
ಬೆಂಗಳೂರು: ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಲು ಸಕಾಲಕ್ಕೆ ಆಗಮಿಸದ ಕಾರಣ ಹಾನಗಲ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದಿರುವ ಶ್ರೀನಿವಾಸ ಮಾನೆ ಪ್ರಮಾಣವಚನ ಸ್ವೀಕರಿಸದೇ ಹಿಂತಿರುಗಿದ ಘಟನೆ ಗುರುವಾರ ವಿಧಾನಸೌಧದಲ್ಲಿ ನಡೆದಿದೆ.
ಗುರುವಾರ ಬೆಳಗ್ಗೆ ಸಿಂಧಗಿ ಮತ್ತು ಹಾನಗಲ್ ಕ್ಷೇತ್ರಗಳ ಉಪಚುನಾವಣೆಯಲ್ಲಿ ವಿಜಯಿಯಾದ ಶಾಸಕರಿಗೆ ಪ್ರಮಾಣ ವಚನ ಬೋಧನೆ ಕಾರ್ಯಕ್ರಮವನ್ನು ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ಬೆಳಗ್ಗೆ 11 ಗಂಟೆಗೆ ವಿಧಾನಸಭೆ ಸ್ಪೀಕರ್ ಕಚೇರಿಯಿಂದ ಆಯೋಜಿಸಲಾಗಿತ್ತು.
ಸಿಂಧಗಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ರಮೇಶ್ ಭೂಸನೂರ ಕಾರ್ಯಕ್ರಮಕ್ಕೆ ಸಕಾಲಕ್ಕೆ ಹಾಜರಾಗಿ ದೇವರ ಹೆಸರಿನಲ್ಲಿ ಸ್ಪೀಕರ್ ವಿಶ್ವೇಶ್ವರ ಕಾಗೇರಿ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು. ಆದರೆ, ಹಾನಗಲ್ ಕ್ಷೇತ್ರದಿಂದ ಆಯ್ಕೆಯಾಗಿರುವ ಶ್ರೀನಿವಾಸ ಮಾನೆಯವರು ಸಕಾಲಕ್ಕೆ ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಸಲೀಮ್ ಅಹಮದ್ ಮತ್ತಿತರರ ಜತೆ ಸ್ಪೀಕರ್ ಕಚೇರಿಗೆ ತೆರಳಿ ಪ್ರಮಾಣ ವಚನ ಸ್ವೀಕಾರಕ್ಕೆ ಮುಂದಾದರು.
ಆದರೆ, ಈ ವೇಳೆ ಸ್ಪೀಕರ್ ಅವರು ಕಚೇರಿಯಲ್ಲಿ ಇರಲಿಲ್ಲ. ಸಭಾಪತಿ ಬಸವರಾಜ ಹೊರಟ್ಟಿ ಅವರ ಕಚೇರಿಗೆ ತೆರಳಿದ್ದಾರೆ ಎಂಬ ಮಾಹಿತಿ ನೀಡಲಾಯಿತು. ಮಧ್ಯಾಹ್ನ 12 ರ ವೇಳೆಗೆ ಅವರು ಕಚೇರಿಗೆ ಬರಬಹುದು ಎಂದು ವಿಧಾನಸೌಧ ಕಾರಿಡಾರ್ ನಲ್ಲೇ ಸ್ಪೀಕರ್ ಅವರನ್ನು ಕಾಯುವ ಸರದಿ ಕಾಂಗ್ರೆಸ್ ಮುಖಂಡರದ್ದಾಗಿತ್ತು.
ಸ್ಪೀಕರ್ ಬಾರದೇ ತಡವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಚೇತಕರ ಕೊಠಡಿಗೆ ತೆರಳಿ ಶಾಸಕ ಶ್ರೀನಿವಾಸ ಮಾನೆ ಮತ್ತು ಪಕ್ಷದ ಮುಖಂಡರು ಸ್ಪೀಕರ್ ಬರುವಿಕೆಗಾಗಿ ಕಾದು ಕುಳಿತರು. ಕೊನೆಗೆ ತಡವಾಗಿ ಬಂಧ ಶ್ರೀನಿವಾಸ ಮಾನೆ ಅವರಿಗೆ ಪ್ರಮಾಣ ವಚನ ಬೋಧಿಸಲು ಸ್ಪೀಕರ್ ನಿರಾಕರಿಸಿದರು. ಪ್ರಮಾಣ ವಚನಕ್ಕೆ ಇನ್ನೊಂದು ದಿನ ನಿಗದಿ ಮಾಡುವುದಾಗಿ ತಿಳಿಸಿದ್ದಾರೆ ಎಂದು ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಂದ ಮಾಹಿತಿ ರವಾನೆಯಾಯಿತು. ಹೀಗಾಗಿ ಮಾನೆ ಅವರು ನಿರಾಶೆಗೀಡಾಡುವಂತಾಯಿತು.
ಇದರಿಂದ ಅಸಮಾಧಾನಗೊಂಡ ಡಿ.ಕೆ.ಶಿವಕುಮಾರ್, ಶ್ರೀನಿವಾಸ ಮಾನೆ ಮತ್ತು ಕಾಂಗ್ರೆಸ್ ಮುಖಂಡರು, ಟ್ರಾಫಿಕ್ ಕಾರಣದಿಂದ ನಮ್ಮಿಂದ ವಿಳಂಬ ಆಗಿದ್ದು ನಿಜ, ಗೌರವ ಕೊಟ್ಟು ಪ್ರಮಾಣ ವಚನ ಸ್ವೀಕಾರಕ್ಕೆ ಸ್ಪೀಕರ್ ಚೇಂಬರ್ ಗೆ ತೆರಳಿದೆವು. ಸ್ಪೀಕರ್ ಅವರು ಅಷ್ಟು ಅರ್ಜೆಂಟ್ ಮಾಡಬಾರದಿತ್ತು. ಬೇರೋಂದು ಅಪಾಯಿಟ್ಮೆಂಟ್ ಕಾರಣಕೊಟ್ಟು ಸ್ಪೀಕರ್ ಪ್ರಮಾಣ ವಚನ ಬೋಧಿಸಲಿಲ್ಲ. ಅಧಿವೇಶನ ನಡೆಯುವಾಗಲೇ ಯಾವು ಯಾವುದಕ್ಕೋ ಸಮಯ ಬಳಸಿಕೊಂಡು ಬದಲು ಮಾಡಿದ್ದೇವೆ ಎಂದು ಹೇಳಿ ಬೇಸರಿದಿಂದಲೇ ಸ್ಥಳದಿಂದ ನಿರ್ಗಮಿಸಿದರು.



