಚರ್ಚೆಯ ಹಂತದಲ್ಲಿಯೇ ಯೋಜನೆ ಸ್ಥಗಿತಗೊಂಡಿದೆ.
ದೇಶದಲ್ಲಿ ವಿದ್ಯುತ್ ವಾಹನ ಮತ್ತು ಇಂಧನ ಶೇಖರಣಾ ನೀತಿಯನ್ನು ಘೋಸಿದ ಮೊದಲ ರಾಜ್ಯ ಕರ್ನಾಟಕ. ಅದರಂತೆ ರಾಮನಗರ ತಾಲೂಕಿನ ಹಾರೋಹಳ್ಳಿ 5ನೇ ಹಂತದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕೈಗಾರಿಕಾ ಪ್ರದೇಶದಲ್ಲಿ ಎಲೆಕ್ಟ್ರಿಕ್ ವೆಹಿಕಲ್ಸ್ ಮತ್ತು ಎನರ್ಜಿ ಸ್ಟೋರೇಜ್ ಮ್ಯಾನಿಪ್ಯಾಕ್ಚರಿಂಗ್ ಕ್ಲಸ್ಟರ್ ಅನ್ನು ಸ್ಥಾಪಿಸುವ ಉದ್ದೇಶಕ್ಕಾಗಿ 10 ಕೋಟಿ ರೂ.ಗಳ ಅನುದಾನ ನೀಡಲಾಗಿದೆ. ಆದರೆ, ಅದಕ್ಕೂ ಚಾಲನೆ ಸಿಕ್ಕಿಲ್ಲ.



