ಕೊಡವ ವಿವಾಹಗಳಲ್ಲಿ ಕೇಕ್ ಕತ್ತರಿಸುವುದು, ಶಾಂಪೇನ್ ಹಾರಿಸುವುದು ನಿಷೇಧ

ಕೊಡಗು : ಕೊಡಗನ್ನು ದಕ್ಷಿಣದ ಕಾಶ್ಮೀರ, ಪ್ರವಾಸಿಗರ ಪಾಲಿನ ಸ್ವರ್ಗ, ಭಾರತದ ಸ್ಕಾಟ್ಲ್ಯಾಂಡ್ ಎಂದೇಲ್ಲಾ ವಿಶ್ಲೇಷಿಸುತ್ತಾರೆ. ಹಾಗೇಯೇ, ಕೊಡಗಿನಲ್ಲಿ ಕೊಡವರ ಆಚಾರ ವಿಚಾರಗಳು ಕೂಡ ಅತೀ ವಿಶಿಷ್ಟವಾಗಿದೆ. ಕೊಡಗಿನಲ್ಲಿ ಇತ್ತೀಚೆಗೆ ನಡೆದ ಕೊಡವರ ವಿವಾಹ ಸಮಾರಂಭಗಳಲ್ಲಿ ಕೆಲವರು ಕೇಕ್ ಕತ್ತರಿಸುವುದು, ಶಾಂಪೆನ್ ಹಾರಿಸೋದನ್ನು ರೂಢಿಸಿಕೊಳ್ಳುತ್ತಿದ್ದಾರೆ. ಇದು ಕೊಡವ ಸಂಸ್ಕೃತಿಗೆ ಧಕ್ಕೆ ತರುವ ಆತಂಕ ಎದುರಾಗಿದೆ. ಹೀಗಾಗಿಯೇ ಕೊಡಗಿನ ಪೊನ್ನಂಪೇಟೆ ಕೊಡವ ಸಮಾಜ ಮತ್ತು ವಿರಾಜಪೇಟೆ ಕೊಡವ ಸಮಾಜಗಳು ವಿವಾಹ ಸಮಾರಂಭದಲ್ಲಿ ಕೇಕ್ ಕತ್ತರಿಸುವುದು ಮತ್ತು ಶಾಂಪೆನ್ ಹಾರಿಸೋದನ್ನು ನಿಷೇಧಿಸಿವೆ.
ಈ ಹೊಸ ಆಚರಣೆಯ ಕುರಿತು ಇತ್ತೀಚೆಗೆ ಸಭೆ ನಡೆಸಿರುವ ಕೊಡವ ಸಮಾಜಗಳು ಇಂತಹದ್ದೊಂದು ನಿರ್ಧಾರ ತೆಗೆದುಕೊಂಡಿರುವುದು ಒಂದು ರೀತಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹಲವರು ಕೊಡವ ಸಮಾಜದ ನಿರ್ದಾರವನ್ನು ಬೆಂಬಲಿಸಿದ್ದಾರೆ. ಇನ್ನು ಮುಂದೆ ಒಂದು ವೇಳೆ ವಿವಾಹದಲ್ಲಿ ಕೇಕ್ ಕತ್ತರಿಸುವುದು ಮತ್ತು ಶಾಂಪೆನ್ ಹಾರಿಸೋದನ್ನು ಮಾಡಿದ್ರೆ ಅಂತಹ ಮದುವೆಗಳಿಗೆ ಬ್ರೇಕ್ ಹಾಕಲಾಗುತ್ತದೆ ಎನ್ನೋ ಎಚ್ಚರಿಕೆಯನ್ನು ಎರಡು ಕೊಡವ ಸಮಾಜಗಳು ನೀಡಿವೆ.
