ಕಾಂಗ್ರೆಸ್ ನವರು ಹಾವಿನ ಬುಟ್ಟಿ ಇಟ್ಕೊಂಡು ಹಾವು ಬಿಡ್ತೀನಿ ಅಂತಾರೆ: ಸಚಿವ ಸೋಮಶೇಖರ್

ಮೈಸೂರು : ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್ನವರು ಸುಮ್ನೆ ಹಾವಿನ ಬುಟ್ಟಿ ಇಟ್ಟುಕೊಂಡು ಹಾವು ಬಿಡ್ತೀನಿ, ಹಾವು ಬಿಡ್ತೀನಿ ಅಂತಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಸಚಿವರು, ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಹೇಳಿಕೆಗೆ ಈ ರೀತಿ ಪ್ರತಿಕ್ರಿಯಿಸಿದ ಸಚಿವರು, ಸುಮ್ನೆ ಹಾವಿನ ಬುಟ್ಟಿ ಇಟ್ಟುಕೊಂಡು ಹಾವು ಬಿಡ್ತೀನಿ ಅಂತಾರೆ. ಹಾವಿನ ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು, ಬುಸ್ ಅನ್ನುತ್ತಾ ಅಥವಾ ಟುಸ್ ಅನ್ನುತ್ತಾ ಎಂದರು.
ಶಾಸಕ ರಮೇಶ್ ಜಾರಕಿಹೊಳಿ ಸಹ ಕಾಂಗ್ರೆಸ್ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಅಂತ ಹೇಳಿದ್ದಾರೆ. ಇದು ಎಲ್ಲರಿಗೂ ಒಂದು ತರಹದ ಹ್ಯಾಬಿಟ್ ಆಗಿದೆ. ಇದಕ್ಕೆ ನಾವು ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ತಮ್ಮದೇ ಪಕ್ಷದ ಶಾಸಕ ರಮೇಶ್ ಜಾರಕಿಹೊಳಿಗೂ ಸೋಮಶೇಖರ್ ಟಾಂಗ್ ಕೊಟ್ಟರು. ಕಾಂಗ್ರೆಸ್ನವರಿಗೆ ಮಾಡಲು ಬೇರೆ ಕೆಲಸವಿಲ್ಲ. ಬೆಳಗ್ಗೆ ಎದ್ದರೆ ಕೆಸರೆರಚಾಡೋದು ಅವರ ಕೆಲಸವಾಗಿದೆ ಎಂದು ಹೇಳಿದರು.
ನಮಗೆ ಮಾಡಲು ಬೇಕಾದಷ್ಟು ಕೆಲಸ ಇದೆ. ಕೆಲಸ ಇಲ್ಲದೇ ಅವರು ಏನೇನೋ ಮಾತನಾಡುತ್ತಾರೆ. ಆದರೆ, ನಮಗೆ ಅಭಿವೃದ್ಧಿ ಮಾಡುವ ಕೆಲಸ ಇದೆ. ಸಿಎಂ ಬೊಮ್ಮಾಯಿ ಆಡಳಿತವನ್ನು ಅತ್ಯುತ್ತಮವಾಗಿ ನಡೆಸುತ್ತಿದ್ದಾರೆ ಎಂದು ಇದೇ ವೇಳೆ ಮಾರ್ಕ್ಸ್ ಸಹ ಕೊಟ್ಟರು. ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಯಿಂದ ರಾಜ್ಯದಲ್ಲಿ ರಾಜಕೀಯ ಬದಲಾವಣೆಯಾಗುವುದಿಲ್ಲ. ಅಸಮಾಧಾನಗೊಂಡಿರುವ ಸಚಿವರು ಸಮಾಧಾನವಾಗುತ್ತಾರೆ ಎಂದು ಎಸ್,ಟಿ,ಸೋಮಶೇಖರ್ ಹೇಳಿದರು.
