Breaking NewsLatestಜಿಲ್ಲಾ ಸುದ್ದಿರಾಜ್ಯರಾಮನಗರಸುದ್ದಿ

ಬೆಂಗಳೂರು-ಚೆನ್ನೈ ನಡುವೆ ಬುಲಟ್ ಟ್ರೈನ್ ಹಳಿ ನಿರ್ಮಾಣಕ್ಕೆ ಸರ್ವೇ ಕಾರ್ಯ ಆರಂಭ

ರಾಮನಗರ: ಕಳೆದ ತಿಂಗಳು ರಾಮನಗರ-ಚನ್ನಪಟ್ಟಣದಲ್ಲಿ ಬುಲೆಟ್ ಟ್ರೈನ್ ಸಂಚಾರದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಬಗ್ಗೆ ಸ್ಥಳೀಯ ಜನರಲ್ಲಿ ಕುತೂಹಲವು ಮೂಡಿತ್ತು. ಈ ಬಗ್ಗೆ ಈಗ ಬುಲೆಟ್ ಟ್ರೈನ್ ಇಲ್ಲಿ ಓಡಾಡುವುದು ಖಚಿತವಾಗಿದೆ.

ಚನ್ನಪಟ್ಟಣ ತಾಲೂಕಿನ ಕೂರಣಗೆರೆ ಗ್ರಾಮದಲ್ಲಿ ಬುಲೆಟ್ ಟ್ರೈನ್ ಮಾರ್ಗದ ಸರ್ವೇ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದು ಈ ನಿಟ್ಟಿನಲ್ಲಿ ರೇಷ್ಮೆನಾಡಿನಲ್ಲಿ ಬುಲೆಟ್ ಟ್ರೈನ್ ಸಂಚಾರ ಮಾಡುವುದು ಖಚಿತವಾದಂತಾಗಿದೆ ಎಂಬ ಮಾತುಗಳು ಕೇಳಿಬಂದಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ ಸ್ವದೇಶಿ ನಿರ್ಮಿತ ಬುಲೆಟ್ ಟ್ರೈನ್ ಸೇವೆಯನ್ನು ಪ್ರಾರಂಭಿಸುವ ಉದ್ದೇಶ ಹೊಂದಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ ನ್ಯಾಷನಲ್ ಹೈಸ್ಪೀಡ್ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ ಅನ್ನು ಸ್ಥಾಪಿಸಿದೆ. ಈ ಸಂಸ್ಥೆಯ ಮೂಲಕ ದೇಶದಲ್ಲಿ 8 ಬುಲೆಟ್ ರೈಲು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ಯೋಜನೆಯಲ್ಲಿ ಚೆನೈ-ಬೆಂಗಳೂರು-ಮೈಸೂರು ಮಾರ್ಗದಲ್ಲಿ ಸಂಚರಿಸುವ ರೈಲು ಯೋಜನೆ ಸಹ ಒಂದಾಗಿದೆ. ಈ ಮೂರು ಪ್ರಮುಖ ನಗರಗಳ ನಡುವೆ ಸುಮಾರು 435 ಕಿಮೀ ದೂರ ಬುಲೆಟ್ ರೈಲು ಸಂಚಾರ ಮಾಡಲಿದ್ದು, ಇದಕ್ಕಾಗಿ ಪ್ರತ್ಯೇಕ ರೈಲ್ವೆ ಮಾರ್ಗ ಹಾಗೂ ರೈಲ್ವೆ ನಿಲ್ದಾಣಗಳ ನಿರ್ಮಾಣಕ್ಕೆ ಸಂಸ್ಥೆ ಮುಂದಾಗಿದೆ.