ಕೊಡವರು ಪ್ರಕೃತಿ ಆರಾಧಕರು. ಅವರ ಸಂಸ್ಕೃತಿಯೇ ವಿಶಿಷ್ಟ. ಕೊಡವರ ವಿವಾಹಕ್ಕೆ ನಿಶ್ಚಿತಾರ್ಥ ಆಯಿತ್ತೆಂದರೆ ಬಳಿಕ ಯುವಕ ಗಡ್ಡ ಬೋಳಿಸುವಂತಿಲ್ಲ. ಮದುವೆ ದಿನ ಗಡ್ಡ ತೆಗೆದು ವಿವಾಹಕ್ಕೆ ಸಿದ್ಧವಾಗಬೇಕು. ಮದುವೆಯ ದಿನ ಗಡ್ಡವನ್ನು ಬಿಡುವಂತಿಲ್ಲ. ಅಷ್ಟೇ ಏಕೆ ವಧು ವರರಿಗೆ ಆಶಿರ್ವದಿಸಲು ಬರುವ ಮಹಿಳೆಯರು ಬಿಚ್ಚು ತಲೆಯಲ್ಲಿ ಆಶಿರ್ವದಿಸುವಂತಿಲ್ಲ. ಬಿಚ್ಚು ತಲೆಯಲ್ಲಿ ಇರೋದು ಅಶುಭದ ಸಂಕೇತ.
ಆಧುನಿಕ ಜೀವನ ಶೈಲಿಗೆ ಮಾರುಹೋಗಿರುವ ಕೆಲ ಯುವಕರು ಉದ್ದದ ಗಡ್ಡವನ್ನು ಬಿಟ್ಟುಕೊಂಡೇ ವಿವಾಹವಾಗುತ್ತಿದ್ದಾರೆ. ಇನ್ನು ಮಹಿಳೆಯರು ಕೂಡ ಬಿಚ್ಚು ತಲೆಯಲ್ಲಿ ವಧು ವರರಿಗೆ ಆಶಿರ್ವದಿಸುತ್ತಿದ್ದಾರೆ, ಇದು ಅಶುಭ ಎಂದು ಕೊಡವರು ಭಾವಿಸುತ್ತಾರೆ.
ಕೇಕ್ ಕತ್ತರಿಸೋದು ಶಾಂಪೇನ್ ಹಾರಿಸೋದು ಬ್ರಿಟೀಷರ ಅಥವಾ ಕ್ರೈಸ್ತರ ಸಂಸ್ಕೃತಿ. ಅವರ ಸಂಸ್ಕೃತಿಯನ್ನು ಮತ್ತೆ ನಾವು ಅಳವಡಿಕೊಳ್ಳುತ್ತಾ ಬಂದರೆ ನಮ್ಮ ಸಂಸ್ಕೃತಿ ಮೂಲೆ ಗುಂಪಾಗುತ್ತದೆ. ಹೀಗಾಗಿ ಶೇಷ್ಠವಾದ ನಮ್ಮ ಸಂಸ್ಕೃತಿಯನ್ನೇ ಉಳಿಸಿ ಬೆಳೆಸಬೇಕಾದ ನಾವು ಬೇರೆಯವರ ಸಂಸ್ಕೃತಿಯನ್ನು ಆಚರಿಸಿ ನಮ್ಮ ಸಂಸ್ಕೃತಿಗೆ ಧಕ್ಕೆ ತರಬಾರದು ಎನ್ನೋದು ಹಲವರ ಅಭಿಪ್ರಾಯ.
ಹೀಗಾಗಿ ಪೊನ್ನಂಪೇಟೆ ಅಥವಾ ವಿರಾಜಪೇಟೆ ಕೊಡವ ಸಮಾಜಗಳು ಅಷ್ಟೇ ಅಲ್ಲ, ಉಳಿದ ಎಲ್ಲಾ ಕೊಡವ ಸಮಾಜಗಳು ವಿವಾಹ ಸಮಾರಂಭದಲ್ಲಿ ಕೇಕ್ ಕತ್ತರಿಸುವುದು ಮತ್ತು ಶಾಂಪೇನ್ ಹಾರಿಸೋದನ್ನು ಕೊಡವ ಸಮಾಜಗಳ ಒಕ್ಕೂಟ ನಿಷೇಧಿಸಿದೆ




