ಕಾಂಗ್ರೆಸ್,ಬಿಜೆಪಿ ಎರಡಕ್ಕೂ ಪ್ರಚಾರ ಮಾಡಿದ್ದೆ: ಜಿ.ಟಿ.ದೇವೇಗೌಡ

ಮೈಸೂರು : ಜೆಡಿಎಸ್ ಹಾಳಾಗಲಿ ಎಂದು ನಾನು ಯಾವತ್ತೂ ಹೇಳಿಲ್ಲ. ಜೆಡಿಎಸ್ ಪಕ್ಷ ಉಳಿಯಬೇಕು ಎಂಬುದು ನನ್ನ ಬಯಕೆ ಎಂದು ಶಾಸಕ ಜಿಟಿ,ದೇವೇಗೌಡ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿಧಾನ ಪರಿಷತ್ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ. ನಾನು ಜೊತೆಯಲಿದ್ದು ಮೋಸ ಮಾಡಿದ್ರೆ ತಾಯಿಗೆ ಮೋಸ ಮಾಡಿದಂತೆ. ನಾನು ಎರಡು ವರ್ಷಗಳಿಂದ ದೂರ ಉಳಿದಿದ್ದೆ. ಹೀಗಾಗಿ, ಉತ್ತರ ಕೊಡಲು ನಾನೇನು ಚುನಾವಣೆಗೆ ನಿಂತಿರಲಿಲ್ಲ ಎಂದು ಕುಟುಕಿದ್ದಾರೆ.
ನಾನು ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳ ಪರವಾಗಿ ಪ್ರಚಾರ ಮಾಡಿದ್ದೆ. ಮೇಲ್ಮನೆ ಚುನಾವಣೆ ಫಲಿತಾಂಸದಿಂದ ನನ್ನ ವರ್ಚಸ್ಸಿಗೇನು ಧಕ್ಕೆ ಇಲ್ಲ ಎಂದರು. ನಾನು ಇಡೀ ಜಿಲ್ಲೆಗೆ ಹೋಗಲು ಸಾಧ್ಯವಾಗಲಿಲ್ಲ. ಕಳೆದ ಬಾರಿ ಸಂದೇಶ್ ನಾಗರಾಜ್ ಪರವಾಗಿ ಇಡೀ ಜಿಲ್ಲೆಗೆ ಹೋಗಿ ಪ್ರಚಾರ ಮಾಡಿದ್ದೆ. ಆದರೆ, ಈ ಬಾರಿ ಹುಣಸೂರು, ಚಾಮುಂಡೇಶ್ವರಿ ಕ್ಷೇತ್ರಕ್ಕಷ್ಟೇ ಹೋಗಿದ್ದೆ. ಮತದಾರರ ತೀರ್ಪಿಗೆ ನಾವೆಲ್ಲಾ ತಲೆಬಾಗಬೇಕಾಗುತ್ತೆ. ಬಿಜೆಪಿ ಹಾಗೂ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದ್ದೇನೆ ಎಂದರು.
ನೆಲ, ಜನ ವಿಚಾರದಲ್ಲಿ ರಾಜ್ಯ, ಕೇಂದ್ರದ ಗಮನ ಸೆಳೆಯೋದು ವಿರೋಧ ಪಕ್ಷದ ಕರ್ತವ್ಯ. ಅದನ್ನ ಕಾಂಗ್ರೆಸ್ ಪಕ್ಷ ಮಾಡುತ್ತಿದೆ, ಅವರಿಗೆ ಶುಭವಾಗಲಿ. ಯಾವುದೇ ರೈತ ಪರ ಹೋರಾಟಗಳಿಗೆ ನನ್ನ ಬೆಂಬಲ ಇದ್ದೇ ಇರುತ್ತೆ ಎಂದರು.
ನಕಲಿ ನಂದಿನಿ ತುಪ್ಪ ಪ್ರಕರಣದ ತಪಿತಸ್ಥರಿಗೆ ಶಿಕ್ಷೆಯಾಗಬೇಕು. ಸಿಎಂ ಜೊತೆ ಚರ್ಚಿಸಿ ಸಿಓಡಿ ತನಿಖೆಗೆ ಒತ್ತಾಯಿಸುತ್ತೇನೆ. ತಪಿತಸ್ಥರನ್ನ ಕೂಡಲೇ ಅರೆಸ್ಟ್ ಮಾಡಿಸುವಂತೆ ಡಿ.ಜಿ .ಪಿ ಪ್ರವೀಣ್ ಸೂದ್ ಅವರಿಗೆ ಫೋನ್ ಮಾಡಿ ಹೇಳಿದ್ದೆ ಎಂದು ಅವರು ಹೇಳಿದರು.
ಅಂದು ಮೈಮುಲ್ ಎಂಡಿ, ಎಸ್ಪಿಗೂ ಫೋನ್ ಮಾಡಿ ಮಾತಾಡಿದ್ದೇನೆ. ನಂದಿನಿ ತುಪ್ಪವನ್ನ ನಮ್ಮ ಮನೆಯಲ್ಲೂ ಕೂಡ ಬಳಸುತ್ತಾರೆ. ಇಂತಹ ತುಪ್ಪವನ್ನ ನಕಲಿ ಮಾಡಲು ಮುಂದಾಗಿರುವವರಿಗೆ ಶಿಕ್ಷೆಯಾಗಲೇ ಬೇಕು ಎಂದು ಜಿಟಿಡಿ ಆಗ್ರಹಿಸಿದರು.