ಚನ್ನಪಟ್ಟಣ ತಾಲೂಕಿನಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಅವಳಿ ನಗರಗಳಿಗೂ ಅನುಕೂಲವಾಗುವಂತೆ ಚನ್ನಪಟ್ಟಣ ತಾಲೂಕಿನ ಬ್ರಹ್ಮಣೀಪುರ-ತಗಚಗೆರೆ ಬಳಿ ರೈಲ್ವೆ ನಿಲ್ದಾಣವನ್ನು ಸಹ ಮಾಡಲಾಗುತ್ತದೆ. ಈ ಮೂಲಕ ಗ್ರಾಮೀಣ ಭಾಗದಲ್ಲಿ ಬುಲೆಟ್ ಟ್ರೈನ್ ಸಂಚಾರ ಮಾಡುತ್ತದೆ. ಇದೀಗ ಅದಕ್ಕೆ ಪುಷ್ಟಿ ನೀಡುವಂತೆ ಚನ್ನಪಟ್ಟಣ ತಾಲೂಕಿನ ಕೂರಣಗೆರೆ ಗ್ರಾಮದಲ್ಲಿ ಬುಲೆಟ್ ಟ್ರೈನ್ ಸಂಚಾರಕ್ಕಾಗಿ ಕೂರಣಗೆರೆ-ತೂಬಿನಕೆರೆ ಮಾರ್ಗದ ರಸ್ತೆಯನ್ನು ಸರ್ವೆ ಮಾಡಿದ್ದು, ರಸ್ತೆಯಲ್ಲಿ ಸುಮಾರು 150 ಅಡಿಗಳನ್ನು ಅಳತೆ ಮಾಡಿ ಕಲ್ಲುಗಳನ್ನು ನೆಟ್ಟು ಸ್ಥಳ ಗುರುತಿಸಲಾಗಿದೆ.

ಸೇತುವೆ ನಿರ್ಮಾಣಕ್ಕೆ ಸರ್ವೇ:

ಚೆನ್ನೈನಿಂದ ಬೆಂಗಳೂರು ಮಾರ್ಗದಲ್ಲಿ ಮೈಸೂರು ಸಂಚಾರ ಮಾಡುವ ಬುಲೆಟ್ ಟ್ರೈನ್ ಚನ್ನಪಟ್ಟಣ ತಾಲೂಕಿನ ಮಲ್ಲುಂಗೆರೆ, ದೊಡ್ಡನಹಳ್ಳಿ, ಬ್ರಹ್ಮಣೀಪುರ, ತಗಚಗೆರೆ ಮಾರ್ಗದಲ್ಲಿ ಸಾಗಿ ಕೂಡ್ಲೂರು, ಚಕ್ಕೆರೆ ಕೂರಣಗೆರೆ ಕುಕ್ಕೂರು ಮಾರ್ಗದಲ್ಲಿ ಮದ್ದೂರು ಮೂಲಕ ನೇರವಾಗಿ ಮೈಸೂರು ಸೇರುವ ನಿಟ್ಟಿನಲ್ಲಿ ನೇರ ಪಥದಲ್ಲಿ ಸಂಚಾರ ಮಾಡುವ ಮಾರ್ಗವನ್ನು ಗುರುತಿಸಿದ್ದಾರೆ ಎಂದು ಹೇಳಲಾಗಿದ್ದು, ರಾಮನಗರ ತಾಲೂಕಿನಲ್ಲಿ ಎಲ್ಲಿ ಜಾಗ ಗುರುತಿಸಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ.

ಬುಲೆಟ್ ಟ್ರೈನ್ ಸಂಚಾರ ಮಾಡುವ ಮಾರ್ಗದಲ್ಲಿನ ಗ್ರಾಮೀಣ ಭಾಗದ ಮುಖ್ಯ ರಸ್ತೆಗಳನ್ನು ಗುರುತಿಸಿ ಅಲ್ಲಿ ವಾಹನಗಳ ಸಂಚಾರಕ್ಕೆ ಮೇಲ್ಸೇತುವೆ ಅಥವಾ ಅಂಡರ್ ಪಾಸ್ ನಿರ್ಮಾಣ ಮಾಡುವ ಉದ್ದೇಶದಿಂದ ಇದೀಗ ರಸ್ತೆಗಳನ್ನು ಮಾತ್ರ ಗುರುತಿಸಿ ಸರ್ವೆ ಮಾಡಿದ್ದಾರೆ ಎಂಬ ಮಾತುಗಳು ಅಧಿಕಾರಿಗಳಿಂದಲೇ ಕೇಳಿಬಂದಿದೆ.

ಎರಡು ಮಾರ್ಗ ಗುರುತಿಸಲು ಸರ್ವೆ:

ಚೆನ್ನೈನಿಂದ ಮೈಸೂರು ಮಾರ್ಗದಲ್ಲಿ ಸಂಚಾರ ಮಾಡುವ ಬುಲೆಟ್ ಟ್ರೈನ್ ಮಾರ್ಗದ ಸರ್ವೇ ಕಾರ್ಯಕ್ಕೆ ಬೆಂಗಳೂರಿನಿಂದ ಮೈಸೂರುವರೆಗೆ ಒಂದು ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಹೇಳಲಾಗಿದ್ದು. ಇದರ ಜೊತೆಗೆ ಬೆಂಗಳೂರು-ಮೈಸೂರು ಮಾರ್ಗದಲ್ಲಿನ ಹೆದ್ದಾರಿಯ ಎಡ ಮತ್ತು ಬಲ ಭಾಗದಲ್ಲಿ ಬುಲೆಟ್ ಟ್ರೈನ್ ಸಂಚಾರದ ಮಾರ್ಗಕ್ಕೆ ಸರ್ವೆ ಮಾಡಲು ಸೂಚನೆ ನೀಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ನಿಟ್ಟಿನಲ್ಲಿ ಯಶವಂತಪುರದಿಂದ ಚಿಕ್ಕಮಂಡ್ಯ ಮಾರ್ಗದಲ್ಲಿ ಅಂದರೆ ತಾಲೂಕಿನ ಕೆಂಗಲ್ ಮಾರ್ಗದಲ್ಲಿ ಸಾಗಿ ಪಟ್ಲು, ಮಂಕುಂದ ಮುದಗೆರೆ, ಕೋಲೂರು ಮಾರ್ಗದಲ್ಲಿ ಸರ್ವೆ ಮಾಡಲಾಗುತ್ತಿದೆ. ಆದರೆ ಈ ಮಾರ್ಗದಲ್ಲಿ ಹೆಚ್ಚು (ತಿರುವು) ಇರುವ ನಿಟ್ಟಿನಲ್ಲಿ ಬ್ರಹ್ಮಣೀಪುರ-ತಗಚಗೆರೆ ಮಾರ್ಗವೇ ನೇರವಾಗಿದ್ದು ಮಾರ್ಗಕ್ಕೆ ಅನುಕೂಲವಾಗಲಿದೆ ಎಂಬ ಮಾತುಗಳು ಅಧಿಕಾರಿಗಳದ್ದು.

ಒಂದು ಸಾವಿರ ಅಡಿ ಭೂ ಸ್ವಾಧೀನ:

ಬುಲೆಟ್ ಟ್ರೈನ್ ಮಾರ್ಗದಲ್ಲಿ ಚೀನಾದಲ್ಲಿ ಇರುವಂತೆ ಭದ್ರತೆಯ ದೃಷ್ಠಿಯಿಂದ ನಿರ್ಮಾಣ ಮಾಡಿದರೆ ಜೋಡಿ ರೈಲ್ವೆ ಮಾರ್ಗದ ನಿರ್ಮಾಣ ಮಾಡಿ ಬಳಿಕ ರೈಲು ಹಳಿಯಿಂದ ಅಕ್ಕಪಕ್ಕದಲ್ಲಿ ಸುಮಾರು 250 ಅಡಿಯಷ್ಟ ದೂರದಲ್ಲಿ ಬೇಲಿಯನ್ನು ನಿರ್ಮಾಣ ಮಾಡಿ ರೈಲ್ವೆ ಹಳಿಯ ಮಾರ್ಗದಲ್ಲಿ ಯಾರೂ ಸಂಚಾರ ಮಾಡದಂತೆ ಭದ್ರತೆ ಮಾಡಲು ಕ್ರಮ ಕೈಗೊಳ್ಳಬೇಕಿದೆ. ಅದರಂತೆ ಬುಲೆಟ್ ಟ್ರೈನ್ ಸಂಚಾರಕ್ಕೆ ಮುಂದಾದರೆ ಇಲ್ಲಿ ಸುಮಾರು ಒಂದು ಸಾವಿರ ಅಡಿಗಳ ಅಗಲದ ಭೂಮಿಯ ಅವಶ್ಯಕತೆ ಇದೆ ಎನ್ನಲಾಗುತ್ತಿದೆ.

ರೈತರಿಗೆ ಸಂಕಷ್ಟ:

ಬುಲೆಟ್ ಟ್ರೈನ್ ಬಂದರೆ ಟ್ರೈನ್ ಹಳಿಯಲ್ಲೇ ವಿದ್ಯುತ್ ಸಂಪರ್ಕ (ಮೆಟ್ರೋ ಮಾದರಿಯಲ್ಲಿ) ನೀಡಲಾಗುತ್ತದೆ ಎಂಬ ಮಾತುಗಳಿದ್ದು, ಈ ನಿಟ್ಟಿನಲ್ಲಿ ರೈಲ್ವೇ ಮಾರ್ಗದಲ್ಲಿ ಸೂಕ್ತ ಭದ್ರತೆ ಒದಗಿಸಲಾಗುತ್ತದೆ. ಒಂದು ವೇಳೆ ರೈತರ ಜಮೀನು ಸ್ವಾಧೀನ ಮಾಡಿಕೊಳ್ಳುವ ವೇಳೆ ರೈತರ ಜಮೀನು ರೈಲ್ವೇ ಮಾರ್ಗದ ಎರಡು ಭಾಗದಲ್ಲಿ ಉಳಿದರೆ ಆ ರೈತ ಕೃಷಿ ಚಟುವಟಿಕೆ ಮಾಡುವುದು ಕಷ್ಟಕರವಾಗಲಿದೆ ಎಂಬ ಮಾತುಗಳು ರೈತರಲ್ಲಿ ಕೇಳಿಬಂದಿದೆ.

