ಕೊರೊನಾ ವಿಶೇಷ ಪ್ಯಾಕೇಜ್ ಕೊಟ್ಟು ಲಾಕ್ ಡೌನ್ ಮಾಡಿ: ಮಲ್ಲಿಕಾರ್ಜುನ ಖರ್ಗೆ ಕಿಡಿ

ಕಲಬುರಗಿ: ಸೆಮಿ ಲಾಕ್‌ಡೌನ್ ಹಾಗೂ ವೀಕೆಂಡ್ ಕರ್ಫ್ಯೂಗೆ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಈ ಹಿಂದೆ ಸರ್ಕಾರಗಳ ಎಡಬಿಡಂಗಿ ನಿರ್ಧಾರಗಳಿಂದ ಬಡ ಮಧ್ಯಮ ವರ್ಗದ ಜನ ಎಲ್ಲವನ್ನ ಕಳೆದುಕೊಂಡು ಬೀದಿಗೆ ಬೀದಿದ್ದಾರೆ. ಕಾರ್ಮಿಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ನಂತರ ಲಾಕ್‌ಡೌನ್ ಮಾಡಿ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಇದೀಗ ಕಾಂಟ್ರೋವರ್ಸಿ ವಿಚಾರವಾಗಿದೆ, ಏನಾದರು ಮಾತಾಡಿದ್ರೆ ತಪ್ಪಾಗುತ್ತದೆ. ಕಳೆದ ಬಾರಿ ಕೊನೆಯಲ್ಲಿ ಲಾಕ್ ಡೌನ್ ಮಾಡಿದಾಗ ಸಾಕಷ್ಟು ತೊಂದರೆಯಾಗಿತ್ತು. ಲಾಕ್ ಡೌನ್‌ನಿಂದ ಬೀದಿಗೆ ಬಿದ್ದಿದ್ದ ಜನರಿಗೆ ಕೇಂದ್ರ ಸರ್ಕಾರ ನೆರವು ನೀಡಿಲ್ಲ. ಕಾರ್ಮಿಕರ ನಿಧಿ ಹಣ ಕಾರ್ಮಿಕರಿಗೂ ಸಹ ನೀಡದೇ ಇರುವುದು ದುರಂತ ಎಂದು ಹೇಳಿದರು.
ಈಗಲೂ ಕೂಡ ಸಡನ್ ಆಗಿ ಲಾಕ್ ಡೌನ್ ಮಾಡಿದ್ರೆ ದೇಶದ ರಾಜ್ಯದ ಆರ್ಥಿಕತೆಗೆ ದೊಡ್ಡ ಹೊಡೆತ ಬಿಳಲಿದೆ. ಈ ಹಿಂದೆ ಕೇಂದ್ರದ ಎಡಬಿಡಂಗಿ ನಿರ್ಧಾರಗಳಿಂದ ವಿಶ್ವದಲ್ಲಿ ದೇಶದ ಆರ್ಥಿಕ ಗುಣಮಟ್ಟ ಪಾತಾಳಕ್ಕೆ ಕುಸಿದಿತ್ತು. ಬಡ, ಮಧ್ಯಮ ವರ್ಗದ ಜನರು ಎಲ್ಲವನ್ನ ಕಳೆದುಕೊಂಡು ಬೀದಿಗೆ ಬೀಳಲಿದ್ದಾರೆ. ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೇ ಲಾಕ್ ಡೌನ್ ಮಾಡುವುದು ಸರಿಯಲ್ಲ, ಎಲ್ಲದರ ಬಗ್ಗೆ ಚಿಂತನ ಮಂಥನ ಮಾಡಿ ಲಾಕ್ ಡೌನ್ ಜಾರಿ ಮಾಡಬೇಕು. ಯಾವ ಯಾವ ವಲಯಗಳಿಗೆ ರಿಯಾಯಿತಿ ಕೊಡಬೇಕು ಎನ್ನುವುದು ನಿರ್ಧರಿಸಬೇಕು ಎಂದರು.
ಕೋವಿಡ್‌ನಿಂದ ಮೃತಪಟ್ಟವರ ಕುರಿತು ಕೇಂದ್ರ ಸರ್ಕಾರ ನಕಲಿ ವರದಿ ನೀಡಿದೆ. ಕೋವಿಡ್ ವಿಚಾರವಾಗಿ ಕೇಂದ್ರ ಸರ್ಕಾರ ಅನುಕಂಪ ಪಡೆಯಲು ಭರ್ಜರಿ ಪ್ರಚಾರ ಪಡೆಯುತ್ತಿದೆ ಎಂದು ವಾಗ್ಧಾಳಿ ನಡೆಸಿದರು.
ಉತ್ತರ ಪ್ರದೇಶದಲ್ಲಿ ಸತ್ತರೆ ಹೆಣ ಸುಡುವುದಕ್ಕೆ ಕಟ್ಟಿಗೆ ಸಿಕ್ಕಿಲ್ಲ, ಹುಳುವುದಕ್ಕೆ ಜಮೀನು ಸಿಕ್ಕಿಲ್ಲ, ರಾಶಿ ರಾಶಿ ಹೆಣಗಳನ್ನ ಗಂಗಾ ನದಿಯಲ್ಲಿ ಬಿಸಾಕಿದ್ದು ಇದಕ್ಕೆ ಸಾಕ್ಷಿ. ಕಾರ್ಮಿಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದರು.