ಕಾರಣ ರೈಲ್ವೆ ಮಾರ್ಗದ ಒಂದು ಭಾಗದ ಜನ ಮಾರ್ಗವನ್ನು ದಾಟಿ ಇನ್ನೊಂದು ಮಾರ್ಗದಲ್ಲಿನ ಜಮೀನಿಗೆ ಹೋಗಲು ಕಷ್ಟವಾಗುತ್ತದೆ. ಕೆಲವೊಮ್ಮೆ ಬೇರೆ ಗ್ರಾಮ ಬಳಸಿಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಮಾತುಗಳು ಕೇಳಿಬಂದಿವೆ.

ಇದಲ್ಲದೇ, ಗ್ರಾಮೀಣ ಭಾಗದಲ್ಲಿ ನಕಾಶೆ ರಸ್ತೆಗಳು ಹೆಚ್ಚಾಗಿದೆ. ಆದರೆ ಬುಲೆಟ್ ಟ್ರೈನ್ ಸಂಚಾರ ಮಾರ್ಗ ನಿರ್ಮಾಣ ಮಾಡಿದರೆ ಗ್ರಾಮೀಣ ಭಾಗದ ಮುಖ್ಯ ರಸ್ತೆಗಳಿಗೆ ಮಾತ್ರ ಮೇಲ್ಸೇತುವೆ ಅಥವಾ ಅಂಡರ್ ಪಾಸ್ ನಿರ್ಮಾಣ ಮಾಡಲಾಗುತ್ತದೆ. ಆದರೆ ಮಾರ್ಗದಲ್ಲಿ ಬರುವ ನಕಾಶೆ ರಸ್ತೆಗಳು, ಕಚ್ಚಾ ರಸ್ತೆಗಳಲ್ಲಿ ಯಾವುದೇ ಅಂಡರ್ ಪಾಸ್ ನಿರ್ಮಾಣದ ಬಗ್ಗೆ ಅಧಿಕಾರಿಗಳು ಸರ್ವೇ ಮಾಡಿಲ್ಲ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಕೃಷಿಕರಿಗೆ ಹೆಚ್ಚು ಅನುಕೂಲವಾಗಿರುವ ನಕಾಶೆ ರಸ್ತೆಗಳು ಹಾಗೂ ಕಚ್ಚಾ ರಸ್ತೆಗಳು ಮಾಯವಾಗುವ ಮುನ್ಸೂಚನೆ ಇದೆ.

ಆದರೂ ಚೀನಾದಲ್ಲಿ ರೈತರ ಕೃಷಿ ಚಟುವಟಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಂಡರ್ ಪಾಸ್‌ಗಳನ್ನು ನಿರ್ಮಾಣ ಮಾಡಲಾಗಿದ್ದು ಆರೀತಿ ನಮ್ಮಲ್ಲಿ ಮಾಡಿದರೆ ಮಾತ್ರ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಕಾಶೆ ಮತ್ತು ಕಚ್ಚಾ ರಸ್ತೆಗಳು ಉಳಿಯುತ್ತವೆ ಎಂದು ಕೂರಣಗೆರೆ ಗ್ರಾಮದ ರೈತ ರವಿ ಅಭಿಪ್ರಾಯ.

ಮುಂದಿನ ದಿನಗಳಲ್ಲಿ ಹೆಲಿಕ್ಯಾಫ್ಟರ್ ಮೂಲಕ ಡ್ರೋನ್ ಸರ್ವೇ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಾರೆ ರಾಮನಗರ-ಚನ್ನಪಟ್ಟಣ ತಾಲೂಕಿನಲ್ಲಿ ಬುಲೆಟ್ ಟ್ರೈನ್ ಸಂಚಾರ ಮಾಡುವುದು ಖಚಿತವಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button